Homeರಾಜ್ಯಹೈಕಮಾಂಡ್‌ ಹೇಳಿದರೆ 5 ವರ್ಷ ಪೂರ್ಣಗೊಳಿಸುತ್ತೇನೆ : ಸಿಎಂ

ಹೈಕಮಾಂಡ್‌ ಹೇಳಿದರೆ 5 ವರ್ಷ ಪೂರ್ಣಗೊಳಿಸುತ್ತೇನೆ : ಸಿಎಂ

I will complete 5 years if the high command asks: CM

ಮೈಸೂರು, ಮೇ 6- ನಾಯಕತ್ವ ಬದಲಾವಣೆ ಸಂಬಂಧಪಟ್ಟಂತೆ ಹೈಕಮಾಂಡ್‌ ಹೇಳಿದಂತೆ ಕೇಳುತ್ತೇನೆ. ರಾಹುಲ್‌ಗಾಂಧಿ ಸಮಯ ಕೊಟ್ಟರೆ ದೆಹಲಿಗೆ ಹೋಗಿ ಭೇಟಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೇ ಕೇಳಲಾದ ಪ್ರಶ್ನೆಗಳಿಗೆ ಸಿಡಿಮಿಡಿಗೊಂಡರು. ತಿರುಗಿಸಿ, ಮುರುಗಿಸಿ ಯಾವ ರೀತಿ ಕೇಳಿದರೂ ತಮದು ಒಂದೇ ರೀತಿಯ ಉತ್ತರ. ಹೈಕಮಾಂಡ್‌ ಹೇಳಿದಂತೆ ನಡೆದುಕೊಳ್ಳುತ್ತೇನೆ. ಹೈಕಮಾಂಡ್‌ ಹೇಳಿದರೆ, 5 ವರ್ಷ ಪೂರೈಸುತ್ತೇನೆ. ಇಲ್ಲವಾದರೆ ಅವರು ಹೇಳಿದಂತೆ ಕೇಳುತ್ತೇನೆ ಎಂದರು.

ದೆಹಲಿಗೆ ಕರೆದರೆ ಹೋಗುತ್ತೇನೆ. ನಾನಾಗಿಯೇ ಹೋಗಬೇಕಾದರೆ ರಾಹುಲ್‌ ಗಾಂಧಿ ಸಮಯ ನೀಡಬೇಕು. ಆದರೆ ತಾವು ಈವರೆಗೂ ಅವರ ಸಮಯ ಕೇಳಲಿಲ್ಲ ಎಂದರು.ರಾಹುಲ್‌ ಗಾಂಧಿ ಸಮಯಕೊಟ್ಟು ದೆಹಲಿಗೆ ತಾವು ಭೇಟಿ ನೀಡಿದರೆ, ಸಚಿವ ಸಂಪುಟ ಪುನರ್‌ ರಚನೆ ಸೇರಿದಂತೆ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

5 ವರ್ಷ ಅವಧಿ ಪೂರ್ಣಗೊಳಿಸುವ ವಿಶ್ವಾಸಹೊಂದಿರುವ ಬಗ್ಗೆ ಪ್ರಶ್ನಿಸುವಾಗ ಎಲ್ಲಾ ನಿರ್ಣಯಗಳನ್ನು ಹೈಕಮಾಂಡ್‌ ತೆಗೆದುಕೊಳ್ಳಬೇಕು. ಗೊಂದಲಗಳನ್ನು ಬಗೆಹರಿಸುವಂತೆ ಸಚಿವರು ಒತ್ತಾಯಿಸುತ್ತಿರುವುದು ಅವರ ವಯಕ್ತಿಕ ಅಭಿಪ್ರಾಯ ಎಂದರು.ಜನ ಮನ್ನಣೆ: ಕಾಂಗ್ರೆಸ್‌‍ ಸರ್ಕಾರದ ಯೋಜನೆಗಳು ಜನ ಮೆಚ್ಚುಗೆಗೆ ಪಾತ್ರವಾಗಿದ್ದು, ಜನಾಶೀರ್ವಾದದಿಂದ ರಾಜ್ಯದ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌‍ ಪಕ್ಷಕ್ಕೆ ಅಭೂತಪೂರ್ವ ಗೆಲುವು ಸಾಧಿಸಲು ಸಾಧ್ಯವಾಗಿದೆ. ಇದು ರಾಜ್ಯದ ಜನರು ಕಾಂಗ್ರೆಸ್‌‍ ಸರ್ಕಾರದ ಯೋಜನೆಗಳನ್ನು ಮೆಚ್ಚಿಕೊಂಡಿರುವುದನ್ನು ಸೂಚಿಸುತ್ತದೆ.

ವಿಪಕ್ಷಗಳ ಯಾವುದೇ ತಂತ್ರಗಾರಿಕೆ ನಡೆಯುವುದಿಲ್ಲ. ಅವರು ಕೇವಲ ಕುತಂತ್ರಗಳನ್ನಷ್ಟೇ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.ಸ್ಥಳೀಯ ಸಂಸ್ಥೆಗಳ ಚುನಾವಣೆ: ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಬಗ್ಗೆ ಉತ್ತರಿಸಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸಧ್ಯದಲ್ಲಿಯೇ ನಡೆಸಲಾಗುವುದು ಎಂದರು.

ಶೃಂಗೇರಿಯಲ್ಲಿ ಕ್ರಿಮಿನಲ್‌ ಸಂಚು:
ಶೃಂಗೇರಿಯ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿ, ಮತಎಣಿಕೆ ವಿಚಾರದಲ್ಲಿ ಬಿಜೆಪಿ ಕ್ರಿಮಿನಲ್‌ ಸಂಚು ನಡೆಸಿದೆ. ರಾಜೇಗೌಡರಿಗೆ ಬಿದ್ದಿದ್ದ 255 ಅರ್ಹವಾಗಿದ್ದ ಮತಗಳನ್ನು ಅನರ್ಹ ಮಾಡಲಾಗಿದೆ. ಮತ ಎಣಿಕೆಯಾಗುವಾಗ ಬಿಜೆಪಿ ಸರ್ಕಾರವಿತ್ತು. ಬಿಜೆಪಿಯವರು ಮತ್ತು ಸಿಬ್ಬಂದಿ ಮೂಲಕ ಮತಪತ್ರಗಳನ್ನು ತಿದ್ದಲಾಗಿದ್ದು, ಇದು ಕ್ರಿಮಿನಲ್‌ ಸಂಚು. ಆದ್ದರಿಂದ ಶೃಂಗೇರಿ ಫಲಿತಾಂಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದರು.

ಕೇಂದ್ರ ಉತ್ತರದಾಯಿತ್ವ:
ರೈಲ್ವೆ ಇಲಾಖೆಯ ಹುದ್ದೆಗಳಿಗೆ ಕನ್ನಡಿಗರನ್ನು ಪರಿಗಣಿಸಲಾಗುತ್ತಿಲ್ಲ, ರಾಜ್ಯಸರ್ಕಾರ ಇದರಲ್ಲಿ ಮಧ್ಯಪ್ರವೇಶಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ನಡೆಸುತ್ತಿದ್ದು, ಅವರೇ ಉತ್ತರ ನೀಡಬೇಕು. ಕನ್ನಡದಲ್ಲಿ ಪರೀಕ್ಷೆ ನಡೆಸದೇ ಇರುವುದು ಕೇಂದ್ರ ಸರ್ಕಾರಕ್ಕೆ ಕನ್ನಡಿಗರ ಮೇಲಿರುವ ಧೋರಣೆಯನ್ನು ತೋರಿಸುತ್ತದೆ ಎಂದರು.

RELATED ARTICLES

Latest News