ಬೆಂಗಳೂರು, ಮಾ.14- ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿನ ಆಡಳಿತಾತ್ಮಕ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ 50 ವಿಭಾಗ ಹಾಗೂ 150 ಉಪವಿಭಾಗಗಳನ್ನು ರಚಿಸಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸುತ್ತೋಲೆ ಹೊರಡಿಸಿದ್ದಾರೆ.
ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024 ಅನ್ವಯ ಮೇ 15, 2025ರಿಂದ ಜಿಬಿಎ ಅಸ್ತಿತ್ವಕ್ಕೆ ಬಂದಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರದ್ದುಗೊಂಡಿದೆ. ಇದರೊಂದಿಗೆ ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ನಗರ ಪಾಲಿಕೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ.
ಈ ಹಿನ್ನೆಲೆಯಲ್ಲಿ 369 ವಾರ್ಡ್ ಗಳ ಪುನರ್ವಿಂಗಡಣೆ ಮಾಡಲಾಗಿದೆ.ಈ ವಾರ್ಡ್‌ಗಳ ಆಧಾರದ ಮೇಲೆ ಆಡಳಿತವನ್ನು ಇನ್ನಷ್ಟು ಸುಗಮಗೊಳಿಸಲು ಕಂದಾಯ, ಕಾಮಗಾರಿ ಹಾಗೂ ಆರೋಗ್ಯ ಇಲಾಖೆಗಳ ಕಾರ್ಯನಿರ್ವಹಣೆಗೆ ಒಟ್ಟು 50 ವಿಭಾಗ ಮತ್ತು 150 ಉಪವಿಭಾಗಗಳನ್ನು ರಚಿಸಲಾಗಿದೆ ಎಂದು ಜಿಬಿಎ ಅಯುಕ್ತರು ತಿಳಿಸಿದರು.
ನಗರ ಪಾಲಿಕೆವಾರು ವಿಭಾಗಗಳ ವಿವರ ಹೀಗಿದೆ:ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ 63 ವಾರ್ಡ್‌ಗಳಿಗೆ 7 ವಿಭಾಗ ಮತ್ತು 24 ಉಪವಿಭಾಗಗಳನ್ನು ರಚಿಸಲಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ 50 ವಾರ್ಡ್‌ಗಳಿಗೆ 7 ವಿಭಾಗ ಹಾಗೂ 22 ಉಪವಿಭಾಗಗಳನ್ನು ಮಾಡಲಾಗಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ 112 ವಾರ್ಡ್‌ಗಳಿಗೆ 15 ವಿಭಾಗ ಹಾಗೂ 45 ಉಪವಿಭಾಗಗಳನ್ನು ರಚಿಸಲಾಗಿದೆ. ಉತ್ತರ ನಗರ ಪಾಲಿಕೆಯಲ್ಲಿ 72 ವಾರ್ಡ್‌ಗಳಿಗೆ 11 ವಿಭಾಗ ಮತ್ತು 30 ಉಪವಿಭಾಗಗಳನ್ನು ಮಾಡಲಾಗಿದೆ.
ದಕ್ಷಿಣ ನಗರ ಪಾಲಿಕೆಯಲ್ಲಿ 72 ವಾರ್ಡ್‌ಗಳಿಗೆ 10 ವಿಭಾಗ ಹಾಗೂ 29 ಉಪವಿಭಾಗಗಳನ್ನು ರಚಿಸಲಾಗಿದೆ.ಈ ವ್ಯವಸ್ಥೆಯಿಂದ ನಗರ ಪಾಲಿಕೆಗಳ ಆಡಳಿತಾತ್ಮಕ ಕಾರ್ಯಗಳು ವೇಗವಾಗಿ ನಡೆಯಲಿದ್ದು, ಸಾರ್ವಜನಿಕರಿಗೆ ಸೇವೆ ನೀಡುವ ಪ್ರಕ್ರಿಯೆ ಇನ್ನಷ್ಟು ಸುಗಮವಾಗಲಿದೆ ಎಂದು ಮಹೇಶ್ವರ್ ರಾವ್ ತಿಳಿಸಿದ್ದಾರೆ.
