Thursday, December 5, 2024
Homeರಾಜಕೀಯ | Politics2 ಕುಟುಂಬಗಳ ಕದನ : ಚನ್ನಪಟ್ಟಣದಲ್ಲಿ ಡಿಕೆ ಬ್ರದರ್ಸ್ ಚಕ್ರವ್ಯೂಹ ಭೇದಿಸುತ್ತಾರಾ ಅಭಿಮನ್ಯು ನಿಖಿಲ್..?

2 ಕುಟುಂಬಗಳ ಕದನ : ಚನ್ನಪಟ್ಟಣದಲ್ಲಿ ಡಿಕೆ ಬ್ರದರ್ಸ್ ಚಕ್ರವ್ಯೂಹ ಭೇದಿಸುತ್ತಾರಾ ಅಭಿಮನ್ಯು ನಿಖಿಲ್..?

Battle of 2 families: Will Abhimanyu Nikhil break DK Brothers' maze in Channapatnam

ಬೆಂಗಳೂರು,ಅ.25- ರಾಜಕೀಯ ಜಿದ್ದಾಜಿದ್ದಿನ ಹೋರಾಟಕ್ಕೆ ಹೆಸರಾಗಿರುವ ರಾಮನಗರ ಜಿಲ್ಲೆಯಲ್ಲಿ ಈಗ ತೀವ್ರ ಪೈಪೋಟಿಯಿಂದ ಕೂಡಿದ ಉಪಚುನಾವಣೆ ನಡೆಯುತ್ತಿರುವುದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ.

ಚನ್ನಪಟ್ಟಣದಲ್ಲಿ ರಾಜಕೀಯ ಸಂಘರ್ಷ ಈಗಾಗಲೇ ತಾರಕಕ್ಕೇರಿದೆ. ಬೊಂಬೆ ನಾಡಿನಲ್ಲಿ ನಡೆಯುತ್ತಿರುವ ಈ ಉಪಚುನಾವಣೆಯು ಕಾಂಗ್ರೆಸ್‌‍ ಮತ್ತು ಜೆಡಿಎಸ್‌‍ ನಡುವಿನ ಶಕ್ತಿ ಪ್ರದರ್ಶನಕ್ಕೆ ಪ್ರಮುಖ ವೇದಿಕೆಯಾಗಿ ಮಾರ್ಪಟ್ಟಿದೆ.

ಮೇಲ್ನೋಟಕ್ಕೆ ಕಾಂಗ್ರೆಸ್‌‍ ಮತ್ತು ಜೆಡಿಎಸ್‌‍ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟರೂ ಇದು ರಾಜಕೀಯ ಕಡುವೈರಿಗಳಾದ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವಿನ ಸಮರವೆಂದೇ ಬಿಂಬಿಸಲಾಗುತ್ತಿದೆ. ಹೀಗಾಗಿ ಈ ಉಪಚುನಾವಣೆ ಮದಗಜಗಳ ರೀತಿಯ ಕದನವೆಂದೇ ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.

2018ರಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌‍ ಮತ್ತು ಜೆಡಿಎಸ್‌‍ ಮೈತ್ರಿ ಸರ್ಕಾರದಲ್ಲಿ ಮಾತ್ರ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್‌ ರಾಜಕೀಯವಾಗಿ ಮಿತ್ರರಾಗಿದ್ದರು. ಸರ್ಕಾರ ಪತನವಾಗುತ್ತಿದ್ದಂತೆ ಇಬ್ಬರ ನಡುವಿನ ಮಿತ್ರತ್ವ ಮರೆಯಾಗಿ ಆರೋಪ-ಪ್ರತ್ಯಾರೋಪ ಮುನ್ನೆಲೆಗೆ ಬಂದವು. ತಾವು ಬದ್ಧ ವೈರಿಗಳೆಂಬುದನ್ನು ಬಹಿರಂಗಗೊಳಿಸಿದ್ದಾರೆ.

ಮೈತ್ರಿ ಸರ್ಕಾರಕ್ಕೂ ಮುನ್ನವೂ ರಾಜಕೀಯವಾಗಿ ಪರಸ್ಪರ ವಿರೋಧಿಗಳೇ ಆಗಿದ್ದರು. ಚುನಾವಣೆಗಳಲ್ಲಿ ಎದುರಾಳಿಗಳಾಗಿ ಸ್ಪರ್ಧಿಸಿ ಸೋಲು-ಗೆಲುವು ಎರಡನ್ನೂ ಇಬ್ಬರೂ ಕಂಡಿದ್ದಾರೆ.

ರಾಜಕೀಯ ಭವಿಷ್ಯ: ಕಾಂಗ್ರೆಸ್‌‍ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಕಳೆದೆರಡು ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದಾರೆ. ರಾಜಕೀಯವಾಗಿ ನೆಲೆಯೂರಲು ಅವರಿಗೆ ಈ ಚುನಾವಣೆಯ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆಗಿಳಿದಿದ್ದಾರೆ. ಈ ಚುನಾವಣೆಯಲ್ಲಿ ಅವರ ರಾಜಕೀಯ ಭವಿಷ್ಯವೂ ಅಡಗಿದೆ.

ಅದೇ ರೀತಿ ಎನ್‌ಡಿಎ ಅಭ್ಯರ್ಥಿಯಾಗಿರುವ ಜೆಡಿಎಸ್‌‍ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರ ಭವಿಷ್ಯವೂ ಈ ಉಪಚುನಾವಣೆಯಲ್ಲಿ ಅಡಗಿದೆ. ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಡಿ.ಕೆ.ಶಿವಕುಮಾರ್‌ ಅವರಿಗೂ, ಈ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಕುಮಾರಸ್ವಾಮಿ ಅವರಿಗೂ ಉಪಚುನಾವಣೆ ಪ್ರತಿಷ್ಠೆಯಾಗಿದೆ.

ಮೇಲ್ನೋಟಕ್ಕೆ ಉಪಚುನಾವಣೆಯಾದರೂ ಕಾಂಗೆಸ್‌‍, ಜೆಡಿಎಸ್‌‍ ಹಾಗೂ ಬಿಜೆಪಿಯ ಭವಿಷ್ಯ ಅಡಗಿದೆ ಎಂದರೆ ತಪ್ಪಾಗಲಾರದು. ಈ ಕಾರಣಕ್ಕಾಗಿಯೇ ಈ ಮೂವರು ನಾಯಕರು ಚನ್ನಪಟ್ಟಣವನ್ನು ತಮ ಹಿಡಿತದಲ್ಲಿಟ್ಟುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.ಈಗ ಯೋಗೇಶ್ವರ್‌ ಬಿಜೆಪಿ ತೊರೆದು ಹಸ್ತಲಾಘವ ಮಾಡಿರುವುದರಿಂದ ಕಾಂಗ್ರೆಸ್‌‍ಗೆ ನವಚೈತನ್ಯ ದೊರೆತಂತಾಗಿದೆ. ಆದರೆ, ಜೆಡಿಎಸ್‌‍ ಯಥಾಸ್ಥಿತಿಯಲ್ಲಿದ್ದು, ತೀವ್ರ ಪೈಪೋಟಿ ನೀಡುವ ಉತ್ಸಾಹದಲ್ಲಿದೆ.

ಮತ ಲೆಕ್ಕಾಚಾರ: ಬಿಜೆಪಿ-ಜೆಡಿಎಸ್‌‍ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್‌‍ ವಿರುದ್ಧ ಸಂಘಟಿತ ಹೋರಾಟವನ್ನು ಈ ಚುನಾವಣೆಯಲ್ಲಿ ನಡೆಸುತ್ತಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ 96,592 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದರು. ಒಟ್ಟಾರೆ ಶೇ.48.83ರಷ್ಟು ಮತ ಗಳಿಸಿದ್ದರು.

ಪರಾಭವಗೊಂಡಿದ್ದ ಯೋಗೇಶ್ವರ್‌ 80,677 ಮತಗಳನ್ನು ಗಳಿಸಿ 2ನೇ ಸ್ಥಾನದಲ್ಲಿದ್ದರು. ಶೇ.40.79ರಷ್ಟು ಮತ ಪಡೆದಿದ್ದರು.

ಮತ ಲೆಕ್ಕಾಚಾರ:
ಕಾಂಗ್ರೆಸ್‌‍ ಅಭ್ಯರ್ಥಿಯಾಗಿದ್ದ ಎಸ್‌‍.ಗಂಗಾಧರ್‌ ಶೇ.7.77ರಷ್ಟು ಮತ ಪಡೆದಿದ್ದರು. ಅಂದರೆ 15,374 ಮತಗಳು ಲಭಿಸಿದ್ದವು. ಈ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಉಪಚುನಾವಣೆಯಲ್ಲಿ ದೊರೆಯಬಹುದಾದ ಮತಗಳ ಲೆಕ್ಕಾಚಾರವನ್ನು ಕಾಂಗ್ರೆಸ್‌‍ ಮತ್ತು ಎನ್‌ಡಿಎ ನಾಯಕರು ಮಾಡತೊಡಗಿದ್ದಾರೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಒಟ್ಟು 2,32,836 ಮತದಾರರು ಇದ್ದು, ಇದರಲ್ಲಿ 1,12,271 ಪುರುಷ, 1,20,557 ಮಹಿಳೆಯರು ಹಾಗೂ 8 ಇತರೆ ಮತದಾರರು ಇದ್ದಾರೆ.ಈ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ಬಹುಸಂಖ್ಯಾತರಾಗಿದ್ದು, ನಿರ್ಣಾಯಕ ಪಾತ್ರವನ್ನು ಅವರೇ ವಹಿಸುತ್ತಾರೆ ಎಂಬ ಚರ್ಚೆ ರಾಜಕೀಯವಾಗಿ ನಡೆಯುತ್ತಿದೆ. ಆದರೆ, ಕಾಂಗ್ರೆಸ್‌‍ನಿಂದ ದೂರ ಸರಿದಿದ್ದ ಸಾಂಪ್ರದಾಯಿಕ ಮತಗಳು ಯೋಗೇಶ್ವರ್‌ ಸೇರ್ಪಡೆಯಿಂದಾಗಿ ಮತ್ತೆ ಕಾಂಗ್ರೆಸ್‌‍ನತ್ತ ವಾಲುತ್ತಿವೆ.

ಅದೇ ರೀತಿ ಸಾಂಪ್ರದಾಯಿಕ ಬಿಜೆಪಿ ಮತಗಳು ಬದಲಾಗುವುದಿಲ್ಲ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಪದೇ ಪದೇ ಯೋಗೇಶ್ವರ್‌ ಪಕ್ಷಾಂತರ ಮಾಡುತ್ತಾರೆ. ಪಕ್ಷದ ತತ್ವ, ಸಿದ್ಧಾಂತಕ್ಕೆ ಕಟ್ಟು ಬಿದ್ದವರಲ್ಲ. ತಮ ರಾಜಕೀಯ ಏಳ್ಗೆಯನಷ್ಟೇ ನೋಡುತ್ತಾರೆ ಎಂಬ ಭಾವನೆಯೂ ಇದೆ.

ನಿಖಿಲ್‌ ಕುಮಾರಸ್ವಾಮಿ ಅವರು ಎನ್‌ಡಿಎ ಅಭ್ಯರ್ಥಿಯಾಗಿರುವುದು ಜೆಡಿಎಸ್‌‍ ಮುಖಂಡರು, ಕಾರ್ಯಕರ್ತರಲ್ಲಿ ಹೊಸ ಹುಮಸ್ಸು ಉಂಟಾಗಿದ್ದು, ಉತ್ಸಾಹದಿಂದ ಚುನಾವಣೆಯಲ್ಲಿ ತೊಡಗಿಕೊಂಡಿದ್ದಾರೆ.

ಈಗಾಗಲೇ ಮಂಡ್ಯ ಲೋಕಸಭಾ ಚುನಾವಣೆ, ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಇದರಿಂದ ಅನುಕಂಪ ದೊರೆಯಬಹುದೆಂಬ ಚರ್ಚೆಯೂ ಇದೆ. ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ಮೊಮಗ, ಕುಮಾರಸ್ವಾಮಿ ಅವರ ಪುತ್ರ ಎಂಬುದು ಕೂಡ ಗಮನಾರ್ಹವಾಗಲಿದೆ.

ಕ್ಷೇತ್ರದಲ್ಲಿ ಒಂದು ಅಂದಾಜಿನ ಪ್ರಕಾರ ಶೇ.50ಕ್ಕೂ ಹೆಚ್ಚು ಅಂದರೆ ಸುಮಾರು 1.5 ಲಕ್ಷಕ್ಕೂ ಹೆಚ್ಚು ಒಕ್ಕಲಿಗ ಮತದಾರರು ಇದ್ದಾರೆ. 25ರಿಂದ 35 ಸಾವಿರದಷ್ಟು ಅಲ್ಪಸಂಖ್ಯಾತ ಮತಗಳಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮತಗಳು 40 ಸಾವಿರದಷ್ಟು ಇದ್ದು, ಹೆಚ್ಚು ಕಡಿಮೆ ಹಿಂದುಳಿದ ವರ್ಗಗಳ ಮತಗಳು ಇಷ್ಟೇ ಇವೆ ಎಂದು ಅಂದಾಜಿಸಲಾಗುತ್ತಿದೆ.

ಈ ಕ್ಷೇತ್ರದದಲ್ಲಿ ಇತರೆ ಅಭ್ಯರ್ಥಿಗಳಿದ್ದರೂ ಇವರಿಬ್ಬರ ನಡುವೆಯೇ ತೀವ್ರ ಸ್ಪರ್ಧೆ ಏರ್ಪಡಲಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ನಿಖಿಲ್‌ ಕುಮಾರಸ್ವಾಮಿ ಮತ್ತು ಯೋಗೇಶ್ವರ್‌ ಪ್ರಬಲ ಎದುರಾಳಿ ಆಗಿರುವುದರಿಂದ ಮತದಾರರ ಒಲವು ಯಾರತ್ತ ವಾಲಿದೆ ಎಂಬುದು ಮಾತ್ರ ನಿಗೂಢವಾಗಿದೆ. ಜೆಡಿಎಸ್‌‍ ಮತ್ತು ಕಾಂಗ್ರೆಸ್‌‍ ಈ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯ ಮೇಲೆ ಮತ ಗಳಿಕೆಯಾಗಲಿದೆಯೋ ಅಥವಾ ರಾಜಕೀಯ ಮೇಲಾಟದ ಆಧಾರದ ಮೇಲೆ ಮತ ಚಲಾವಣೆಯಾಗುತ್ತವೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.

RELATED ARTICLES

Latest News