ಬೆಂಗಳೂರು,ಮಾ.14- ಲಿವಿಂಗ್ ಟು ಗೆದರ್‌ನಲ್ಲಿದ್ದ ಯುವತಿಯನ್ನು ಕೊಲೆ ಮಾಡಿ ಆತಹತ್ಯೆ ಎಂಬಂತೆ ಬಿಂಬಿಸಿ ನಾಟಕವಾಡಿದ್ದ ಆರೋಪಿಯನ್ನು ವರ್ತೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಲತಃ ಕೊಡಗು ಜಿಲ್ಲೆ ಪೊನ್ನಂಪೇಟೆ ನಿವಾಸಿ ಅಯ್ಯಪ್ಪ (26) ಆರೋಪಿ.ಮೈಸೂರಿನಲ್ಲಿ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡಿರುವ ರಂಜಿತಾ (23) ಳನ್ನು ಅಯ್ಯಪ್ಪ ಪ್ರೀತಿಸುತ್ತಿದ್ದನು. ಈ ಬಗ್ಗೆ ರಂಜಿತಾ ತಾಯಿ ಜೊತೆ ಮಾತನಾಡಿ, ನಾನು ಈಗಾಗಲೇ ಮದುವೆಯಾಗಿದ್ದು, ಪತ್ನಿಗೆ ವಿಚ್ಚೇದನ ಕೊಟ್ಟು ನಿಮ ಮಗಳನ್ನು ಮದುವೆಯಾಗುವುದಾಗಿ ಹೇಳಿದ್ದಾನೆ.
ನಂತರ ಕೊಡತಿ ಗ್ರಾಮದ ರಾಮದಾಸ್ ಲೇಔಟ್‌ನ ಮನೆಯೊಂದರ 2ನೇ ಮಹಡಿಯ ಬಾಡಿಗೆ ಮನೆಯಲ್ಲಿ ರಂಜಿತಾ ಹಾಗೂ ಅಯ್ಯಪ್ಪ ಲಿವಿಂಗ್ ಟು ಗೆದರ್‌ನಲ್ಲಿದ್ದರು. ನಂತರದ ದಿನಗಳಲ್ಲಿ ಇವರಿಬ್ಬರ ಮಧ್ಯೆ ಜಗಳವಾಗಿದೆ. ಪ್ರತಿನಿತ್ಯ ವಿನಾಕಾರಣ ರಂಜಿತಾಗೆ ಕಿರುಕುಳ ನೀಡಲಾರಂಭಿಸಿದ್ದಾನೆ. ಈತನ ವರ್ತನೆಯಿಂದ ಬೇಸತ್ತು ತನ್ನ ತಾಯಿ ಜೊತೆ ಅಳಲು ತೋಡಿಕೊಂಡಿದ್ದಳು.
ಮಾ.12 ರಂದು ಬೆಳಗಿನ ಜಾವ 2.45 ರ ಸುಮಾರಿನಲ್ಲಿ ಮತ್ತೆ ಇವರಿಬ್ಬರ ನಡುವೆ ಜಗಳವಾಗಿದೆ. ಆ ವೇಳೆ ಅಯ್ಯಪ್ಪ ವೈಯರ್‌ನಿಂದ ರಂಜಿತಾ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಯಾರಿಗೂ ಅನುಮಾನ ಬಾರದಂತೆ ನೇಣು ಹಾಕಿದ್ದಾನೆ.ನಂತರ ರಂಜಿತಾ ಸಹೋದರಿ ಲಿಖಿತಾಗೆ ಕರೆ ಮಾಡಿ ನಿಮ ಅಕ್ಕ ನೇಣು ಹಾಕಿಕೊಂಡಿದ್ದಾಳೆ. ಸ್ಪರ್ಶ ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ಹೇಳಿದ್ದಾನೆ.
ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಮಹಿಳೆ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಮಗಳ ಸಾವಿನ ಸುದ್ದಿ ತಿಳಿದು ರಂಜಿತಾ ತಾಯಿ ಬಂದು ನೋಡಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ತನ್ನ ಮಗಳಿಗೆ ಮಾನಸಿಕ ದೈಹಿಕ ಹಿಂಸೆ ನೀಡಿ ಹಲ್ಲೆ ನಡೆಸಿದ್ದಾನೆ. ಜಾತಿ ನಿಂದನೆ ಮಾಡಿ ಕೊಲೆ ಮಾಡಿ ನೇಣು ಹಾಕಿದ್ದಾನೆಂದು ಅಯ್ಯಪ್ಪ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಯ್ಯಪ್ಪನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
