Homeರಾಜ್ಯಭಾರಿ ಬೆಲೆ ಏರಿಕೆಯಿಂದ ಕಹಿಯಾದ ಸಕ್ಕರೆ-ಬೆಲ್ಲ

ಭಾರಿ ಬೆಲೆ ಏರಿಕೆಯಿಂದ ಕಹಿಯಾದ ಸಕ್ಕರೆ-ಬೆಲ್ಲ

Sugar-jaggery turns bitter due to huge price hike

ಬೆಂಗಳೂರು, ಆ.24- ಸಕ್ಕರೆ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಬೆಲ್ಲದ ಬೆಲೆಯೂ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಮಂಡ್ಯ ಎಪಿಎಂಸಿಯಲ್ಲಿ ಗುಣಮಟ್ಟದ ಅಚ್ಚುಬೆಲ್ಲ ಕ್ವಿಂಟಾಲ್‌ಗೆ ಗರಿಷ್ಠ 6,750 ರೂ.ಗಳಿಂದ 7 ಸಾವಿರ ರೂ.ವರೆಗೆ ಮಾರಾಟವಾಗುತ್ತಿದೆ.ಕಳೆದ ಕೆಲವು ದಿನಗಳಿಂದ ಸಕ್ಕರೆ ಬೆಲೆ ನಿರಂತರವಾಗಿ ಏರುತ್ತಲೇ ಇದ್ದು, ಚಿಲ್ಲರೆಯಾಗಿ ಕೆಜಿ ಸಕ್ಕರೆ 70 ರೂ.ಗೆ ಮಾರಾಟವಾಗುತ್ತಿದೆ. ಸಿಹಿಯಾದ ಸಕ್ಕರೆ ಗ್ರಾಹಕರಿಗೆ ಬೆಲೆ ಕೇಳುತ್ತಿದ್ದಂತೆ ಕಹಿಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಕೆಲವೆಡೆ ಟೀ, ಕಾಫಿ ಹಾಗೂ ಸಿಹಿತಿನಿಸುಗಳ ಬೆಲೆಯೂ ಏರಿಕೆಯಾಗಿದೆ. ಕಳೆದ 2-3 ದಿನಗಳಿಂದ ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣ ಇರುವುದರಿಂದ ಚುಮುಚುಮು ಚಳಿಗೆ ಟೀ, ಕಾಫಿ ಕುಡಿಯಲು ಹೋಟೆಲ್‌ಗೆ ಹೋದರೆ ಬೆಲೆ ನೋಡಿ ಶಾಕ್ ಆಗುವಂತಾಗಿದೆ.

ಇತ್ತ ಬೆಲ್ಲದ ಚಹಾ ಕುಡಿಯೋಣ ಎಂದರೂ ಅದರ ಬೆಲೆಯೂ ಏರಿಕೆಯಾಗಿದೆ. ಮಂಡ್ಯ ಎಪಿಎಂಸಿಯಲ್ಲಿ ಈ ಹಿಂದೆ ಕ್ವಿಂಟಾಲ್ ಬೆಲ್ಲಕ್ಕೆ 4,700 ರೂ.ಗಳಿಂದ 5 ಸಾವಿರ ರೂ.ವರೆಗೆ ದರವಿತ್ತು. ಇದೀಗ ಸುಮಾರು 2 ಸಾವಿರ ರೂ. ಹೆಚ್ಚಾಗಿದ್ದು, ಒಂದೇ ಬಾರಿ ಇಷ್ಟು ಬೆಲೆ ಹೆಚ್ಚಾಗಿರುವುದು ಐತಿಹಾಸಿಕ ದಾಖಲೆ ಎಂದು ಮಾರಾಟಗಾರರು ತಿಳಿಸಿದ್ದಾರೆ.

ಆಲೆಮನೆಗಳು ಕಣ್ಮರೆ:

ಇತ್ತೀಚಿನ ದಿನಗಳಲ್ಲಿ ಕೂಲಿಕಾರ್ಮಿಕರ ಕೊರತೆಯಿಂದಾಗಿ ಮಂಡ್ಯ, ಮೈಸೂರು, ಮಳವಳ್ಳಿ, ಮದ್ದೂರು ಸೇರಿದಂತೆ ಮತ್ತಿತರ ಕಡೆಗಳಲ್ಲಿ ನಡೆಯುತ್ತಿದ್ದ ಆಲೆಮನೆಗಳು ಮುಚ್ಚಿವೆ. ಇದರಿಂದ ಬೆಲ್ಲದ ಉತ್ಪಾದನೆ ಕುಂಠಿತವಾಗಿದೆ.

ಶ್ರಾವಣ ಮಾಸ ಆರಂಭವಾಗಿದ್ದು, ಸಾಲುಸಾಲು ಹಬ್ಬಗಳು ಹಾಗೂ ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿದ್ದು, ಬೆಲ್ಲಕ್ಕೆ ಬೇಡಿಕೆ ಹೆಚ್ಚಾಗಿರುವುದೂ ಬೆಲೆ ಏರಿಕೆಗೆ ಕಾರಣವಾಗಿದೆ.ಮಾರುಕಟ್ಟೆಯಲ್ಲಿ ಸಕ್ಕರೆ ದರ ಕೆಜಿಗೆ 70 ರೂ. ಆಗಿರುವುದು ಬೆಲ್ಲದ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ.

ಮಂಡ್ಯದಿಂದ ಪ್ರತಿನಿತ್ಯ ಟನ್‌ಗಟ್ಟಲೆ ಬೆಲ್ಲ ಹೊರರಾಜ್ಯಗಳಿಗೆ ಸರಬರಾಜಾಗುತ್ತಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ಇದೇ ಮೊದಲ ಬಾರಿಗೆ ಒಂದೇ ಬಾರಿಗೆ ಕೆಜಿಗೆ 20ರಿಂದ 25 ರೂ.ವರೆಗೆ ಏರಿಕೆ ಕಂಡಿದೆ.

ಕಳೆದ ವಾರ ಕೆಜಿ ಬೆಲ್ಲ 45ರಿಂದ 50 ರೂ.ಗೆ ಮಾರಾಟವಾಗುತ್ತಿತ್ತು. ಇದೀಗ 68 ರೂ.ಗೆ ಮಾರಾಟವಾಗುತ್ತಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆಬೆಲ್ಲಕ್ಕಿಂತ ಅಚ್ಚುಬೆಲ್ಲಕ್ಕೆ ಬೇಡಿಕೆ ಹೆಚ್ಚಾಗಿದೆ. ಕ್ವಿಂಟಾಲ್‌ಗೆ 4,500 ರೂ.ಗಳಿಂದ 6,300 ರೂ.ವರೆಗೆ ಮಾರಾಟವಾಗಿದೆ.ಒಟ್ಟಿನಲ್ಲಿ ಸಿಹಿ ನೀಡುವ ಬೆಲ್ಲ ಮತ್ತು ಸಕ್ಕರೆ ಎರಡರ ಬೆಲೆಯೂ ಏರಿಕೆಯಾಗುವ ಮೂಲಕ ಗ್ರಾಹಕರಿಗೆ ಕಹಿಯಾಗಿದೆ.

ರಾಜ್ಯದಲ್ಲಿ ಇತ್ತೀಚೆಗೆ ಸಕ್ಕರೆ ಕಾಯಿಲೆ ಹೆಚ್ಚಾಗುತ್ತಿದ್ದು, ಬಹುತೇಕ ಜನರು ಸಕ್ಕರೆ ರಹಿತ ಕಾಫಿ, ಟೀ ಕುಡಿಯುತ್ತಿದ್ದಾರೆ. ಇದರಿಂದ ತುಸು ಬೇಡಿಕೆ ಕಡಿಮೆಯಾಗಿದೆ. ಎಲ್ಲರೂ ಸಕ್ಕರೆ, ಬೆಲ್ಲ ಬಳಸುವಂತಿದ್ದರೆ ಇನ್ನೂ ಬೆಲೆ ಏರಿಕೆಯಾಗುತ್ತಿತ್ತು ಎಂದು ಹಿರಿಯ ನಾಗರಿಕರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

RELATED ARTICLES
spot_img

Latest News