ಬೆಂಗಳೂರು,ಮಾ.21- ಸ್ಯಾಂಕಿ ಕೆರೆ ಮುಖ್ಯದ್ವಾರದ ಮುಂಭಾಗದಲ್ಲಿರುವ ಸದಾಶಿವನಗರದ ತ್ರಿಕೋನ ಉದ್ಯಾನದಲ್ಲಿ ನಿರ್ಮಿಸಲಾಗಿರುವ ಡಾ. ಪುನೀತ್ ರಾಜ್‌ಕುಮಾರ್ ಅವರ 10 ಅಡಿ ಎತ್ತರದ ಪುತ್ಥಳಿಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಅನಾವರಣಗೊಳಿಸಿದರು.
ಈ ವೇಳೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಅವರು ಮಾತನಾಡಿ, ಅಪ್ಪು ಅವರ ಸರಣೆ ನಾಡಿನ ಕಲಾ ರಸಿಕರೂ ಸೇರಿದಂತೆ ನಾಡಿನ ಜನರೆಲ್ಲರ ಹೃದಯಗಳಲ್ಲಿ ಅಮರವಾಗಿದ್ದು, ಅವರ ಆದರ್ಶಗಳು ನಮ ಜೀವನಕ್ಕೆ ಸದಾ ಪ್ರೇರಣೆಯಾಗಿರುತ್ತವೆ. ಅಪ್ಪು ಅವರು ಯಾವ ಪ್ರಚಾರವನ್ನೂ ಬಯಸದೆ ಮಾಡಿರುವ ಸಮಾಜಮುಖಿ ಸೇವೆಗಳು ಅವರ ಉನ್ನತ ವ್ಯಕ್ತಿತ್ವವನ್ನು ಬಿಂಬಿಸುತ್ತವೆ ಎಂದರು.
ಸುಮಾರು 880 ಕೆ.ಜಿ. ತೂಕವಿದ್ದು, ಮೇಲೈಯನ್ನು ಪ್ಯಾಟಿನಾ ಫಿನಿಷ್ ಮೂಲಕ ಸಂಸ್ಕರಿಸಲಾಗಿದೆ. ದಟ್ಟ ಬಣ್ಣದ ಛಾಯೆ, ದೃಢತೆ, ದೀರ್ಘಬಾಳಿಕೆ ಹಾಗೂ ವರ್ಷಗಳು ಕಳೆದರೂ ಮಸುಕಾಗದ ಶಿಲ್ಪಸೌಂದರ್ಯವನ್ನು ಗಮನದಲ್ಲಿರಿಸಿಕೊಂಡು ಈ ಪುತ್ಥಳಿಯನ್ನು ರೂಪಿಸಲಾಗಿದೆ ಎಂದು ಅವರು ನುಡಿದರು.
ಈ ಸಂದರ್ಭದಲ್ಲಿ ಸಿನಿಮಾ ನಿರ್ದೇಶಕ ಡಾ. ರಾಜೇಂದ್ರ ಸಿಂಗ್ ಬಾಬು, ಮಲ್ಲೇಶ್ವರ ಕ್ಷೇತ್ರದ ಮುಖಂಡರು, ಗಣ್ಯರು ಹಾಗೂ ಅಪಾರ ಸಂಖ್ಯೆಯ ಅಪ್ಪು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
