Homeಇದೀಗ ಬಂದ ಸುದ್ದಿಯಡಿಯೂರಪ್ಪನವರ ಅಭಿಮಾನೋತ್ಸವದ ಅವಧಿ ಬದಲು

ಯಡಿಯೂರಪ್ಪನವರ ಅಭಿಮಾನೋತ್ಸವದ ಅವಧಿ ಬದಲು

Yediyurappa's Abhiman Utsava timing adjusted

ಚಿತ್ರದುರ್ಗ,ಮೇ 6- ಇದೇ 9ರಂದು ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪನವರ ಅಭಿಮಾನೋತ್ಸವ ಕಾರ್ಯಕ್ರಮವು ಬೆಳಿಗ್ಗೆ ಬದಲಿಗೆ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆವರೆಗೆ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಕಾರ್ಯಕ್ರಮವನ್ನು ಬೆಳಿಗ್ಗೆ 12 ಗಂಟೆಯಿಂದ ನಡೆಸಲು ಉದ್ದೇಶಿಸಿತ್ತು. ಕೆಲವು ಕಾರಣಗಳಿಂದ ಸಮಯದಲ್ಲಿ ಕೆಲ ಬದಲಾವಣೆಯಾಗಿದೆ. ಈಗ ನಿಗದಿಯಾಗಿರುವಂತೆ ಬಿಎಸ್‌‍ವೈ ಅಭಿಮಾನೋತ್ಸವವು ಬೆಳಿಗ್ಗೆಯ ಬದಲಾಗಿ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ನಡೆಯಲಿದೆ. 3.45ರ ವೇಳೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.

ಅಪ್ರತಿಮ ಹೋರಾಟಗಾರ, ರೈತ ನಾಯಕ ಬಿ.ಎಸ್‌‍.ಯಡಿಯೂರಪ್ಪ ಅವರ ರಾಜಕೀಯ ಜೀವನದ 50 ವರ್ಷಗಳ ಪಯಣ ಪೂರೈಸಿದ ಸಂದರ್ಭದಲ್ಲಿ ಬಿ.ಎಸ್‌‍.ವೈ ಅವರ ಅಭಿಮಾನೋತ್ಸವವನ್ನು ನಡೆಸಲಾಗುತ್ತಿದೆ. ಈ ಸಂಬಂಧ ವ್ಯಾಪಕ ಸಿದ್ಧತೆ ನಡೆದಿದೆ. 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಬರಲಿದ್ದಾರೆ ಎಂದರು.

ಪ್ರತಿ ಜಿಲ್ಲೆಗೆ ಹೋಗಿ ಸ್ವಾಮೀಜಿಗಳಿಗೆ ಆಮಂತ್ರಣ ಪತ್ರ ನೀಡಲು ಯೋಜಿಸಿದ್ದೆವು. ಸಮಯದ ಅಭಾವದಿಂದ ಎಲ್ಲರ ಭೇಟಿ ಸಾಧ್ಯವಾಗಿಲ್ಲ. ನಾಡಿನ ಎಲ್ಲ ಹರಗುರು ಚರಮೂರ್ತಿಗಳು, ಮಠಾಧೀಶರು, ಸ್ವಾಮೀಜಿಗಳು 9ರಂದು ಐತಿಹಾಸಿಕ ಅಭಿಮಾನೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು. ಎಲ್ಲ ಸಮಾಜದ ಗುರುಗಳು ಬಂದು ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಅಭಿಮಾನಿಗಳು ಆಗಮಿಸಲು 10 ಸಾವಿರ ಬಸ್ಸುಗಳನ್ನು ಬುಕಿಂಗ್‌ ಮಾಡಲಾಗಿದೆ. 45ರಿಂದ 50 ಸಾವಿರ ಕಾರು ಮತ್ತಿತರ ಚತುಶ್ಚಕ್ರ ವಾಹನಗಳು ಬರಲಿವೆ. ನಮ ನಿರೀಕ್ಷೆಗೂ ಮೀರಿ ಸ್ಪಂದನೆ ಲಭಿಸುತ್ತಿದೆ. ಸ್ವಾಮೀಜಿಗಳು, ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2 ಗ್ರಂಥಗಳ ಬಿಡುಗಡೆ- ಗೋವಿಂದ ಕಾರಜೋಳ :
ಮಾಜಿ ಡಿಸಿಎಂ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿ, ಬಿ.ಎಸ್‌‍.ಯಡಿಯೂರಪ್ಪ ಅವರ 50 ವರ್ಷಗಳ ಸಮಾಜಸೇವೆ, ಜೀವನಚರಿತ್ರೆಯನ್ನು ನಾವು ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ಒಂದು ಸಾಂಸ್ಕೃತಿಕ ಹಬ್ಬದ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದೇವೆ. ಅವರ ಜೀವನಚರಿತ್ರೆ ಮತ್ತು ಸದನದಲ್ಲಿ ಯಡಿಯೂರಪ್ಪನವರು ಎಂಬ ಸಂಬಂಧ ಕೆಂದಾವರೆ- ಕಮಲದಲ್ಲಿ ಅರಳಿದ ಹೂ, ಸದನದಲ್ಲಿ ಶಿಕಾರಿ ಎಂಬ 2 ಗ್ರಂಥಗಳನ್ನು ಅಂದು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

8ರಂದು ಸಂಜೆ ಯಡಿಯೂರಪ್ಪನವರ ಪುರಪ್ರವೇಶ ನಡೆಯಲಿದೆ. ಇದನ್ನು ನಾಡಿನ ಸಾಂಸ್ಕೃತಿಕ ಹಬ್ಬದ ರೀತಿಯಲ್ಲಿ ಮಾಡಲು ತಯಾರಿ ಮಾಡಿದ್ದೇವೆ. 24 ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಿದರು.

RELATED ARTICLES

Latest News