Homeರಾಜಕೀಯಉಪಚುನಾವಣೆ ಗೆಲುವಿನ ಕ್ರೆಡಿಟ್ ಪಡೆಯಲು ಕಾಂಗ್ರೆಸ್‌‍ನಲ್ಲಿ ಪೈಪೋಟಿ

ಉಪಚುನಾವಣೆ ಗೆಲುವಿನ ಕ್ರೆಡಿಟ್ ಪಡೆಯಲು ಕಾಂಗ್ರೆಸ್‌‍ನಲ್ಲಿ ಪೈಪೋಟಿ

Competition in Congress to take credit for by-election victory

ಬೆಂಗಳೂರು, ಮೇ 6- ರಾಜ್ಯದಲ್ಲಿ ನಡೆದ ಎರಡು ಕ್ಷೇತ್ರಗಳ ಉಪಚುನಾವಣೆಯ ಗೆಲುವಿನ ಕ್ರೆಡಿಟ್‌ ಪಡೆಯಲು ಕಾಂಗ್ರೆಸ್‌‍ನಲ್ಲಿ ಪೈಪೋಟಿ ಆರಂಭವಾಗಿದೆ.ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಅಭ್ಯರ್ಥಿಗೆ ಟಿಕೆಟ್‌ ನೀಡದ ಕಾರಣಕ್ಕಾಗಿ ಮುಸ್ಲಿಮರು ತಿರುಗಿ ಬಿದ್ದಿದ್ದಾರೆ.
ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌‍ ಸೋಲು ಕಂಡುತ್ತಾರೆ ಎಂದು ಬಿಂಬಿಸಲಾಗಿತ್ತು.

ಇದಕ್ಕೆ ಪೂರಕವಾಗಿ ಕಾಂಗ್ರೆಸ್‌‍ನಲ್ಲಿ ಅಲ್ಪಸಂಖ್ಯಾತರ ಪರಮೋಚ್ಚ ನಾಯಕ ಎಂದು ಬಿಂಬಿಸಿಕೊಳ್ಳುತ್ತಿರುವ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಆರಂಭದಲ್ಲಿ ಉಪಚುನಾವಣೆಯ ಕ್ಷೇತ್ರಗಳತ್ತ ತಲೆ ಹಾಕದೇ ನಕಾರಾತಕ ಸಂದೇಶ ರವಾನೆಯಾಗಲು ಅವಕಾಶ ಮಾಡಿಕೊಟ್ಟರು. ಕಾಂಗ್ರೆಸ್‌‍ನಲ್ಲೇ ಇದ್ದ ಬಹಳಷ್ಟು ಅಲ್ಪಸಂಖ್ಯಾತ ನಾಯಕರು ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು.

ಅವರಲ್ಲಿ ಸಾದಿಕ್‌ ಪೈಲ್ವಾನ್‌ ಪ್ರಮುಖರಾಗಿದ್ದು, ಅವರ ಮನವೊಲಿಸುವಲ್ಲಿ ಶಿವಾಜಿ ನಗರ ಶಾಸಕ ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್‌ ಸದಸ್ಯ ಸಲೀಂ ಅಹಮದ್‌ ಯಶಸ್ವಿಯಾಗಿದ್ದರು. ಸಾದಿಕ್‌ ಪೈಲ್ವಾನ್‌ ಚುನಾವಣಾ ಕಣದಿಂದ ನಿವೃತ್ತರಾಗಿ ಕಾಂಗ್ರೆಸ್‌‍ ಅಭ್ಯರ್ಥಿಯನ್ನು ಬೆಂಬಲಿಸಿದ್ದರು.

ಮುಸ್ಲಿಮರಿಗೆ ಟಿಕೆಟ್‌ ನೀಡಬೇಕೆಂದು ಪ್ರತಿಪಾದಿಸಿದ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಜೀರ್‌ ಅಹಮದ್‌, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದ ಅಬ್ದುಲ್‌ ಜಬ್ಬಾರ್‌ ಸೇರಿದಂತೆ ಕೆಲವರು ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರು. ಅವರ ಗೈರುಹಾಜರಿ ಕೊರತೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ರಿಜ್ವಾನ್‌ ಅರ್ಷದ್‌, ಸಲೀಂ ಅಹಮದ್‌ ಮತ್ತು ಸಾದ್ವಿಕ್‌ ಪೈಲ್ವಾನ್‌ ಯಶಸ್ವಿಯಾಗಿದ್ದರು.

ಜಮೀರ್‌ ಅಹಮದ್‌ಖಾನ್‌ ಆರಂಭದಲ್ಲಿ ಕ್ಷೇತ್ರದಿಂದ ದೂರು ಉಳಿದು, ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪರ ಪ್ರಚಾರ ಮಾಡಿದ್ದರು. ಡಿ.ಕೆ.ಶಿವಕುಮಾರ್‌ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವಂತೆ ಕಟ್ಟಪ್ಪಣೆ ಮಾಡಿದ್ದರು. ಜೊತೆಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಿದ್ದರು. ಮತದಾನಕ್ಕೆ ಎರಡು ದಿನ ಬಾಕಿಯಿರುವಾಗ ಜಮೀರ್‌ ಅಹಮದ್‌ ಖಾನ್‌, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋೕಟೆಯಲ್ಲಿ ಪ್ರಚಾರ ನಡೆಸಿದ್ದರು.

ಜಮೀರ್‌ ಬಣದ ಅಸಹಕಾರದ ನಡುವೆಯೂ ಕಾಂಗ್ರೆಸ್‌‍ ಅನ್ನು ಗೆಲ್ಲಿಸಿಕೊಂಡು ಬಂದಿರುವುದಾಗಿ, ಸಲೀಂ ಮತ್ತು ರಿಜ್ವಾನ್‌ ಬಣ ಬೀಗುತ್ತಿದೆ. ಫಲಿತಾಂಶದಲ್ಲಿ ಅತ್ಯಲ್ಪ ಅಂತರದಲ್ಲಿ ಕಾಂಗ್ರೆಸ್‌‍ ಗೆದ್ದಿದ್ದರೂ ಕೂಡ ಗೆಲುವೇ ಆಗಿರುವುದರಿಂದ ಅದರ ಸಂಭ್ರಮಾಚರಣೆ ಜೋರಾಗಿದೆ. ಇಂದು ಸಾದಿಕ್‌ ಪೈಲ್ವಾನ್‌ರೊಂದಿಗೆ ರಿಜ್ವಾನ್‌ ಅರ್ಷದ್‌ ನೇತೃತ್ವ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದೆ.

ಚುನಾವಣಾ ಕಣದಿಂದ ಹಿಂದೆ ಸರಿದು ಕಾಂಗ್ರೆಸ್‌‍ ಗೆಲುವಿಗೆ ಸಹಕರಿಸಿದ ಸಾದಿಕ್‌ ಪೈಲ್ವಾನ್‌ಗೆ ಸೂಕ್ತ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಸಲ್ಲಿಸಲಾಗಿದೆ. ಚುನಾವಣಾ ಫಲಿತಾಂಶದ ಬಳಿಕ ಜಮೀರ್‌ ಅಹಮದ್‌ ಕೇರಳಕ್ಕೆ ತೆರಳಿದ್ದು, ಉಪಚುನಾವಣೆ ಗೆಲುವಿಗೆ ಸಣ್ಣ ಅಭಿನಂದನೆ ಸಲ್ಲಿಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.

RELATED ARTICLES

Latest News