Homeಬೆಂಗಳೂರುರಜಾದಿನವೂ ಬೆಸ್ಕಾಂ ಸ್ವಚ್ಛತಾ ಕಾರ್ಯ, ಶೇ.80ರಷ್ಟು ತೆರವು ಪೂರ್ಣ

ರಜಾದಿನವೂ ಬೆಸ್ಕಾಂ ಸ್ವಚ್ಛತಾ ಕಾರ್ಯ, ಶೇ.80ರಷ್ಟು ತೆರವು ಪೂರ್ಣ

ಬೆಂಗಳೂರು, ಆ.24- ನಗರದ ಪಾದಚಾರಿ ಮಾರ್ಗಗಳಲ್ಲಿ ಸ್ಥಗಿತಗೊಂಡಿರುವ ಹಾಗೂ ಬಳಕೆಯಲ್ಲಿಲ್ಲದ ವಿದ್ಯುತ್ ಪರಿಕರಗಳನ್ನು ತೆರವುಗೊಳಿಸುವ ಜತೆಗೆ ಸ್ವಚ್ಛತಾ ಕಾರ್ಯವನ್ನು ಬೆಸ್ಕಾಂ ಭಾನುವಾರವೂ ಮುಂದುವರಿಸಿತು. ಕ್ಲೀನ್‌ ಅಪ್‌ ಬೆಂಗಳೂರು ಅಭಿಯಾನದ ಭಾಗವಾಗಿ ನಗರದ ವಿವಿಧೆಡೆ ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿನವಿಡೀ ಕಾರ್ಯಾಚರಣೆ ನಡೆಸಿದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ಅವರ ನೇತೃತ್ವದಲ್ಲಿ ಶನಿವಾರ ತಡರಾತ್ರಿಯಿಂದ ಆರಂಭಗೊಂಡಿದ್ದ ಕಾರ್ಯಾಚರಣೆ ಭಾನುವಾರ ಬೆಳಿಗ್ಗೆ 6ರಿಂದ ಮತ್ತೆ ಚುರುಕುಗೊಂಡಿತು. ಮಲ್ಲೇಶ್ವರ, ರಾಜಾಜಿನಗರ, ಹೆಬ್ಬಾಳ, ರಾಜರಾಜೇಶ್ವರಿ ನಗರ, ಕೆಎಚ್‌ಬಿ ಕಾಲೊನಿ ಮುಖ್ಯರಸ್ತೆ, ಕೋರಮಂಗಲ, ನಾಗವಾರ, ಬಂಗಾರಪ್ಪನಗರ, ಥಣಿಸಂದ್ರ, ಕೊತ್ತನೂರು, ಸುಂಕದಕಟ್ಟೆ, ನಾಗರಬಾವಿ, ಕೊಮಘಟ್ಟ, ಉತ್ತರಹಳ್ಳಿ, ಕತ್ರಿಗುಪ್ಪೆ, ವೈಟ್‌ಫೀಲ್ಡ್ ಹಾಗೂ ಮಹದೇವಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅನುಪಯುಕ್ತ ವಿದ್ಯುತ್ ಪರಿಕರಗಳ ತೆರವು ಹಾಗೂ ಸ್ವಚ್ಛತಾ ಕಾರ್ಯ ನಡೆಯಿತು.

ಜಿಒಎಸ್‌ ರಾಡ್‌ಗಳನ್ನು ನೆಲಮಟ್ಟದಿಂದ ಏಳು ಅಡಿ ಎತ್ತರಿಸುವ ಕಾರ್ಯವನ್ನೂ ಕೈಗೊಳ್ಳಲಾಯಿತು.

ಶೇ.80ರಷ್ಟು ಕಾರ್ಯ ಪೂರ್ಣ

ಕ್ಲೀನ್‌ ಅಪ್‌ ಬೆಂಗಳೂರು ಅಭಿಯಾನದಡಿ ಬೆಸ್ಕಾಂ ಕೈಗೊಂಡಿರುವ ತೆರವು ಹಾಗೂ ಸ್ವಚ್ಛತಾ ಕಾರ್ಯ ಶೇ.80ರಷ್ಟು ಪೂರ್ಣಗೊಂಡಿದೆ ಎಂದು ಡಾ. ಎನ್. ಶಿವಶಂಕರ ತಿಳಿಸಿದರು.ಪಾದಚಾರಿ ಮಾರ್ಗಗಳಲ್ಲಿದ್ದ ಸ್ಥಗಿತಗೊಂಡ ಅಥವಾ ಬಳಕೆಯಲ್ಲಿಲ್ಲದ ವಿದ್ಯುತ್ ಪರಿವರ್ತಕ ಕೇಂದ್ರಗಳು ಸೇರಿದಂತೆ ಇತರೆ ಅನುಪಯುಕ್ತ ಪರಿಕರಗಳ ತೆರವು ಕಾರ್ಯವನ್ನು ಬೆಸ್ಕಾಂ ಮೂರು ತಿಂಗಳ ಹಿಂದೆಯೇ ಆರಂಭಿಸಿತ್ತು. ಆಗಸ್ಟ್‌ 1ರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವ ಹಾಗೂ ಇಂಧನ ಸಚಿವರು ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರ ಮಾರ್ಗದರ್ಶನದಲ್ಲಿ ಇದನ್ನು ಆಂದೋಲನದ ರೂಪದಲ್ಲಿ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಲೈನ್‌ಮನ್‌ಗಳು ಪ್ರತಿ ವಾರ ಅಥವಾ 15 ದಿನಕ್ಕೊಮ್ಮೆ ಪರಿವರ್ತಕಗಳ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಿದ್ದಾರೆ ಎಂದರು.ಆ.1ರಿಂದ 23ರವರೆಗೆ ಬೆಸ್ಕಾಂ ಕೈಗೊಂಡ ಕಾರ್ಯಾಚರಣೆಯಲ್ಲಿ 1,535 ವಿದ್ಯುತ್ ಕಂಬಗಳು, ಆರು ಟ್ರಾನ್ಸ್‌ಫಾರ್ಮರ್ ಕೇಂದ್ರಗಳು ಹಾಗೂ ಒಂಬತ್ತು ಇತರೆ ಅನುಪಯುಕ್ತ ಮೂಲಸೌಕರ್ಯಗಳನ್ನು ತೆರವುಗೊಳಿಸಲಾಗಿದೆ. 1,758 ಜಿಎಸ್‌ ಆಪರೇಟಿಂಗ್‌ ರಾಡ್‌ಗಳನ್ನು ಮಾರ್ಪಡಿಸಲಾಗಿದೆ.

ಇದರೊಂದಿಗೆ 4,836 ಡಿಟಿಸಿ ಯಾರ್ಡ್‌ಗಳು, 1,368 ಆರ್‌ಎಂಯು ಯಾರ್ಡ್‌ಗಳು ಹಾಗೂ 1,207 ಸ್ಪನ್‌ ಪೋಲ್‌/ಡಿಪಿ ಯಾರ್ಡ್‌ಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. 151 ಫೀಡರ್ ಪಿಲ್ಲರ್ ಬಾಕ್ಸ್‌ಗಳ ರಿವೈರಿಂಗ್‌ ಮತ್ತು ಯಾರ್ಡ್‌ ಸ್ವಚ್ಛತಾ ಕಾಮಗಾರಿ ಹಾಗೂ 401 ಕಂಬಗಳ ರಿವೈರಿಂಗ್‌ ಮತ್ತು ಯಾರ್ಡ್‌ ಸ್ವಚ್ಛತಾ ಕಾಮಗಾರಿಯನ್ನೂ ನಡೆಸಲಾಗಿದೆ.

ಸ್ವಚ್ಛ ಮತ್ತು ಸುರಕ್ಷಿತ ಬೆಂಗಳೂರಿನ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಜಿಬಿಎಗೆ ಬೆಸ್ಕಾಂ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ರಜಾದಿನವೂ ಲೈನ್‌ಮನ್‌ಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಅನುಪಯುಕ್ತ ಪರಿಕರಗಳ ತೆರವು ಹಾಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದ ಕ್ಲೀನ್‌ ಅಪ್‌ ಬೆಂಗಳೂರು ತಿಂಗಳ ಅಭಿಯಾನದ ಭಾಗವಾಗಿ ಆಗಸ್ಟ್‌ 1ರಂದು ಸಚಿವ ಕೆ.ಜೆ. ಜಾರ್ಜ್ ಅವರು ಅಭಿಯಾನಕ್ಕೆ ಚಾಲನೆ ನೀಡಿದ್ದರು.

RELATED ARTICLES
spot_img

Latest News