ಬೆಂಗಳೂರು, ಮೇ.14- ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರಪಾಲಿಕೆಗಳ ಚುನಾವಣೆಗೆ ಪ್ರಮುಖ ಮೂರು ರಾಜಕೀಯ ಪಕ್ಷಗಳು ತೆರೆಮರೆಯಲ್ಲಿ ಭರ್ಜರಿ ಸಿದ್ಧತೆ ಆರಂಭಿಸಿವೆ.
ಸುಪ್ರೀಂ ಕೋರ್ಟ್ ನೀಡಿರುವ ಜೂ.30ರ ಗಡುವಿನೊಳಗೆ ಚುನಾವಣೆ ನಡೆಸಬೇಕಿರುವುದರಿಂದ ರಾಜ್ಯ ಚುನಾವಣಾ ಅಯೋಗ ಐದು ನಗರಪಾಲಿಕೆಗಳಿಗೆ ಚುನಾವಣೆ ನಡೆಸಲು ಸಿದ್ದತೆ ನಡೆಸಿದೆ. ಚುನಾವಣೆಯನ್ನು ಮೂರು ತಿಂಗಳು ಮುಂದೂಡಲು ಆಯೋಗ ಸಲ್ಲಿಸಿರುವ ಮೇಲನವಿಗೆ ಸುಪ್ರೀಂ ಕೋರ್ಟ್ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಚುನಾವಣಾ ಸಿದ್ದತೆಗಳನ್ನು ಆರಂಭಿಸಲಾಗಿದೆ.
ಜೂನ್ ತಿಂಗಳಲ್ಲಿ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಾರ್ಡ್‌ವಾರು ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷ ಐದು ನಗರಪಾಲಿಕೆಗಳ ಮೇಯರ್ ಗದ್ದುಗೆಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡು ವಿಶೇಷ ಚುನಾವಣಾ ತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ.ವಿಶೇಷವಾಗಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ, ಮನೆಮನೆಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಲು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ಅಲ್ಪಸಂಖ್ಯಾತರು ಹಾಗೂ ಅಹಿಂದ ಮತದಾರರ ಮೇಲೆ ಹೆಚ್ಚಿನ ಗಮನ ಹರಿಸುವಂತೆ ವಾರ್ಡ್ ಮಟ್ಟದ ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಹಲವು ಪ್ರದೇಶಗಳಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಗಳನ್ನು ನಡೆಸಲಾಗಿದ್ದು, ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಪ್ರತೀ ಮನೆಗೂ ತಲುಪಿಸುವ ಉದ್ದೇಶದಿಂದ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಹೇಳಲಾಗಿದೆ.
ಇನ್ನೊಂದೆಡೆ, ಮಾಜಿ ಬಿಬಿಎಂಪಿ ಸದಸ್ಯರ ರಾಜಕೀಯ ಚಟುವಟಿಕೆಗಳೂ ತೀವ್ರಗೊಂಡಿವೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಂದ ಅಂತರ ಕಾಯ್ದುಕೊಂಡಿರುವ ಕೆಲ ಮಾಜಿ ಪಾಲಿಕೆ ಸದಸ್ಯರು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಪಕ್ಷದ ವಲಯಗಳಿಂದ ಕೇಳಿಬಂದಿದೆ.
ಕೆಲವರು ಈಗಾಗಲೇ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿದ್ದು, ಶೀಘ್ರದಲ್ಲೇ ಅಧಿಕೃತ ಸೇರ್ಪಡೆ ನಡೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.ಒಟ್ಟಾರೆ, ಜಿಬಿಎ ವ್ಯಾಪ್ತಿಯ ಐದು ನಗರಪಾಲಿಕೆಗಳ ಅಧಿಕಾರ ಹಿಡಿಯಲು ಕಾಂಗ್ರೆಸ್ ನಾಯಕರು ಶತಾಯಗತಾಯ ಪ್ರಯತ್ನ ಆರಂಭಿಸಿದ್ದು, ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.
