ಬೆಂಗಳೂರು,ಮಾ.21- ತಾಯಿ ಜೊತೆ ದೇವಸ್ಥಾನಕ್ಕೆ ಹೋಗುತ್ತಿದ್ದ ಬಾಲಕಿ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಇಂದು ಬೆಳಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದಾಸನಪುರ ಹೋಬಳಿ ಹನುಮಂತೇಗೌಡನ ಪಾಳ್ಯದ ನಿವಾಸಿ ರಾಜೇಂದ್ರ-ಲಾವಣ್ಯ ದಂಪತಿಯ ಮಗಳು ನಿಶ್ಚಿತಾ (4) ಮೃತಪಟ್ಟ ಬಾಲಕಿ.ಲಾವಣ್ಯ ಅವರು ಎರಡನೇ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ನಿಶ್ಚಿತಾಳನ್ನು ನಡೆಸಿಕೊಂಡು ದೇವಸ್ಥಾನಕ್ಕೆ ಇಂದು ಬೆಳಗ್ಗೆ 11.15 ರ ಸುಮಾರಿನಲ್ಲಿ ಹನುಮಂತೇಗೌಡನ ಪಾಳ್ಯದಲ್ಲಿ ಹೋಗುತ್ತಿದ್ದರು.
ಅತೀ ವೇಗವಾಗಿ ಬಂದ ಲಾರಿ ನಿಶ್ಚಿತಾಳಿಗೆ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ ಆಕೆಯ ಮೇಲೆಯೇ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.ಸುದ್ದಿ ತಿಳಿದು ಮಾದನಾಯಕನ ಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಣ್ಣೆದುರೇ ಮಗಳು ಸಾವನ್ನಪ್ಪಿರುವುದನ್ನು ಕಂಡ ತಾಯಿಯ ಗೋಳು ಮುಗಿಲುಮುಟ್ಟಿತು.
