ದಾವಣಗೆರೆ,ಏ.17- ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಮಠದಿಂದಲೇ ಉಚ್ಚಾಟನೆಗೊಂಡಿರುವ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳಿಗೆ ಮತ್ತೊಂದು ಕಾನೂನಿನ ಸಂಕಷ್ಟ ಎದುರಾಗಿದೆ.
ಮಠದಲ್ಲಿ ವಿದ್ಯಾಭ್ಯಾಸಕ್ಕೆ ಬಂದಿದ್ದ ಮಕ್ಕಳಿಗೆ ಶ್ರೀ ವಚನಾನಂದ ಸ್ವಾಮೀಜಿಗಳು ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಮಕ್ಕಳ ಹಕ್ಕು ಕಲ್ಯಾಣ ಮಂಡಳಿಗೆ ದೂರು ನೀಡಲಾಗಿದೆ. ದಾವಣಗೆರೆಯಲ್ಲಿರುವ ಮಕ್ಕಳ ಕಲ್ಯಾಣ ಮಂಡಳಿಗೆ ಶುಕ್ರವಾರ ವಚನಾನಂದ ಶ್ರೀಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದಾಖಲೆ ಸಮೇತ ದೂರು ನೀಡಲಾಗಿದೆ.
ಮಕ್ಕಳ ಕಲ್ಯಾಣ ಸಮಿತಿ, ಮೂವರು ಮಹಿಳಾ ಸಿಬ್ಬಂದಿ ಸೇರಿದಂತೆ ಮೂವರು ಪುರುಷರು ಹಾಗೂ ಪೊಲೀಸರು ಮಠಕ್ಕೆ ಭೇಟಿ ನೀಡಿದ್ದಾರೆ. ಮಠದ ಆಪ್ತರು ಸೇರಿದಂತೆ ಇತರರನ್ನು ವಿಚಾರಣೆ ಮಾಡುತ್ತಿದ್ದಾರೆ.
ಮಠದ ಮಕ್ಕಳಿಂದ ಶ್ರೀಗಳು ಮಸಾಜ್ ಮಾಡಿಸಿಕೊಳ್ಳುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ವಚನಾನಂದ ಶ್ರೀಗಳನ್ನು ಮಠದ ಹಣ ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಹರಿಹರದ ಹನಗವಾಡಿಯಲ್ಲಿರುವ ಮಠದಿಂದ ಉಚ್ಚಾಟನೆ ಮಾಡಲಾಗಿದೆ.
ಧರ್ಮದರ್ಶಿಗಳು ಈಗಾಗಲೇ ವಚನಾನಂದ ಶ್ರೀಗಳನ್ನು ಮಠದಿಂದ ಉಚ್ಚಾಟನೆಗೊಳಿಸಿ ಮಠಕ್ಕೆ ಬೀಗ ಜಡಿದಿದ್ದಾರೆ. ಭಕ್ತರು ಮತ್ತು ಮಠದ ನಡುವೆ ಭಾರೀ ಜಟಾಪಟಿ ನಡೆಯುತ್ತಿದ್ದು, ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದೆ.
