ನವದೆಹಲಿ,ಏ.16- ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕೆಂಬ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ ಕೇಂದ್ರ ಗೃಹಸಚಿವ ಅಮಿತ್ ಶಾ ಧರ್ಮಾಧರಿತ ಮೀಸಲಾತಿ ನೀಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ಅವರು ಮಹಿಳಾ ಮೀಸಲಾತಿ ಮಸೂದೆಯಲ್ಲಿ ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕವಾದ ಮೀಸಲಾತಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಜನಸಂಖ್ಯೆ ಆಧಾರದ ಮೇಲೆ 2011ರ ಜನಗಣತಿ ಅನುಗುಣವಾಗಿ ಕ್ಷೇತ್ರ ಪುನರ್ವಿಂಗಡಣೆ ಮಾಡುವುದಾದರೆ ದೇಶದಲ್ಲಿರುವ ಮುಸ್ಲಿಂ ಮಹಿಳೆಯರಿಗೂ ಪ್ರತ್ಯೇಕವಾದ ಮೀಸಲಾತಿಯನ್ನು ಜಾರಿ ಮಾಡಿ ಎಂದು ಆಗ್ರಹಿಸಿದರು.
ಇದಕ್ಕೆ ದನಿಗೂಡಿಸಿದ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ನಾವು ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸುತ್ತೇವೆ. ಶಾಸನ ಸಭೆಗಳಲ್ಲಿ ಮುಸ್ಲಿಂ ಮಹಿಳೆಯರಿಗೂ ಪ್ರತ್ಯೇಕವಾದ ಮೀಸಲಾತಿಯನ್ನು ಜಾರಿ ಮಾಡಬಹುದು. ಇದರಿಂದ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗುತ್ತದೆ ಎಂದು ಹೇಳಿದರು.
ಇದರಿಂದ ಕೆರಳಿ ಕೆಂಡವಾದ ಅಮಿತ್ ಶಾ, ಇದು ಸಂವಿಧಾನ ವಿರೋಧಿ ಹೇಳಿಕೆ. ನಮ್ಮ ಸಂವಿಧಾನದಲ್ಲಿ ಧರ್ಮಾಧರಿತ ಮೀಸಲಾತಿ ನೀಡಲು ಅವಕಾಶ ವಿಲ್ಲ. ಅಖಿಲೇಶ್ ಯಾದವ್ ಮತ್ತು ಧರ್ಮೇಂದ್ರ ಯಾದವ್ ಇಟ್ಟಿರುವ ಬೇಡಿಕೆ ಸಂಪೂರ್ಣವಾಗಿ ಸಂವಿಧಾನ ವಿರೋಧಿಯಾಗಿದೆ. ಇಡೀ ದೇಶ ಇಂದು ಸಂಸತ್ನಲ್ಲಿ ಏನು ನಡೆಯುತ್ತದೆ ಎಂದು ನೋಡುತ್ತಿದ್ದಾರೆ.
ಐತಿಹಾಸಿಕ ಮೂರು ಮಸೂದೆಗಳು ಮಂಡನೆಯಾಗಿದ್ದು, ಇವು ಅಂಗೀಕಾರವಾಗಲಿದೆಯೇ ಎಂಬುದನ್ನು ಮಹಿಳೆಯರೂ ಸೇರಿದಂತೆ ದೇಶದ ನಾಗರಿಕರು ಮಸೂದೆ ಅಂಗೀಕಾರವಾಗಲಿ ಎಂದು ನಿರೀಕ್ಷಿಸುತ್ತಿದ್ದಾರೆ. ಆದರೆ ಇಲ್ಲಿಯೂ ಧರ್ಮಾಧರಿತ ಮೀಸಲಾತಿ ಬೇಕು ಎಂದು ಕೇಳುತ್ತಿದ್ದಾರೆ. ಇದು ನ್ಯಾಯವೇ? ಎಂದು ಪ್ರಶ್ನಿಸಿದರು.
ಧರ್ಮಾಧರಿತ ಮೀಸಲಾತಿ ನೀಡುವುದೇ ಸಂವಿಧಾನ ವಿರೋಧಿ ಎಂದು ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ. ಆದರೆ ಸದಸ್ಯರು ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
