ಬೆಂಗಳೂರು, ಮೇ 14- ಕೇರಳದಲ್ಲಿ ಮುಖ್ಯಮಂತ್ರಿ ಆಯ್ಕೆಯ ವೇಳೆ ಪ್ರಭಾವಕ್ಕೆ ಮಣಿಯದೇ, ನಾಯಕತ್ವದ ಜನಪ್ರಿಯತೆಗೆ ಮಣೆ ಹಾಕುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ರಾಜ್ಯದ ನಾಯಕತ್ವ ವಿವಾದಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ.
ಕೇರಳದಲ್ಲಿ ವಿ.ಡಿ.ಸತೀಶನ್ ವಿರೋಧ ಪಕ್ಷದ ನಾಯಕನಾಗಿ ನಿರ್ಗಮಿತ ಎಲ್ಡಿಎಫ್ ಸರ್ಕಾರದ ವಿರುದ್ಧ ಭಾರೀ ಹೋರಾಟ ಮಾಡಿದ್ದರು. ಈ ಮೂಲಕ ಕೇರಳಂನಲ್ಲಿ ಜನಪ್ರಿಯ ನಾಯಕರಾಗಿ ರೂಪುಗೊಂಡಿದ್ದರು.
ಕೆ.ಸಿ.ವೇಣುಗೋಪಾಲ್ ರಾಷ್ಟ್ರ ರಾಜಕಾರಣದಲ್ಲಿ ಮಗ್ನರಾಗಿದ್ದವರು, ಚುವಾವಣೆ ಸಂದರ್ಭದಲ್ಲಿ ಕೇರಳಕ್ಕೆ ಹೆಚ್ಚಿನ ಗಮನ ಕೊಟ್ಟಿದ್ದರು. ತಾವು ಉಸ್ತುವಾರಿ ನಿರ್ವಹಣೆ ಮಾಡಿದ ರಾಜ್ಯಗಳಲ್ಲಿರುವ ಶ್ರೀಮಂತ ನಾಯಕರನ್ನು ಸಂಪರ್ಕಿಸಿ ಅವರ ಮೂಲಕ ಕೇರಳ ವಿಧಾನಸಭಾ ಚುನಾವಣೆಗೆ ಸಂಪನೂಲ ಕ್ರೋಢೀಕರಿಸಿದ್ದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಕೇರಳದ ವೈನಾಡಿನಿಂದ ಸಂಸದರಾಗಿ ಗೆಲ್ಲಿಸಿ ಕಳುಹಿಸುವಲ್ಲಿ ವೇಣುಗೋಪಾಲ್ ಅವರ ಪಾತ್ರ ಪ್ರಮುಖವಾಗಿತ್ತು.
ಹೈಕಮಾಂಡ್ ನಾಯಕರ ಜೊತೆಗೆ ಹೆಚ್ಚಿನ ಸಂಪರ್ಕ ಹಾಗೂ ಬಾಂಧವ್ಯ ಹೊಂದಿದ್ದರಿಂದ ಅದನ್ನು ಬಳಕೆ ಮಾಡಿಕೊಂಡು ಕೇರಳದಲ್ಲಿ ಮುಖ್ಯಮಂತ್ರಿಯಾಗುವ ಪ್ರಯತ್ನ ಮಾಡಿದ್ದರು. ಆದರೆ ಯುಡಿಎಫ್ ಕೂಟದ ಮುಸ್ಲಿಂ ಲೀಗ್ನ ಮುಖಂಡರು ವೇಣುಗೋಪಾಲ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ವಿರೋಧ ವ್ಯಕ್ತ ಪಡಿಸಿದರು.
ಸಂಸದರಾಗಿರುವ ವೇಣುಗೋಪಾಲ್ ಅವರು ವಿಧಾನಸಭೆಯ ಉಪಚುನಾವಣೆಯಲ್ಲಿ ಆಯ್ಕೆಯಾಗಬೇಕು. ಒಂದು ವೇಳೆ ಅಲ್ಲಿ ಸೋಲು ಕಂಡರೆ, ನಾಯಕತ್ವದ ಗೊಂದಲ ಉಂಟಾಗುವುದಲ್ಲದೆ ಸರ್ಕಾರದ ಭವಿಷ್ಯ ಕೂಡ ಅತಂತ್ರ ಸ್ಥಿತಿಗೆ ತಲುಪಲಿದೆ ಎಂಬ ಕಾರಣಕ್ಕಾಗಿ ಮುಸ್ಲಿಂಲೀಗ್ ಪ್ರಬಲ ವಿರೋಧ ವ್ಯಕ್ತಪಡಿಸಿತು. ಅಳೆದು ತೂಗಿ ಕಾಂಗ್ರೆಸ್ ಹೈಕಮಾಂಡ್ ವಿ.ಡಿ.ಸತೀಶನ್ಗೆ ಮುಖ್ಯಮಂತ್ರಿ ಸ್ಥಾನ ನೀಡಿದೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಜನಪ್ರಿಯ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. 2ನೇ ಅವಧಿಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಕೆ.ಸಿ.ವೇಣುಗೋಪಾಲ್ ಅವರಂತೆ ಡಿ.ಕೆ.ಶಿವಕುಮಾರ್ ಅವರೂ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿದ್ದು, ಹೈಕಮಾಂಡ್ ಮಟ್ಟದಲ್ಲಿ ಹೆಚ್ಚು ಪ್ರಭಾವ ಹೊಂದಿದ್ದಾರೆ. ನಾಯಕತ್ವ ಬದಲಾಗಬೇಕು ಮತ್ತು 2023ರಲ್ಲಿ ಆಶ್ವಾಸನೆ ನೀಡಿದಂತೆ ತಮಗೆ ಈಗ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಇದು ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಸಂಬಂಧಪಟ್ಟಂತೆ ತೀವ್ರ ವಿವಾದವನ್ನು ಸೃಷ್ಟಿಸಿದೆ. ವಿರೋಧ ಪಕ್ಷಗಳಿಗಷ್ಟೇ ಅಲ್ಲದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಾಗ್ದಾಳಿಗೂ ಕಾರಣವಾಗಿದೆ. ಆದರೆ ಕರ್ನಾಟಕದ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಈವರೆಗೂ ಯಾವುದೇ ನಿರ್ಣಯ ತೆಗೆದುಕೊಳ್ಳದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ವರ್ತಿಸುತ್ತಿದೆ.
ಪಂಚರಾಜ್ಯಗಳ ಚುನಾವಣೆ ಬಳಿಕ ರಾಜಕೀಯ ತೀರ್ಮಾನಗಳನ್ನು ಪೂರ್ಣಗೊಳಿಸಿ, ಕರ್ನಾಟಕ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳುವುದಾಗಿ ವರಿಷ್ಠರು ಹೇಳುತ್ತಾ ಬಂದಿದ್ದರು. ಈಗ ಕೇರಳ ಮುಖ್ಯಮಂತ್ರಿ ಆಯ್ಕೆ ಪೂರ್ಣಗೊಂಡಿರುವುದರಿಂದ ಕರ್ನಾಟಕದತ್ತ ಹೈಕಮಾಂಡ್ ಗಮನ ಹರಿಸಬಹುದು ಎಂಬ ನಿರೀಕ್ಷೆಗಳಿವೆ. ಮೇ 15ರಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ದೆಹಲಿಗೆ ಭೇಟಿ ನೀಡಲಿದ್ದಾರೆ, ನಾಯಕತ್ವದ ವಿವಾದ ಇತ್ಯರ್ಥಗೊಳ್ಳಲಿದೆ ಎಂದು ಹೇಳಲಾಗಿತ್ತು. ಆದರೆ ಸಿದ್ದರಾಮಯ್ಯ ಇದನ್ನು ತಳ್ಳಿಹಾಕಿದ್ದಾರೆ.
ಕೇರಳದ ಮಾದರಿಯಲ್ಲೇ ಕರ್ನಾಟಕದಲ್ಲಿ ಸ್ಥಳೀಯ ನಾಯಕತ್ವದ ಜನಪ್ರಿಯತೆಗೆ ಮಣೆ ಹಾಕಿದ್ದರೆ ಸಿದ್ದರಾಮಯ್ಯ ಅವರ ಕುರ್ಚಿ ಬಾಕಿಯಿರುವ ಎರಡು ವರ್ಷಗಳ ಕಾಲ ಗಟ್ಟಿಯಾಗಿರುವ ಸಾಧ್ಯತೆಗಳಿವೆ. ಮೇಲ್ನೋಟದ ಪರಿಸ್ಥಿತಿಯ ಪ್ರಕಾರ ಸದ್ಯಕ್ಕೆ ನಾಯಕತ್ವ ಬದಲಾವಣೆಗೆ ಸಂಬಂಧ ಪಟ್ಟಂತಹ ಮಹತ್ವದ ಬದಲಾವಣೆಗಳು ಕಂಡು ಬರುತ್ತಿಲ್ಲ.
ಡಿ.ಕೆ.ಶಿವಕುಮಾರ್ ಅವರು ನಿರಾಶೆಯಿಂದಲೇ ತಿರುಗಾಡುತ್ತಿದ್ದು, ಮೇ 15ರ ಹುಟ್ಟುಹಬ್ಬಕ್ಕೆ ಉನ್ನತ ಹುದ್ದೆಯ ಕೊಡುಗೆ ಸಿಗುವುದು ಅನುಮಾನಾಸ್ಪದವಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡವಳಿಕೆ ಮತ್ತಷ್ಟು ಗೊಂದಲ ಮೂಡಿಸಿದೆ.
