Sunday, April 12, 2026
Homeಬೆಂಗಳೂರುಸಾಲ ತೀರಿಸಲು ಸರಗಳ್ಳತನಕ್ಕಿಳಿದಿದ್ದ ಕಾರು ಚಾಲಕನ ಬಂಧನ

ಸಾಲ ತೀರಿಸಲು ಸರಗಳ್ಳತನಕ್ಕಿಳಿದಿದ್ದ ಕಾರು ಚಾಲಕನ ಬಂಧನ

Car driver arrested for stealing money to repay debt

ಬೆಂಗಳೂರು,ಮಾ.21- ಸಾಲ ತೀರಿಸಲು ಸರಗಳ್ಳತನದ ಹಾದಿ ಹಿಡಿದಿದ್ದ ಚಾಲಕನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿ 2 ಲಕ್ಷ ಮೌಲ್ಯದ 14 ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.ಲಿಂಗರಾಜಪುರದ ನಿವಾಸಿ ಪ್ರಕಾಶ್‌ (42) ಬಂಧಿತ ಆರೋಪಿ. ಈ ಹಿಂದೆ ಆತ ಕಾರು ಚಾಲಕ ವೃತ್ತಿ ಮಾಡುತ್ತಿದ್ದನು. ಇದೀಗ ಟ್ರಾವೆಲ್‌್ಸ ವೊಂದರಲ್ಲಿ ಸೇರಿಕೊಂಡಿದ್ದನು.

ಆರೋಪಿ ಪ್ರಕಾಶ್‌ ಸಾಲ ಮಾಡಿಕೊಂಡಿದ್ದನು. ಸಾಲ ತೀರಿಸಲು ಹಣಕ್ಕಾಗಿ ಸರ ಎಗರಿಸುತ್ತಿದ್ದುದ್ದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.ಮಾ.10 ರಂದು ಎನ್‌ಆರ್‌ಐ ಲೇಔಟ್‌ 11ನೇ ಮುಖ್ಯ ರಸ್ತೆಯ ಅಪಾರ್ಟ್‌ಮೆಂಟ್‌ವೊಂದರ ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿ ಸರ ಎಗರಿಸಿ ಪರಾರಿಯಾಗಿದ್ದನು.

ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಶಿವಾಜಿನಗರದ ಮಾರ್ಕೆಟ್‌ ಬಳಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸರಗಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.

ಅಪಹರಿಸಿದ ಚಿನ್ನದ ಸರವನ್ನು ಕೆಆರ್‌ಪುರದ ಜ್ಯೂವೆಲರಿ ಅಂಗಡಿಯೊಂದರಲ್ಲಿ ಅಡಮಾನ ಇಟ್ಟಿರುವುದಾಗಿ ಹೇಳಿದ್ದು, ಪೊಲೀಸರು ಆ ಅಂಗಡಿಯಿಂದ 14 ಗ್ರಾಂ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ.ಅಲ್ಲದೇ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ರಾಘವೇಂದ್ರ ಸರ್ಕಲ್‌ನಲ್ಲಿ ಜಪ್ತಿ ಮಾಡುವಲ್ಲಿ ಇನ್‌್ಸಪೆಕ್ಟರ್‌ ಸತೀಶ್‌ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

ಮೂವರು ಡಕಾಯಿತರ ಬಂಧನ :

ಒಂದೇ ದಿನ ಎರಡು ಡಕಾಯಿತಿ ಮಾಡಿ ಪರಾರಿಯಾಗಿದ್ದ ಆರು ಆರೋಪಿಗಳ ಪೈಕಿ ಮೂವರನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿ, 75 ಸಾವಿರ ಮೌಲ್ಯದ ಮೊಬೈಲ್‌ ಪೋನ್‌ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಮಾ.1 ರಂದು ರಾತ್ರಿ 11 ಗಂಟೆ ಸುಮಾರಿನಲ್ಲಿ ಆಟೋಚಾಲಕ ಇಂದಿರಾನಗರದಿಂದ ಹಲಸೂರು ಹಳೆ ಮದ್ರಾಸ್‌‍ ರಸ್ತೆ ಮೂಲಕ ಗುರುದ್ವಾರದ ಕಡೆಗೆ ಬರುವ ರಸ್ತೆಯಲ್ಲಿ ಪ್ರಯಾಣಿಕರನ್ನು ಡ್ರಾಪ್‌ ಮಾಡಿ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಒಂದೇ ಬೈಕ್‌ನಲ್ಲಿ ಬಂದ ಮೂವರು ಡಕಾಯಿತರು ಆಟೋರಿಕ್ಷಾ ಮುಂಭಾಗಕ್ಕೆ ಬಂದು ಅಡ್ಡಹಾಕಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಆ ಸಂದರ್ಭದಲ್ಲಿ ಮತ್ತೆ ಮೂವರು ಡಕಾಯಿತರು ಮತ್ತೊಂದು ಬೈಕ್‌ನಲ್ಲಿ ಬಂದು ಆಟೋ ಚಾಲಕನ ಮೊಬೈಲ್‌ ಹಾಗೂ 3500 ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಅದೇ ದಿನ ರಾತ್ರಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಬ್ಯಾಕ್‌ ಗೇಟ್‌ ಬಳಿ ಆಟೋರಿಕ್ಷಾದಲ್ಲಿ ಕುಳಿತಿದ್ದ ವ್ಯಕ್ತಿಗೆ ಹೊಡೆದು ಇದೇ ಡಕಾಯಿತರ ತಂಡ ಬೆಳ್ಳಿಯ ಸರ ಕಿತ್ತುಕೊಂಡು ಪರಾರಿಯಾಗಿತ್ತು.

ಈ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹಲವು ಮಾಹಿತಿಗಳನ್ನು ಕಲೆಹಾಕಿ ಖಚಿತ ಮಾಹಿತಿ ಮೇರೆಗೆ ಹಲಸೂರು ಕೆರೆ ಬಳಿ ಮೂವರು ಡಕಾಯಿತರನ್ನು ಬಂಧಿಸಿ ಮೊಬೈಲ್‌ ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ಬಂಧನದಿಂದ ಹಲಸೂರು ಠಾಣೆ ಹಾಗೂ ಬೈಯಪ್ಪನಹಳ್ಳಿ ಠಾಣೆಯ ತಲಾ 1 ದರೋಡೆ ಪ್ರಕರಣ ಹಾಗೂ ದ್ವಿಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿರುತ್ತವೆ. ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಕಾರ್ಯ ಮುಂದುವರೆದಿದೆ.ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ ಸಂತೋಷ್‌ ಹಾಗೂ ಸಿಬ್ಬಂದಿ ತಂಡ ಕೈಗೊಂಡಿತ್ತು.

RELATED ARTICLES

Latest News