Saturday, July 27, 2024
Homeರಾಜ್ಯರಾಜ್ಯದ ದಕ್ಷಿಣ ಒಳನಾಡಿನ ಉತ್ತಮ ಮಳೆ, ಕೃಷಿ ಚಟುವಟಿಕೆ ಚುರುಕು

ರಾಜ್ಯದ ದಕ್ಷಿಣ ಒಳನಾಡಿನ ಉತ್ತಮ ಮಳೆ, ಕೃಷಿ ಚಟುವಟಿಕೆ ಚುರುಕು

ಬೆಂಗಳೂರು,ಮೇ 11- ರಾಜ್ಯದಲ್ಲಿ ಕಳೆದೊಂದು ವಾರದಿಂದ ಮಳೆಯಾಗುತ್ತಿದ್ದು, ಇನ್ನೂ ಒಂದು ವಾರದವರೆಗೆ ಮಳೆ ಮುಂದುವರಿಯುವ ಮುನ್ಸೂಚನೆಗಳಿವೆ. ಕೆಲವು ಕಡೆಗಳಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರು ಮುಂಗಾರು ಹಂಗಾಮಿಗೆ ಭೂಮಿ ಹದ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಮೈಸೂರು, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಬೆಳೆಗಳ ಬಿತ್ತನೆ ಕಾರ್ಯವೂ ಆರಂಭಗೊಂಡಿದೆ. ಹಲಸಂದೆ, ಜೋಳ, ಎಳ್ಳು, ತೊಗರಿ ಮೊದಲಾದ ಬೆಳೆಗಳ ಬಿತ್ತನೆ ಮಾಡುತ್ತಿದ್ದಾರೆ. ವ್ಯಾಪಕ ಪ್ರಮಾಣದಲ್ಲಿ ಮಳೆಯಾಗದಿದ್ದರೂ ಅಲ್ಲಲ್ಲಿ ಮಳೆಯಾಗುತ್ತಿರುವುದರಿಂದ ರೈತರಲ್ಲಿ ಮಳೆ ಆಶಾಭಾವನೆ ಮೂಡಿಸಿದೆ.

ನಿನ್ನೆ ಸಂಜೆ ಹಾಗೂ ರಾತ್ರಿ ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ವ್ಯಾಪಕವಾಗಿ ಮಳೆಯಾಗಿದ್ದರೆ, ಮತ್ತೆ ಕೆಲವೆಡೆ ಚದುರಿದಂತೆ ಅಲ್ಲಲ್ಲಿ ಮಳೆಯಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಿದೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಕರಾವಳಿ ಭಾಗದಲ್ಲಿ 32 ಮಿ.ಮೀ., ಉತ್ತರ ಕರ್ನಾಟಕ ಭಾಗದಲ್ಲಿ 33 ಮಿ.ಮೀ. ಮಳೆಯಾಗಿದೆ. ದಕ್ಷಿಣ ಕರ್ನಾಟಕದಲ್ಲಿ 34 ಮಿ.ಮೀ. ಮಳೆಯಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ದಕ್ಷಿಣ ಕರ್ನಾಟಕದ ಕೆಲವೆಡೆ ಭಾರಿ ಮಳೆಯಾಗಿದೆ. ಬಿರುಗಾಳಿ, ಗುಡುಗು ಮತ್ತು ಮಿಂಚಿನಿಂದ ಕೂಡಿದ ಮಳೆಯಾಗಿದ್ದು, ಬಿರುಗಾಳಿ ಮಳೆಗೆ ಮರ ಹಾಗೂ ವಿದ್ಯುತ್‌ ಕಂಬಗಳು ಮುರಿದು ಬಿದ್ದ ವರದಿಯಾಗಿದೆ.

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ 58, ಮಂಡ್ಯ 57.2, ಕೆ.ಆರ್‌. ನಗರ 52.4, ಚಿಕ್ಕಬಳ್ಳಾಪುರ 34.9. ಚಿತ್ರದುರ್ಗ 34.1, ಹಾಸನ 20.4, ಕೊಡಗು 17, ಬೆಳಗಾವಿಯ ಯಡ್ರಾಮಿಯಲ್ಲಿ 17.2, ಕಲಬುರ್ಗಿ 13.2, ಕೆ.ಆರ್‌.ಪೇಟೆ, ಅರಕಲಗೂಡುಗಳಲ್ಲಿ 20.4, ಭಾಗಮಂಡಲ 17, ಮಾಗಡಿ 15.4, ಹೊಸಕೋಟೆ 16.4,ಅಜ್ಜಂಪುರ 14, ಪಾವಗಡ 10 ಮಿ.ಮೀ.ನಷ್ಟು ಮಳೆಯಾಗಿದೆ.

ಉಳಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಹವಾಮಾನ ಮುನ್ಸೂಚನೆಯಂತೆ ಮೇ 9ರ ನಂತರ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ನಾಳೆಯಿಂದ ಪೂರ್ವ ಮುಂಗಾರು ಮಳೆ ಮತ್ತಷ್ಟು ಚುರುಕಾಗುವ ಸಾಧ್ಯತೆಗಳಿದ್ದು, ಇನ್ನೂ ಹೆಚ್ಚಿನ ಮಳೆ ನಿರೀಕಿಸಬಹುದಾಗಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ಒಂದು ವಾರಕಾಲ ರಾಜ್ಯದಲ್ಲಿ ಚದುರಿದಂತೆ ಮಳೆಯಾಗುವ ಲಕ್ಷಣಗಳಿವೆ. ಮಹಾರಾಷ್ಟ್ರದ ವಿದರ್ಭದಿಂದ ತಮಿಳುನಾಡಿನವರೆಗೆ ಟ್ರಫ್‌ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಭಾಗಶಃ ಮೋಡ ಕವಿದ ವಾತಾವರಣ ರಾಜ್ಯದಲ್ಲಿ ಕಂಡುಬರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ನಿರಂತರವಾಗಿ ಅಲ್ಲಲ್ಲಿ ಮಳೆಯಾಗುತ್ತಿರುವುದರಿಂದ ಏರಿಕೆಯಾಗಿದ್ದ ಕನಿಷ್ಠ ಹಾಗೂ ಗರಿಷ್ಠ ತಾಪಮಾನಗಳಲ್ಲಿ ಇಳಿಕೆಯಾಗಿದ್ದು, ವಾಡಿಕೆ ಪ್ರಮಾಣದ ತಾಪಮಾನ ಕಂಡುಬರುತ್ತಿದೆ. ಸ್ಥಳೀಯ ಹವಾಮಾನ ಮುನ್ಸೂಚನೆ ಪ್ರಕಾರ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಭಾಗಶಃ ಮೋಡಕವಿದ ವಾತಾವರಣ ಇರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆ ಇದೆ. ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾದರೆ, ಮತ್ತೆ ಕೆಲವೆಡೆ ಗುಡುಗು, ಮಿಂಚು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.

RELATED ARTICLES

Latest News