Homeರಾಜ್ಯಶೃಂಗೇರಿ ಅಂಚೆ ಮತ ಎಣಿಕೆ : FSL ತನಿಖೆಗೆ ಕೃಷ್ಣ ಬೈರೇಗೌಡ ಆಗ್ರಹ

ಶೃಂಗೇರಿ ಅಂಚೆ ಮತ ಎಣಿಕೆ : FSL ತನಿಖೆಗೆ ಕೃಷ್ಣ ಬೈರೇಗೌಡ ಆಗ್ರಹ

Allegations of tampering in Sringeri vote counting: Krishna Byre Gowda demands FSL investigation

ಹಾಸನ:06 : ಪಂಚರಾಜ್ಯಗಳ ಚುನಾವಣೆ ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಮತ್ತು ಜಿಲ್ಲಾಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ ನೀಡಿದ್ದಾರೆ.ಹಾಸನದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇರಳದಲ್ಲಿ ನೇರ ಸ್ಪರ್ಧೆ ಇದ್ದರೂ ನಿರೀಕ್ಷೆಗೂ ಮೀರಿ ಕಾಂಗ್ರೆಸ್‌ಗೆ ಉತ್ತಮ ಫಲಿತಾಂಶ ಬಂದಿದ್ದು ಸಂತೋಷ ತಂದಿದೆ ಎಂದು ಹೇಳಿದರು.

ತಮಿಳುನಾಡಿನಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ನಿರೀಕ್ಷೆ ಇದ್ದರೂ, ಯುವ ಸಮುದಾಯ ಬದಲಾವಣೆಯನ್ನು ಬಯಸಿರುವುದು ಸ್ಪಷ್ಟವಾಗಿದೆ. ಅಲ್ಲಿನ ಜನರು ರಾಜಕೀಯ ವಿಶ್ಲೇಷಣೆಯಿಗಿಂತ ಸಮಾಜದ ಬದಲಾವಣೆಗೆ ಆದ್ಯತೆ ನೀಡಿದ್ದು, ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯವರು ಹಲವು ಸಂಸ್ಥೆಗಳ ದುರುಪಯೋಗದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು. ಮಮತಾ ಬ್ಯಾನರ್ಜಿ ಅವರಿಗೆ ಅನ್ಯಾಯವಾಗಿ ಹಿಂಸೆ ನೀಡಲಾಗಿದೆ ಎಂದೂ ಹೇಳಿದರು. ಆದರೆ ಜನರ ತೀರ್ಪನ್ನು ಗೌರವಿಸುವುದು ಮುಖ್ಯವಾಗಿದ್ದು, ಅದನ್ನು ಸಮಚಿತ್ತದಿಂದ ಸ್ವೀಕರಿಸುತ್ತೇವೆ. ಒಟ್ಟಾರೆ, ಕೇರಳದ ಫಲಿತಾಂಶ ಕಾಂಗ್ರೆಸ್‌ಗೆ ಸಮಾಧಾನ ಮತ್ತು ಸಂತೋಷ ತಂದಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳನ್ನು ಮಾಡಿದ ಅವರು, ಹಿಂದಿನ ಮತ ಎಣಿಕೆಯ ಬಳಿಕ ಕೆಲವು ಪೋಸ್ಟಲ್ ಬ್ಯಾಲೆಟ್‌ಗಳಲ್ಲಿ ತಿದ್ದುಪಡಿ ನಡೆದಿದೆ ಎಂದು ಹೇಳಿದ್ದಾರೆ. ಎಲ್ಲಾ ಪಕ್ಷಗಳ ಏಜೆಂಟ್‌ಗಳು ಒಪ್ಪಿ ಸಹಿ ಹಾಕಿದ ನಂತರವೂ ಮತಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂಬುದು ಅವರ ಆರೋಪವಾಗಿದೆ.
ವಿಶೇಷವಾಗಿ, ಕೆಲವು ಮತಗಳಲ್ಲಿ ಮೊದಲು ಒಂದು ಅಭ್ಯರ್ಥಿಗೆ ಹಾಕಿದ್ದ ಟಿಕ್ ಮಾರ್ಕ್‌ಗೆ ಕೆಳಭಾಗದಲ್ಲಿ ಬೇರೆ ಇಂಕ್ ಬಳಸಿ ಮತ್ತೊಂದು ಟಿಕ್ ಹಾಕಿ, ಆ ಮತಗಳನ್ನು ಅಮಾನ್ಯಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನು ಅವರು “ಸಂಪೂರ್ಣ ಕ್ರಿಮಿನಲ್ ಸಂಚು” ಎಂದು ಬಣ್ಣಿಸಿದ್ದಾರೆ.

ಈ ಕುರಿತು ಸತ್ಯಾಂಶ ಬಹಿರಂಗವಾಗಲು ಫರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (FSL)ಗೆ ಮತಪತ್ರಗಳನ್ನು ಕಳುಹಿಸಿ, ಮೇಲಿನ ಮತ್ತು ಕೆಳಗಿನ ಟಿಕ್ ಮಾರ್ಕ್‌ಗಳಿಗೆ ಬಳಸಿದ ಇಂಕ್ ಒಂದೇನಾ ಅಥವಾ ಬೇರೆನಾ ಎಂಬುದನ್ನು ಪರೀಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನೂ ಕೆಲವು ಅಧಿಕಾರಿಗಳು ನಿರ್ದಿಷ್ಟ ಅಭ್ಯರ್ಥಿಗೆ ಬಂದ ಮತಗಳನ್ನು ಒಂದೇ ಬಂಡಲ್‌ನಲ್ಲಿ ಇಟ್ಟು, ಅದರಲ್ಲಿ ಟ್ಯಾಂಪರಿಂಗ್ ನಡೆದಿರುವ ಅನುಮಾನವಿದೆ ಎಂದು ಅವರು ಹೇಳಿದ್ದಾರೆ. ಇದು ಮತ ಕಳ್ಳತನವಾಗಿದ್ದು, ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಕುರಿತು ಪೊಲೀಸ್ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

RELATED ARTICLES

Latest News