ಬೆಂಗಳೂರು, ಮಾ.21- ರಾಜ್ಯದ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಾನವಕುಲದ ಒಳಿತಿಗೆ ಪ್ರಾರ್ಥಿಸುವುದು ಅತ್ಯಂತ ಅವಶ್ಯ ಎಂದು ತಿಳಿಸಿದರು.
ಇಂದು ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯ ತಿಳಿಸಿದರು. ಭಾರತ ದೇಶ ವಿವಿಧ ಜಾತಿ ಸಂಸ್ಕೃತಿಗಳಿಂದ ಕೂಡಿದೆ. ವಿವಿಧತೆಯಲ್ಲಿ ಏಕತೆಯಿರುವ ನಮ ದೇಶದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು.

ಯಾವುದೇ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಎಲ್ಲ ಧರ್ಮಗಳೂ ಪ್ರೀತಿಯನ್ನು ಬೋಧಿಸುತ್ತವೆ ಎಂದು ಹೇಳಿದರು. ಮನುಕುಲದ ಒಳಿತಿಗಾಗಿ ಪ್ರಾರ್ಥನೆ ಮಾಡುವುದು ಅತ್ಯಂತ ಅವಶ್ಯ. ಮಾನವೀಯತೆಯಿಂದ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳುವುದು ಅವಶ್ಯ ಎಂದು ಅವರು ಪುನರುಚ್ಚರಿಸಿದರು.


ರಂಜಾನ್ : ವಿಶ್ವ ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ
ಪವಿತ್ರ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ಸಮಾವೇಶಗೊಂಡು ವಿಶ್ವ ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಧಾರ್ಮಿಕ ಗುರು ಮೌಲಾನ ಜಹೀರ್ ಉದ್ದೀನ್ ಖಾಜಿ ಅವರ ನೇತೃತ್ವದಲ್ಲಿ ನಮಾಜ್ ಮೂಲಕ ವಿಶ್ವದೆಲ್ಲಡೆ ಸುಖಶಾಂತಿ ನೆಮದಿ ನೆಲಸಿ, ಸಾಮರಸ್ಯ ಸಹಬಾಳ್ವೆಯಿಂದ ಜೀವನ ನಡೆಸುವಂತಾಗಲಿ, ಮಳೆ-ಬೆಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸಲಾಯಿತು. ಪ್ರಾರ್ಥನೆಯ ನಂತರ ಹಿಂದೂ ಮುಸ್ಲಿಂ ಬಾಂಧವರು ಪರಸ್ಪರವಾಗಿ ಕೈ ಜೋಡಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ಸೌಹಾರ್ದತೆಗೆ ಸಾಕ್ಷಿಯಾದ ಮೂರುಸಾವಿರ ಮಠ:
ಮುಸ್ಲಿಂ ಮುಖಂಡರು ಸಾಮೂಹಿಕ ಪ್ರಾರ್ಥನೆ ನಂತರ ಹುಬ್ಬಳ್ಳಿ ನಗರದ ಮೂರುಸಾವಿರ ಮಠಕ್ಕೆ ಭೇಟಿ ನೀಡಿ ಗುರುಸಿದ್ದ ರಾಜಯೋಗಿಂದ್ರ ಶ್ರೀಗಳ ಆಶೀರ್ವಾದ ಪಡೆದುಕೊಂಡು ಪರಸ್ಪರ ಶುಭಾಶಯ ಹಂಚಿಕೊಂಡರು.
ಈ ವೇಳೆ ಮಾತನಾಡಿದ ಶ್ರೀಗಳು, ಬಸವ ಜಯಂತಿ ಮತ್ತು ರಂಜಾನ್ ಹಬ್ಬ ಒಂದೇ ದಿನ ಆಚರಿಸಲ್ಪಡುತ್ತಿದ್ದು, ಆ ದೇವರೇ ಭಾವೈಕ್ಯತೆಯಿಂದ ಇರುವಂತೆ ಈ ಹಬ್ಬಗಳನ್ನು ಒಟ್ಟಿಗೆ ಬರುವಂತೆ ಮಾಡಿದ್ದಾನೆ. ಹೀಗಾಗಿ ಎಲ್ಲರೂ ಶಾಂತಿಯಿಂದ ಸಂತೋಷದಿಂದ ಹಬ್ಬವನ್ನು ಆಚರಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ, ಸದಾನಂದ ಡಂಗನವರ, ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಎ.ಎಂ.ಹಿಂಡಸಗೇರಿ, ಬಾಬಾಜಾನ್ ಮುಧೋಳ, ಮುಸ್ಲಿಂ ಮುಖಂಡರುಗಳಾದ ಅನ್ವರ್ ಮುಧೋಳ್, ಮಜಾರ್ ಖಾನ್, ಬಾಬಾಜಾನ್ ಮುಧೋಳ್, ಶಫಿ ಮುದ್ದೇಬಿಹಾಳ, ಮುನಾಫ್ ದೇವಗಿರಿ, ಮೌಲಾ ಸಾಬ್ ನದಾಫ್ ಇದ್ದರು.
