Friday, April 17, 2026
Homeರಾಜಕೀಯಕುತೂಹಲ ಕೆರಳಿಸಿದ ಡಿಕೆಶಿ-ಸತೀಶ್‌ ಭೇಟಿ

ಕುತೂಹಲ ಕೆರಳಿಸಿದ ಡಿಕೆಶಿ-ಸತೀಶ್‌ ಭೇಟಿ

DK Shivkumar-Sathish meet sparks curiosity

ಬೆಂಗಳೂರು, ಏ.17- ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ಬೆಳಗ್ಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿಯವರನ್ನು ಭೇಟಿ ಮಾಡುವ ಮೂಲಕ ಕುತೂಹಲ ಕೆರಳಿಸಿದ್ದಾರೆ.ಕುಮಾರಕೃಪದಲ್ಲಿರುವ ಸರ್ಕಾರಿ ನಿವಾಸದಲ್ಲಿ ಇಬ್ಬರು ನಾಯಕರು ಭೇಟಿಯಾಗಿದ್ದು, ಕುತೂಹಲ ಕೆರಳಿಸಿದೆ. ಸತೀಶ್‌ ಜಾರಕಿಹೊಳಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಬಳಗದಲ್ಲಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರು ನಿಭಾಯಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ನಾಯಕತ್ವ ಬದಲಾವಣೆಯ ವಿಚಾರ ಬಂದಾಗ ಸಿದ್ದರಾಮಯ್ಯ ಅವರ ಪರವಾಗಿಯೇ ಸತೀಶ್‌ ಜಾರಕಿಹೊಳಿ ವಕಾಲತ್ತು ವಹಿಸಿದ್ದಾರೆ. ಈ ಮೊದಲು ನಾಯಕತ್ವದ ವಿಷಯ ಚರ್ಚೆಗೆ ಬಂದಾಗಲೆಲ್ಲಾ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರ ಆಪ್ತರನ್ನು ಭೇಟಿ ಮಾಡಿ ಗೊಂದಲ ಮೂಡಿಸುತ್ತಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಆಪ್ತರಾದ ಎಚ್‌.ಸಿ.ಮಹದೇವಪ್ಪ, ಸತೀಶ್‌ ಜಾರಕಿಹೊಳಿ, ಕೆಲವೊಮೆ ಕೆ.ಎನ್‌.ರಾಜಣ್ಣ ಅವರನ್ನು ಹುಡುಕಿಕೊಂಡು ಭೇಟಿ ಮಾಡಿದ ಉದಾಹರಣೆಗಳಿವೆ.

ಆ ಸಂದರ್ಭದಲ್ಲಿ ಕೇಳಿ ಬರುತ್ತಿದ್ದ ಸಮರ್ಥನೆಗಳೇ ನಂಬಲಾಗದಂತೆ ಇರುತ್ತಿದ್ದವು. ತಮ ಪಕ್ಷದ ನಾಯಕರನ್ನು ಭೇಟಿ ಮಾಡಲು ನನಗೆ ಯಾವ ಮುಜುಗರವೂ ಇಲ್ಲ, ಯಾರ ಅಪ್ಪಣೆ ಬೇಕಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳುತ್ತಿದ್ದ ಧಾಟಿ ಅನುಮಾನಗಳನ್ನು ಮೂಡಿಸುತ್ತಿತ್ತು. ಈಗ ಮತ್ತೆ ಸತೀಶ್‌ ಜಾರಕಿ ಹೊಳಿ ಅವರ ಮನೆಗೆ ಭೇಟಿ ನೀಡಿದ್ದಾರೆ.

ಉಪಚುನಾವಣೆಗಳು ಮುಗಿದಿದ್ದು, ನಾಯಕತ್ವದ ಚರ್ಚೆ ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರನ್ನು ಉಪಮುಖ್ಯಮಂತ್ರಿಯವರು ಭೇಟಿ ಮಾಡಲಾರಂಭಿಸಿದ್ದಾರೆ. ನಾಯಕತ್ವದ ವಿಚಾರ ಬಂದಾಗ ತಮ ಪರವಾಗಿ ನಿಲ್ಲುವಂತೆ ಸತೀಶ್‌ ಜಾರಕಿಹೊಳಿ ಅವರಲ್ಲಿ ಡಿ.ಕೆ.ಶಿವಕುಮಾರ್‌ ಮನವಿ ಮಾಡಿರುವ ಸಾಧ್ಯತೆಗಳಿವೆ.

ಇಲಾಖೆಯ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಲ್ಲಿ ಸತೀಶ್‌ ಜಾರಕಿಹೊಳಿಯನ್ನು ಭೇಟಿ ಮಾಡಿದ್ದಾಗಿ ಸಮರ್ಥಿಸಿಕೊಳ್ಳುವ ಸಾಧ್ಯತೆಯೂ ಇದೆ. ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರ್ಣಗೊಳಿಸಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮದ ಪ್ರಕಾರ ಅಧ್ಯಕ್ಷ ಸ್ಥಾನ ಅಥವಾ ಉಪಮುಖ್ಯಮಂತ್ರಿ ಸ್ಥಾನ ಎರಡರಲ್ಲಿ ಒಂದನ್ನು ಡಿ.ಕೆ.ಶಿವಕುಮಾರ್‌ ಬಿಟ್ಟುಕೊಡಬೇಕು ಎಂಬುದು ಸಿದ್ದರಾಮಯ್ಯ ಅವರ ಬೆಂಬಲಿಗರ ಪ್ರತಿಪಾದನೆ. ತಮ ವಿರುದ್ಧ ಟೀಕೆ ಮಾಡಿದವರನ್ನೇ ಭೇಟಿ ಮಾಡಿ ಡಿ.ಕೆ.ಶಿವಕುಮಾರ್‌ ಹೊಸ ರಾಜಕೀಯ ದಾಳ ಉರುಳಿಸುತ್ತಿದ್ದಾರೆ.

RELATED ARTICLES

Latest News