ಬೆಂಗಳೂರು, ಏ.8- ನಗರದಲ್ಲಿ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಕ್ರಿಸ್ಟೆಲ್ಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 4 ಕೋಟಿ ಬೆಲೆ ಬಾಳುವ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಹೆನ್ರಿ ಚುಕ್ವುಮೇಕಾ ಬಂಧಿತ ವಿದೇಶಿ ಡ್ರಗ್ ಪೆಡ್ಲರ್. ಈತ ನಗರದ ಜಾಲಹಳ್ಳಿಯ ಸಪ್ತಗಿರಿ ಕಾಲೇಜ್ ರಸ್ತೆಯ ಮನೆಯೊಂದನ್ನು ಬಾಡಿಗೆ ಪಡೆದು ವಾಸವಾಗಿದ್ದನು.
ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಡ್ರಗ್ ಪೆಡ್ಲರ್ನು ಮಾದಕ ವಸ್ತು ಮಾರಾಟ ಮಾಡುತ್ತಿದ್ದಾನೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮನೆಯೊಂದರ ಮೇಲೆ ದಾಳಿ ಮಾಡಿ ವಿದೇಶಿ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದು 4 ಕೆಜಿ ತೂಕದ ಎಂ.ಡಿ.ಎಂ.ಎ ಕ್ರಿಸ್ಟೆಲ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 4 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
ಈತನು ವಿದೇಶದಲ್ಲಿ ನೆಲೆಸಿರುವ ಪರಿಚಯಸ್ಥ ಡ್ರಗ್ಸ್ ಪೆಡ್ಲರ್ಗಳಿಂದ ಎಂಡಿಎಂಎ ಕ್ರಿಸ್ಟೆಲ್ ಅನ್ನು ಕಡಿಮೆ ಬೆಲೆಗೆ ಖರೀದಿಸಿ, ಕೊರಿಯರ್ ಮೂಲಕ ಬೆಂಗಳೂರಿಗೆ ತರಿಸಿಕೊಂಡು, 1 ಗ್ರಾಂ ಎಂಡಿಎಂಎ ಕ್ರಿಸ್ಟೆಲ್ಗೆ 8 ರಿಂದ 10 ಸಾವಿರಗಳಂತೆ ಪರಿಚಯಸ್ಥ ಗಿರಾಕಿಗಳಿಗೆ, ವಿದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದುದು ವಿಚಾರಣೆಯಿಂದ ಗೊತ್ತಾಗಿದೆ.
ಅಸ್ಸಾಂನ ಡ್ರಗ್ ಪೆಡ್ಲರ್ ಬಂಧನ:
ಒಡಿಶಾದಿಂದ ಮಾದಕ ವಸ್ತುವನ್ನು ಕಡಿಮೆ ಬೆಲೆಗೆ ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಾ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ ಅಸ್ಸಾಂ ಮೂಲದ ಡ್ರಗ್ ಪೆಡ್ಲರ್ನನ್ನು ಸಿಸಿಬಿ ಪೊಲೀಸರು ಬಂಧಿಸಿ, 10 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬಾಬಾಜ್ಯೋತಿ ದಿಲೋಯ್ (28) ಬಂಧಿತ ಆರೋಪಿ. ಈತ 12 ವರ್ಷದ ಹಿಂದೆ ನಗರಕ್ಕೆ ಬಂದು ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದನು. ನಂತರ ಆ ಕೆಲಸ ತೊರೆದು ಸ್ವಿಗ್ಗಿ ಡಿಲೆವರಿ ಬಾಯ್ ಕೆಲಸ ಮಾಡಿಕೊಂಡಿದ್ದನು. ತದನಂತರದಲ್ಲಿ ಈ ವೃತ್ತಿಯನ್ನು ಬಿಟ್ಟು ವರ್ತೂರು ವ್ಯಾಪ್ತಿಯಲ್ಲಿ ವಾಸವಾಗಿದ್ದುಕೊಂಡು ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿಸಿ ಕೊಂಡಿದ್ದನು. ಬಂಧಿತನಿಂದ 10 ಲಕ್ಷ ಮೌಲ್ಯದ 5.5 ಕೆಜಿ ಗಾಂಜಾ, ಮೊಬೈಲ, ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಸಿಸಿಬಿ ಪೊಲೀಸರು ವಶಪಡಿಸಿ ಕೊಂಡಿದ್ದಾರೆ.