ನ್ಯೂಯಾರ್ಕ್, ಏ.13: ಇರಾನ್ ಬಂದರುಗಳನ್ನುನಿರ್ಬಂಧಿಸುವುದಾಗಿ ಅಮೆರಿಕಾ ಘೋಷಿಸಿದ ಬಳಿಕ ತೈಲದ ಬೆಲೆಗಳು ಏರಿಕೆಯಾಗಿವೆ.ಅಮೆರಿಕದ ಕಚ್ಚಾ ತೈಲದ ಬೆಲೆ 8 ಶೇಕಡಾ ಏರಿ ಪ್ರತಿ ಬ್ಯಾರೆಲ್ಗೆ 104.24 ಡಾಲರ್ಗೆ ತಲುಪಿದರೆ.
ಅಂತರರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕ್ರೂಡ್ ತೈಲವು 7 ಶೇಕಡಾ ಏರಿ 102.29 ಡಾಲರ್ಗೆ ಏರಿದೆ.ಇರಾನ್ ಯುದ್ಧದ ಹಿನ್ನೆಲೆ ಬ್ರೆಂಟ್ ಕ್ರೂಡ್ ಬೆಲೆಯಲ್ಲಿ ಭಾರೀ ಏರುಪೇರು ಕಂಡುಬಂದಿದೆ.
ಫೆಬ್ರವರಿ ಕೊನೆಯಲ್ಲಿ ಯುದ್ಧ ಆರಂಭಕ್ಕೂ ಮುನ್ನ ಪ್ರತಿ ಬ್ಯಾರೆಲ್ಗೆ ಸುಮಾರು 70 ಡಾಲರ್ ಇದ್ದ ಬೆಲೆ, ಕೆಲವೊಮ್ಮೆ 119 ಡಾಲರ್ಗೂ ಏರಿತ್ತು. ಶುಕ್ರವಾರ, ಶಾಂತಿ ಮಾತುಕತೆಗಳ ಮುನ್ನ, ಜೂನ್ ವಿತರಣೆಯ ಬ್ರೆಂಟ್ ಕ್ರೂಡ್ 0.8 ಶೇಕಡಾ ಇಳಿದು 95.20 ಡಾಲರ್ಗೆ ತಲುಪಿತ್ತು.
ಜಾಗತಿಕ ತೈಲ ಸಾಗಣೆಗೆ ಅತ್ಯಂತ ಪ್ರಮುಖವಾದ ಸಮುದ್ರ ಮಾರ್ಗವಾದ ಹೋರ್ಮುಝ್ ಸಮುದ್ರಸಂಧಿಯನ್ನು ಇರಾನ್ ಪರಿಣಾಮಕಾರಿಯಾಗಿ ನಿಯಂತ್ರಿಸುತ್ತಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ಪ್ರಕಟಣೆಯಲ್ಲಿ, ಇರಾನ್ ಬಂದರುಗಳು ಮತ್ತು ಕರಾವಳಿ ಪ್ರದೇಶಗಳಿಗೆ ಪ್ರವೇಶಿಸುವ ಅಥವಾ ಹೊರಡುವ ಎಲ್ಲಾ ದೇಶಗಳ ಹಡಗುಗಳ ವಿರುದ್ಧ ಸಮಾನವಾಗಿ ಈ ನಿರ್ಬಂಧ ಜಾರಿಯಾಗಲಿದೆ ಎಂದು ತಿಳಿಸಿದೆ.ಆದರೆ ಇರಾನ್ ಹೊರತಾದ ಬಂದರುಗಳ ನಡುವೆ ಸಂಚರಿಸುವ ಹಡಗುಗಳಿಗೆ ಹೋರ್ಮುಝ್ ಸಮುದ್ರಸಂಧಿ ಮೂಲಕ ಸಾಗಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದೆ.
ಪ್ರತಿ ದಿನ ಜಗತ್ತಿನಲ್ಲಿ ವ್ಯಾಪಾರವಾಗುವ ತೈಲದ ಸುಮಾರು ಐದನೇ ಒಂದು ಭಾಗ ಈ ಸಮುದ್ರಸಂಧಿಯ ಮೂಲಕ ಸಾಗುತ್ತದೆ. ಸೌದಿ ಅರೇಬಿಯಾ, ಇರಾಕ್, ಯುನೈಟೆಡ್ ಅರಬ್ ಎಮಿರೇಟ್ಸ್, ಕುವೈತ್ ಮತ್ತು ಇರಾನ್ ಪ್ರಮುಖ ತೈಲ ರಫ್ತು ದೇಶಗಳಾಗಿವೆ.
ಯುದ್ಧ ವಿರಾಮದ ಬಳಿಕವೂ ಈ ಮಾರ್ಗದಲ್ಲಿ ಸಂಚಾರ ಸೀಮಿತವಾಗಿಯೇ ಉಳಿದಿದೆ. ಸಮುದ್ರ ಮಾರ್ಗಗಳ ಟ್ರ್ಯಾಕರ್ಗಳ ಪ್ರಕಾರ, ಯುದ್ಧ ವಿರಾಮದ ನಂತರ 40ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳು ಈ ಮಾರ್ಗವನ್ನು ದಾಟಿವೆ.
