Homeರಾಜ್ಯಮೇ.9ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಮೇ.9ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

Heavy rain forecast in various districts of the state till May 9

ಬೆಂಗಳೂರು,ಮೇ 6- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೇ 9ರವರೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗಾಳಿಯ ವೇಗ ಹೆಚ್ಚಿರಲಿದ್ದು, ಹೈ ಅಲರ್ಟ್‌ ಘೋಷಿಸಲಾಗಿದೆ. ದಕ್ಷಿಣ ಬಂಗಾಳಕೊಲ್ಲಿ ಮತ್ತು ಹಿಂದೂ ಮಹಾಸಾಗರದಲ್ಲಿ ವಾಯುಭಾರ ಕುಸಿತದ ಲಕ್ಷಣಗಳು ಕಂಡುಬಂದಿವೆ. ಇದು ಮುಂಗಾರು ಮಳೆಯ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಬಹುದು.

ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ವೇಳೆ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಇಲ್ಲಿಯೂ ಸಹ 40-50 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಪ್ರದೇಶಗಳಲ್ಲಿ ಸಣ್ಣ ವ್ಯಾಪ್ತಿಯ ತುಂತುರು ಮಳೆಯ ಸಾಧ್ಯತೆ ಇದೆ. ಉತ್ತರ ಕನ್ನಡ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಬಿಸಿಲು ಮತ್ತು ಮೋಡ ಮಿಶ್ರಿತ ವಾತಾವರಣವಿರುತ್ತದೆ.

ದಕ್ಷಿಣ ಕನ್ನಡ ಮತ್ತು ಉಡುಪಿಯ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹಗುರ ಮಳೆಯಾಗುವ ಮುನ್ಸೂಚನೆಯಿದೆ. ಬೀದರ್‌, ಕಲಬುರಗಿ, ಯಾದಗಿರಿ, ಕೊಪ್ಪಳ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ. ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಹವಾಮಾನದಲ್ಲಿ ಏರುಪೇರು ಕಂಡುಬಂದಿದ್ದು, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ 5 ಸೆಂ.ಮೀ. ಹಾಗೂ ಬೇಗೂರಿನಲ್ಲಿ 4 ಸೆಂ.ಮೀ. ಮಳೆಯಾಗುವ ಮೂಲಕ ಈ ಭಾಗದಲ್ಲಿ ತಂಪು ವಾತಾವರಣ ನಿರ್ಮಾಣವಾಗಿದೆ. ಉಳಿದಂತೆ ಮಲೆ ಮಹದೇಶ್ವರ ಬೆಟ್ಟ, ಕೊಡಗಿನ ಹಾರಂಗಿ ಮತ್ತು ಮೈಸೂರಿನ ಎಚ್‌.ಡಿ. ಕೋಟೆಯಲ್ಲಿ ತಲಾ 1 ಸೆಂ.ಮೀ. ಮಳೆಯಾದ ವರದಿಯಾಗಿದೆ.

ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿದಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ತೀವ್ರವಾಗಿದೆ. ಬೀದರ್‌ನಲ್ಲಿ ರಾಜ್ಯದ ಅತಿ ಹೆಚ್ಚು ಅಂದರೆ 43 ಡಿಗ್ರಿ ಸೆಲ್ಸಿಯಸ್‌‍ ಗರಿಷ್ಠ ತಾಪಮಾನ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ ಗಣನೀಯವಾಗಿ ಏರಿಕೆಯಾಗಿದೆ. ರಾಜ್ಯದ ಒಟ್ಟಾರೆ ಗರಿಷ್ಠ ತಾಪಮಾನವು 34-43 ಡಿಗ್ರಿ ಸೆಲ್ಸಿಯಸ್‌‍ ವ್ಯಾಪ್ತಿಯಲ್ಲಿದೆ. ಕಾರವಾರದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಕಂಡುಬಂದಿದ್ದರೆ, ದಕ್ಷಿಣ ಒಳನಾಡಿನ ಚಿಂತಾಮಣಿಯಲ್ಲಿ ಗರಿಷ್ಠ ತಾಪಮಾನದಲ್ಲಿ ಇಳಿಕೆ ಕಂಡುಬಂದಿದೆ.

ಸದ್ಯ ಮಧ್ಯಪ್ರದೇಶದಿಂದ ಮನ್ನಾರ್‌ ಕೊಲ್ಲಿಯವರೆಗೆ ಒಂದು ಟ್ರಫ್‌ (ತೇವಾಂಶ ಭರಿತ ಸುಳಿ) ನಿರ್ಮಾಣವಾಗಿದೆ. ಇದು ವಿದರ್ಭ, ಮರಾಠವಾಡ, ಕರ್ನಾಟಕದ ಒಳನಾಡು ಮತ್ತು ತಮಿಳುನಾಡು ಮೂಲಕ ಹಾದುಹೋಗುತ್ತಿದ್ದು, ಸಮುದ್ರ ಮಟ್ಟದಿಂದ 1.5 ಕಿ.ಮೀ. ಎತ್ತರದಲ್ಲಿ ಸಕ್ರಿಯವಾಗಿದೆ.

ಈ ಹವಾಮಾನ ವೈಪರೀತ್ಯಗಳೇ ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಹಾಗೂ ಇನ್ನು ಕೆಲವು ಭಾಗಗಳಲ್ಲಿ ತೀವ್ರ ಶಾಖದ ಅಲೆಗೆ ಕಾರಣವಾಗಿವೆ. ಮುಂದಿನ ಐದು ದಿನಗಳ ಕಾಲ ರಾಜ್ಯದಾದ್ಯಂತ ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸದ್ಯಕ್ಕೆ ಸಮುದ್ರದಲ್ಲಿ ಯಾವುದೇ ಅಪಾಯದ ಮುನ್ಸೂಚನೆ ಇಲ್ಲದ ಕಾರಣ ಮೀನುಗಾರರಿಗೆ ಯಾವುದೇ ಎಚ್ಚರಿಕೆಯನ್ನು ನೀಡಲಾಗಿಲ್ಲ. ಇನ್ನು ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಹವಾಮಾನವು ಮೇ 7ರ ಬೆಳಿಗ್ಗೆಯವರೆಗೆ ಭಾಗಶಃ ಮೋಡ ಕವಿದ ವಾತಾವರಣದಿಂದ ಕೂಡಿರಲಿದೆ.

ಸಂಜೆ ಅಥವಾ ರಾತ್ರಿಯ ವೇಳೆಗೆ ಮೋಡಗಳು ದಟ್ಟವಾಗುವ ಸಾಧ್ಯತೆಯಿದ್ದು, ನಗರದ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಈ ಮಳೆಯ ಸಮಯದಲ್ಲಿ ಗಂಟೆಗೆ ಸುಮಾರು 30 ರಿಂದ 40 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.

RELATED ARTICLES

Latest News