ನವದೆಹಲಿ, ಡಿ. 2- ಮುಂಬರುವ 2024 ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿರುವ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಹಲವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತಗಳ ಎಣಿಕೆ ನಾಳೆ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿ ಬಹುತೇಕ ಮಧ್ಯಾಹ್ನದೊಳಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಈಶಾನ್ಯ ರಾಜ್ಯವಾದ ಮಿಜೋರಾಂನಲ್ಲಿ ಮತಗಳ ಎಣಿಕೆ ಸೋಮವಾರ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಈ ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯ ಹೆಚ್ಚಾಗಿರುವುದರಿಂದ ನಾಳೆ ಭಾನುವಾರ ಪ್ರಾರ್ಥನೆ ಸೇರಿದಂತೆ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡಬೇಕೆಂದು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಆಯೋಗ ಸೋಮವಾರ ಮತ ಎಣಿಕೆ ನಡೆಸಲಿದೆ.
2024 ರ ಲೋಕಸಭೆ ಚುನಾವಣಾ ದೃಷ್ಟಿಯಿಂದ ಈ ಐದು ರಾಜ್ಯಗಳ ಫಲಿತಾಂಶ ಬಿಜೆಪಿ, ಕಾಂಗ್ರೆಸ್ ಹಾಗೂ ವಿವಿಧ ಪ್ರಾದೇಶಿಕ ಪಕ್ಷಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಬಿಜೆಪಿ ನೇತೃತ್ವದ ಎನ್‍ಡಿಎ ಶತ ಪ್ರಯತ್ನ ನಡೆಸಿದ್ದರೆ ಫಲಿತಾಂಶದ ಮೂಲಕವೇ ಪ್ರಧಾನಿ ನರೇಂದ್ರ ಮೋದಿ ವೇಗಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಹರಸಾಹಸ ಪಡುತ್ತಿದೆ.
ಮೇಲ್ನೋಟಕ್ಕೆ ಫಲಿತಾಂಶ ಕೇಂದ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ. ವಿಧಾನಸಭೆ ಚುನಾವಣೆಗಳು ಆಯಾ ರಾಜ್ಯಗಳ ಸ್ಥಳೀಯ ವಿಷಯಗಳ ಮೇಲೆ ನಡೆಯುವುದರಿಂದ ಲೋಕಸಭೆ ಚುನಾವಣೆಗೂ, ಈ ಚುನಾವಣೆಗೂ ಹೋಲಿಕೆ ಮಾಡುವಂತಿಲ್ಲ ಎಂಬುದು ರಾಜಕೀಯ ಪಕ್ಷಗಳ ಮುಖಂಡರ ವಾದವಾಗಿದೆ.
ಆದರೆ ಜನರ ನಾಡಿಮಿಡಿತವನ್ನು ಅರಿಯಲು ಈ ಚುನಾವಣೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಸೆಮಿಫೈನಲ್ ಎಂದೇ ಹೇಳಲಾಗುತ್ತದೆ. ಹೆಚ್ಚು ರಾಜ್ಯಗಳನ್ನು ಗೆದ್ದ ಪಕ್ಷ ಮತದಾರರು ತಮ್ಮ ಪರವಾಗಿ ಇದ್ದಾರೆ. ಇದು ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಬಿಂಬಿಸಿಕೊಳ್ಳುವ ಲೆಕ್ಕಾಚಾರದಲ್ಲಿವೆ.
ಇದಕ್ಕೆ ವ್ಯತಿರಿಕ್ತ ಎನ್ನುವಂತೆ 2018 ರಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಗೆದ್ದು ಬೀಗಿತ್ತು. ಆದರೆ 6 ತಿಂಗಳ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಈ ಮೂರೂ ರಾಜ್ಯಗಳಲ್ಲೂ ಬಿಜೆಪಿ ಶೇ.90 ಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆದ್ದು ಬೀಗಿತ್ತು. ಅದರಲ್ಲೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ 25 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತ್ತು. ಹೀಗೆ ಫಲಿತಾಂಶದ ಬಗ್ಗೆ ನಾನಾ ರಾಜಕೀಯ ಲೆಕ್ಕಾಚಾರಗಳು ಪ್ರಾರಂಭವಾಗಿದೆ.
ಕಿಂಗ್ ಚಾಲ್ರ್ಸ್ ಪರಿಸರ ಸಂರಕ್ಷಣೆ ಕಾರ್ಯ ಶ್ಲಾಘನೀಯ; ಮೋದಿ
ಮತದಾನ ಮುಗಿದ ಬಳಿಕ ವಿವಿಧ ಖಾಸಗಿ ಸುದ್ದಿವಾಹಿನಿಗಳು ನಡೆಸಿರುವ ಮತಗಟ್ಟೆ ಸಮೀಕ್ಷೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಸಿಹಿಕಹಿಯನ್ನೇ ಮತದಾರ ನೀಡುವ ಸುಳಿವು ಕೊಟ್ಟಿದ್ದಾನೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯಬಹುದೆಂದು ಸಮೀಕ್ಷೆಗಳು ಹೇಳಿದರೆ ಛತ್ತೀಸ್‍ಗಢ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದೆಂಬ ಸುಳಿವು ಸಿಕ್ಕಿದೆ. ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಎಂಎನ್‍ಎಫ್ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳಿವೆ.
ರಾಜಸ್ಥಾನದಲ್ಲಿ ಒಂದು ಬಾರಿ ಆಡಳಿತ ನಡೆಸಿದ ಪಕ್ಷ ಮತ್ತೊಂದು ಬಾರಿಗೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ನಂಬಿಕೆಯನ್ನು ಮುಖ್ಯಮಂತ್ರಿ ಗೆಹ್ಲೊಟ್ ತಮ್ಮ ಜಾದು ನಡೆಸಲಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಫಲಿತಾಂಶಕ್ಕೂ ಮುನ್ನವೇ ಗೆಹ್ಲೊಟ್ ರಾಜ್ಯಪಾಲ ಕಲ್‍ರಾಜ್ ಮಿಶ್ರಾ ಅವರನ್ನು ಭೇಟಿಯಾಗಿರುವುದು ಕುತೂಹಲಕಾರಿಯಾಗಿದೆ. ಈ ಬೆಳವಣಿಗೆಗಳ ನಡುವೆಯೇ ಬಿಜೆಪಿ ನಾಯಕಿ ಮಾಜಿ ಸಿಎಂ ವಸುಂಧರಾ ರಾಜೇ ಕೂಡ ಕಳೆದ ರಾತ್ರಿ ದಿಢೀರನೇ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.
ನಾಲ್ಕು ಬಾರಿ ಆಡಳಿತ ನಡೆಸಿರುವ ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ಮತ್ತೆ ಅಧಿಕಾರಕ್ಕೆ ಬರುವ ಧಾವಂತದಲ್ಲಿದೆ. ಬಿಜೆಪಿಗೆ ಭರ್ಜರಿ ಠಕ್ಕರ್ ಕೊಟ್ಟಿರುವ ಕಾಂಗ್ರೆಸ್ ಕೂಡ ಅಧಿಕಾರಕ್ಕೆ ಬರುತ್ತೇವೆ ಎಂಬ ಉಮೇದಿನಲ್ಲಿದೆ. ಬಹುತೇಕ ಮತಗಟ್ಟೆ ಸಮೀಕ್ಷೆಗಳು ಛತ್ತೀಸ್‍ಗಢದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದೆಂದು ಸಮೀಕ್ಷೆ ಹೇಳಿದೆ.
ಎರಡು ಬಾರಿ ಅಧಿಕಾರಕ್ಕೆ ಬಂದ ತೆಲಂಗಾಣದಲ್ಲಿ ಈ ಬಾರಿ ಸಿಎಂ ಕೆ.ಸಿ.ಚಂದ್ರಶೇಖರ್ ರಾವ್ ಅವರ ಆಡಳಿತ ವಿರೋಧಿ ಅಲೆಯಿಂದ ಬಿಆರ್‍ಎಸ್‍ಗೆ ಹಿನ್ನಡೆಯಾಗಬಹುದೆಂದು ಹೇಳಲಾಗುತ್ತದೆ. ಕಾಂಗ್ರೆಸ್ ಇಲ್ಲಿ ಅಧಿಕಾರಕ್ಕೆ ಬರಬಹುದು ಇಲ್ಲವೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಸುಳಿವು ಸಿಕ್ಕಿದೆ. ಫಲಿತಾಂಶಕ್ಕೂ ಮುನ್ನವೇ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ಹಿಡಿದುಕೊಳ್ಳಲು ಮುಂದಾಗಿವೆ.
ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಶಾಸಕರ ಕುದುರೆ ವ್ಯಾಪಾರ ನಡೆಯಬಹುದೆಂಬ ಭೀತಿಯಿಂದ ಈಗಾಗಲೇ ಅನೇಕ ಕಡೆ ರೆಸಾರ್ಟ್ ರಾಜಕೀಯ ಕೂಡ ಆರಂಭವಾಗಿದೆ. ಒಂದು ವೇಳೆ ಎಲ್ಲರ ನಿರೀಕ್ಷೆಗಳನ್ನೂ ತಲೆಕೆಳಗೆ ಮಾಡಿ ಯಾವುದಾದರೂ ಪಕ್ಷಕ್ಕೆ ಸ್ಪಷ್ಟ ಜನಾದೇಶ ಸಿಕ್ಕರೆ ಕುದುರೆ ವ್ಯಾಪಾರವೂ ಇಲ್ಲ, ರೆಸಾರ್ಟ್‍ಗೆ ತೆರಳುವ ಪ್ರಮೇಯವೂ ಉದ್ಭವಿಸುವುದಿಲ್ಲ.