ಬೆಂಗಳೂರು,ಅ.12-ಭಾರತದ ಪ್ರಮುಖ ಐಟಿ, ಜೈವಿಕ ತಂತ್ರಜ್ಞಾನ ಮತ್ತು ಉದ್ಯಮ ವಲಯದ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಸಂಚಾರ ದಟ್ಟಣೆ ಇದೀಗ ಕೇವಲ ಸಾರ್ವಜನಿಕರ ದೈನಂದಿನ ಸಮಸ್ಯೆಯಾಗಿ ಉಳಿದಿಲ್ಲ. ಅದು ನಗರದ ಆರ್ಥಿಕ ಬೆಳವಣಿಗೆ, ಉತ್ಪಾದಕತೆ ಮತ್ತು ಭವಿಷ್ಯದ ಅಭಿವೃದ್ಧಿಗೆ ಸವಾಲಾಗಿ ಪರಿಣಮಿಸಿದೆ. ಸಂಚಾರ ದಟ್ಟಣೆಯಿಂದಾಗಿ ಪ್ರತಿವರ್ಷ ಏಳು ಲಕ್ಷಕ್ಕೂ ಅಧಿಕ ಉತ್ಪಾದಕ ಗಂಟೆಗಳು ವ್ಯರ್ಥವಾಗುತ್ತಿದ್ದು, ಸುಮಾರು 1,200 ಕೋಟಿ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂಬ ಅಂದಾಜು ಆತಂಕ ಮೂಡಿಸಿದೆ.
2026ರ ಮೊಬಿಲಿಟಿ ಸಿಂಪೋಸಿಯಂನಲ್ಲಿ ಮಾತನಾಡಿದ ಬಯೋಕಾನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಮಜುಂದಾರ್-ಶಾ, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಗರದ ಆರ್ಥಿಕ ಭವಿಷ್ಯದ ಕುರಿತು ಗಂಭೀರ ಎಚ್ಚರಿಕೆಯ ಸಂಕೇತ ಎಂದು ಎಚ್ಚರಿಸಿದ್ದಾರೆ.
ದಟ್ಟಣೆಯಿಂದ ಉಂಟಾಗುವ ನಷ್ಟದ ಪ್ರಮಾಣ ಇನ್ನೂ ಹೆಚ್ಚಿರಬಹುದೆಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಕಾರ್ಪೊರೇಟ್ ಪ್ರಯಾಣ ವ್ಯವಸ್ಥೆಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಮೂವ್‌ಇನ್‌ಸಿಂಕ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಯಮಿಗಳು, ಜನಪ್ರತಿನಿಧಿಗಳು, ನಗರ ಆಡಳಿತದ ಅಧಿಕಾರಿಗಳು, ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಅಂತರರಾಷ್ಟ್ರೀಯ ತಜ್ಞರು ಭಾಗವಹಿಸಿ ಸಂಚಾರ ಸಮಸ್ಯೆಗೆ ಸಮಗ್ರ ಪರಿಹಾರ ಕಂಡುಕೊಳ್ಳುವ ಕುರಿತು ಚರ್ಚಿಸಿದ್ದಾರೆ.
ಸಂಚಾರ ದಟ್ಟಣೆಯೇ ದೊಡ್ಡ ಸವಾಲು
ವಿಶೇಷವಾಗಿ ಹೊರ ವರ್ತುಲ ರಸ್ತೆ (ಔಟರ್ ರಿಂಗ್ ರೋಡ್), ಪ್ರಮುಖ ಐಟಿ ಕಾರಿಡಾರ್‌ಗಳು ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ವಾಹನ ದಟ್ಟಣೆ ತೀವ್ರವಾಗಿರುವುದು ಉದ್ಯೋಗಿಗಳ ದೈನಂದಿನ ಪ್ರಯಾಣದ ಮೇಲೆ ಪರಿಣಾಮ ಬೀರುತ್ತಿದೆ. ಕಚೇರಿಗಳಿಗೆ ತೆರಳಲು ಮತ್ತು ಮನೆಗೆ ಮರಳಲು ಗಂಟೆಗಟ್ಟಲೆ ರಸ್ತೆಯಲ್ಲೇ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಇದರಿಂದ ಉದ್ಯೋಗಿಗಳ ಸಮಯ, ಇಂಧನ ಮತ್ತು ಶ್ರಮ ವ್ಯರ್ಥವಾಗುವುದರ ಜತೆಗೆ ಕಂಪನಿಗಳ ಕಾರ್ಯಕ್ಷಮತೆ ಹಾಗೂ ನಗರದಲ್ಲಿ ಸರಕು ಮತ್ತು ಸೇವೆಗಳ ಚಲನವಲನಕ್ಕೂ ತೊಂದರೆಯಾಗುತ್ತಿದೆ. ಆಂಬುಲೆನ್ಸ್ ಗಳು, ಅಗ್ನಿಶಾಮಕ ವಾಹನಗಳು ಸೇರಿದಂತೆ ತುರ್ತು ಸೇವೆಗಳ ಸಂಚಾರಕ್ಕೂ ದಟ್ಟಣೆ ಅಡ್ಡಿ ಉಯಾಗುತ್ತಿದೆ.
ಸಮಸ್ಯೆ ಬಗೆಹರಿದಿಲ್ಲ:
ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹಲವು ವರ್ಷಗಳಿಂದ ರಸ್ತೆ ಅಭಿವೃದ್ಧಿ, ಮೇಲ್ಸೇತುವೆ, ಅಂಡರ್‌ಪಾಸ್, ಸಿಗ್ನಲ್‌ಗಳ ಸುಧಾರಣೆ ಮತ್ತು ಮೆಟ್ರೋ ರೈಲು ವಿಸ್ತರಣೆಯಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಮ ಮೆಟ್ರೋ ಸೇವೆಯ ವಿಸ್ತರಣೆಯು ಹಲವು ಪ್ರಯಾಣಿಕರಿಗೆ ಪರ್ಯಾಯ ಸಾರಿಗೆ ವ್ಯವಸ್ಥೆಯನ್ನು ಒದಗಿಸಿದ್ದರೂ, ನಗರಾದ್ಯಂತ ಸಂಚಾರದ ಒತ್ತಡವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗಿಲ್ಲ.
ನಗರದ ವಿವಿಧ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವ ಸಂದರ್ಭದಲ್ಲೈ ವಾಹನಗಳ ಸಂಖ್ಯೆ, ಜನಸಂಖ್ಯೆ ಮತ್ತು ಉದ್ಯೋಗ ಕೇಂದ್ರಗಳ ವಿಸ್ತರಣೆ ಸಾರಿಗೆ ವ್ಯವಸ್ಥೆಯ ಮೇಲೆ ನಿರಂತರ ಒತ್ತಡ ಹೇರುತ್ತಿವೆ. ಮತ್ತೊಂದೆಡೆ ಕಚೇರಿ ಸಮಯದಲ್ಲಿ ಒಂದೇ ಪ್ರದೇಶದತ್ತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಪ್ರಯಾಣಿಸುವುದರಿಂದ ಪ್ರಮುಖ ರಸ್ತೆಗಳಲ್ಲಿ ದಟ್ಟಣೆ ಹೆಚ್ಚುತ್ತಿದೆ.
ಇದರಿಂದ ಸ್ಪಷ್ಟವಾಗುವ ಸಂಗತಿಯೆಂದರೆ ರಸ್ತೆಗಳನ್ನು ವಿಸ್ತರಿಸುವುದು ಅಥವಾ ಹೊಸ ಮೇಲ್ಸೇತುವೆಗಳನ್ನು ನಿರ್ಮಿಸುವುದು ಮಾತ್ರ ದೀರ್ಘಕಾಲೀನ ಪರಿಹಾರವಾಗಲಾರದು. ಜನರು ಎಲ್ಲಿ ವಾಸಿಸುತ್ತಾರೆ? ಎಲ್ಲಿ ಕೆಲಸ ಮಾಡುತ್ತಾರೆ? ಸಾರ್ವಜನಿಕ ಸಾರಿಗೆಗೆ ಎಷ್ಟು ಸುಲಭವಾಗಿ ಸಂಪರ್ಕ ಹೊಂದುತ್ತಾರೆ ಮತ್ತು ನಗರದ ವಿವಿಧ ಭಾಗಗಳಲ್ಲಿ ಉದ್ಯೋಗಾವಕಾಶಗಳು ಹೇಗೆ ಹಂಚಿಕೆಯಾಗಿವೆ? ಎಂಬ ಅಂಶಗಳನ್ನೂ ಸಮಗ್ರವಾಗಿ ಪರಿಗಣಿಸಬೇಕಾಗಿದೆ.
3,000 ಬಸ್‌ಗಳನ್ನು ಸೇರ್ಪಡೆಗೊಳಿಸುವ ಗುರಿ:
ನಗರದ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸುಮಾರು 3,000 ಬಸ್‌ಗಳನ್ನು ಸೇರ್ಪಡೆಗೊಳಿಸುವ ಗುರಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಪ್ರಸ್ತಾಪಿಸಿದ್ದಾರೆ. ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜತೆಗೆ ಅವುಗಳ ಸಂಚಾರಕ್ಕೆ ಅನುಕೂಲವಾಗುವ ವ್ಯವಸ್ಥೆಯನ್ನೂ ರೂಪಿಸಬೇಕಿದೆ. ಬಸ್‌ಗಳು ಖಾಸಗಿ ವಾಹನಗಳಂತೆಯೇ ದಟ್ಟಣೆಯಲ್ಲಿ ಸಿಲುಕಿಕೊಂಡರೆ, ಅವುಗಳ ಸಂಖ್ಯೆಯ ಹೆಚ್ಚಳದಿಂದ ಮಾತ್ರ ಪ್ರಯಾಣದ ಸಮಯ ಕಡಿಮೆಯಾಗುವುದಿಲ್ಲ.
ಬೆಂಗಳೂರು ವಾಕ್ಸ್ ಸಂಸ್ಥಾಪಕ ಅರುಣ್ ಪೈ ಅವರು ಪಾದಚಾರಿ ಮಾರ್ಗಗಳ ಸಮಸ್ಯೆಗಳನ್ನು ಗುರುತಿಸಲು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸುವುದು, ಮರಗಳ ಸುತ್ತಲಿನ ಜಾಗವನ್ನು ಸಮರ್ಪಕವಾಗಿ ಬಳಸುವುದು ಹಾಗೂ ಹುಲ್ಲು-ಬ್ಲಾಕ್ ಪೇವರ್‌ಗಳಂತಹ ಪರ್ಯಾಯ ಮೇಲೈಗಳನ್ನು ಪರಿಗಣಿಸುವುದನ್ನು ಪ್ರಸ್ತಾಪಿಸಿದ್ದಾರೆ. ಆದರೆ ಪಾದಚಾರಿ ಮಾರ್ಗಗಳ ಮೇಲೆ ವಾಹನಗಳ ನಿಲುಗಡೆ, ಅನಧಿಕೃತ ಅತಿಕ್ರಮಣ, ಹಾಳಾದ ಮೇಲೈ ಮತ್ತು ಸುರಕ್ಷಿತ ರಸ್ತೆ ದಾಟುವ ವ್ಯವಸ್ಥೆಯ ಕೊರತೆಯಂತಹ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬೇಕಿದೆ.
ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಉಪಗ್ರಹ ನಗರಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾಪವೂ ಚರ್ಚೆಯಲ್ಲಿದೆ. ಆದರೆ ಉಪಗ್ರಹ ನಗರಗಳನ್ನು ಘೋಷಿಸುವುದಷ್ಟೇ ಸಾಕಾಗುವುದಿಲ್ಲ. ಅಲ್ಲಿ ಉದ್ಯೋಗಾವಕಾಶಗಳು, ವಸತಿ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಸಾರಿಗೆ ಮತ್ತು ಅಗತ್ಯ ನಾಗರಿಕ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕಿದೆ.
