ಬೆಂಗಳೂರು,ಮಾ.21- ಕೆಲಸ ಮುಗಿಸಿಕೊಂಡು ನಡೆದುಕೊಂಡು ಹೋಗುತ್ತಿದ್ದ ಗ್ರಾನೈಟ್ ಕಂಪನಿ ಕಾರ್ಮಿಕನ ಅಡ್ಡಗಟ್ಟಿದ ದುಷ್ಕರ್ಮಿ ಚಾಕುವಿನಿಂದ ಕತ್ತು ಕೊಯ್ದು ಕೊಲೆಗೆ ಯತ್ನಿಸಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾದನಾಯಕನಹಳ್ಳಿಯ ಕಡಬಗೆರೆ ಗ್ರಾನೈಟ್ ಕಂಪನಿಯಲ್ಲಿ ಕಾರ್ಮಿಕನಾಗಿರುವ ನಾರಾಯಣ (38) ಎಂಬಾತ ಕೆಲಸ ಮುಗಿಸಿಕೊಂಡು ನಿನ್ನೆ ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು.
ವಿನಾಯಕನಗರದ ಪೆಟ್ರೋಲ್ ಬಂಕ್ ಬಳಿ ಕಾರ್ಮಿಕನನ್ನು ಅಡ್ಡಗಟ್ಟಿದ ದುಷ್ಕರ್ಮಿ ಏಕಾಏಕಿ ಚಾಕುವಿನಿಂದ ಅವರ ಗಂಟಲಿನ ಭಾಗಕ್ಕೆ ಚಾಕುವಿನಿಂದ ಇರಿದು ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಇರಿತಕ್ಕೆ ಒಳಗಾದ ಕಾರ್ಮಿಕ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಇದನ್ನು ಗಮನಿಸಿದ ದಾರಿ ಹೋಕರು ತಕ್ಷಣ ನಮ 112 ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.112 ಸಿಬ್ಬಂದಿ ಕೂಡಲೇ ಹೊಯ್ಸಳ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಸುದ್ದಿ ತಿಳಿದು ಎಎಸ್‌ಐ ಕೆಂಪರಾಜು, ಇನ್ಸ್ ಪೆಕ್ಟರ್ ಹರೀಶ್‌ಕುಮಾರ್ ಅವರು ತಕ್ಷಣ ಘಟನಾ ಸ್ಥಳಕ್ಕೆ ಹೋಗಿ ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಸುಂಕದಕಟ್ಟೆಯಲ್ಲಿರುವ ನರ್ಸಿಂಗ್‌ಹೋಂ ಗೆ ಕರೆದೊಯ್ದು ತುರ್ತು ಚಿಕಿತ್ಸೆ ಕೊಡಿಸಿ ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಕಾರ್ಮಿಕ ಪ್ರಾಣಾಪಾಯದಿಂದ ಪರಾಗಿದ್ದಾನೆ.
ಈ ಕಾರ್ಮಿಕನ ಪೂರ್ಣ ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ. ಕಾರ್ಮಿಕ ಸದ್ಯಕ್ಕೆ ಮಾತನಾಡುವ ಸ್ಥಿತಿಯಲ್ಲಿಲ್ಲ. ಆತ ಚೇತರಿಸಿಕೊಂಡ ಬಳಿಕವಷ್ಟೇ ಏತಕ್ಕಾಗಿ ಯಾರು ಚಾಕುವಿನಿಂದ ಇರಿದರು ಎಂಬುವುದು ಗೊತ್ತಾಗಲಿದೆ.
ಈ ಘಟನೆ ನಗರದ ನಾಗರಿಕರು, ಅಪರಾಧ ಸ್ಥಳವನ್ನು ಸುರಕ್ಷಿತ ಗೊಳಿಸುವಲ್ಲಿ ತೋರಿದ ಎಚ್ಚರಿಕೆ, ಹೊಯ್ಸಳ ತಂಡದ ಅತ್ಯುತ್ತಮ ಸ್ಪಂದನಾ ಸಮಯ ಹಾಗೂ ಸೇಫ್ ಸಿಟಿ ಯೋಜನೆಯಡಿ ನಗರ ಪೊಲೀಸರ ಜೀವ ರಕ್ಷಕ ಕ್ರಮಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ.ಇದು ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರ ಪ್ರಾಣ ರಕ್ಷಿಸುವಲ್ಲಿ ಅವರ ಬದ್ಧತೆಯನ್ನು ಪ್ರದರ್ಶಿಸುತ್ತದೆ.
