ಬೆಂಗಳೂರು, ಮೇ.6- ಇತ್ತಿಚೆಗೆ ಸುರಿದ ಭಾರಿ ಮಳೆಯಿಂದ ಧರೆಗುರುಳಿ ಬಿದ್ದಿರುವ ನೂರಾರು ಮರಗಳ ತೆರವಿಗೆ ತಿಣುಕಾಡುತ್ತಿರುವ ಜಿಬಿಎ ಇದೀಗ ರಾತ್ರಿ ಕಾರ್ಯಚರಣೆಗೆ ಮುಂದಾಗಿದೆ. ಭಾರಿ ಮಳೆಗೆ ನಗರದಲ್ಲಿ ನೂರಾರು ಮರಗಳು ಧರೆಗುರುಳಿದ್ದು, ಸಾವಿರಾರು ಕೊಂಬೆಗಳು ಮುರಿದು ಬಿದ್ದಿವೆ. ಕೆಲವೆಡೆ ಮನೆಗಳ ಕಾಂಪೌಂಡ್ ಮೇಲೆ ಮರದ ಕೊಂಬೆಗಳು ಉರುಳಿದರೆ, ಇನ್ನೂ ಕೆಲವು ಕಡೆಗಳಲ್ಲಿ ಸೀಳು ಬಿದ್ದ ಕೊಂಬೆಗಳು ಮರದಲ್ಲೇ ನೇತಾಡುತ್ತಿದ್ದು ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ.
ಸಿಬ್ಬಂದಿ ಕೊರತೆಯ ನಡುವೆಯೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅರಣ್ಯ ವಿಭಾಗ ತುರ್ತು ಕ್ರಮ ಕೈಗೊಂಡಿದ್ದು, ರಾತ್ರಿ ವೇಳೆಯಲ್ಲಿಯೂ ತೆರವು ಕಾರ್ಯಾಚರಣೆ ನಡೆಸುತ್ತಿದೆ.
ಖಾಸಗಿ ತಂಡಗಳನ್ನು ನಿಯೋಜಿಸಿ ಕಾರ್ಯಕ್ಕೆ ವೇಗ ನೀಡಲಾಗಿದೆ. ಐದು ನಗರ ಪಾಲಿಕೆಗಳು ಹಾಗೂ ಸ್ಥಳೀಯ ಎನ್‌ಜಿಒಗಳು ಸಹ ಕಾರ್ಯಾಚರಣೆಗೆ ಕೈಜೋಡಿಸಿವೆ.ಕೇಂದ್ರ, ಪೂರ್ವ ಹಾಗೂ ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮರಗಳು ಬಿದ್ದಿದ್ದು, ಸಂಚಾರಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜಿಬಿಎಗೆ ಸಹಕಾರ ನೀಡಿದ್ದಾರೆ.
ಸಿಬ್ಬಂದಿ ಕೊರತೆ ಸವಾಲು:ಜಿಬಿಎ ರಚನೆಯ ಬಳಿಕ 369 ವಾರ್ಡ್‌ಗಳನ್ನು ನಿರ್ಮಿಸಿದರೂ ಸಿಬ್ಬಂದಿ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಬಿಬಿಎಂಪಿ ಕಾಲದಲ್ಲಿ 30 ತಂಡಗಳು ಕಾರ್ಯನಿರ್ವಹಿಸುತ್ತಿದ್ದರೆ, ಇದೀಗ 66 ತಂಡಗಳಿಗೆ ಹೆಚ್ಚಳ ಮಾಡಲಾಗಿದೆ. ಆದರೂ ಕೆಲಸದ ಒತ್ತಡ ಹೆಚ್ಚಾಗಿದೆ.
ಪ್ರಸ್ತುತ 21 ಖಾಸಗಿ ತಂಡದ ಸಿಬ್ಬಂದಿ ಹಾಗೂ 14 ಕ್ರೇನ್‌ಗಳನ್ನು ಬಳಸಿ ತೆರವು ಕಾರ್ಯ ನಡೆಸಲಾಗುತ್ತಿದೆ.ರಾತ್ರಿ ಕಾರ್ಯಾಚರಣೆಗೆ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಮುಂಗಾರು ಹಿನ್ನೆಲೆ ಜಿಬಿಎ 25 ಮಂದಿಯ 8 ತಂಡಗಳನ್ನು ರಚಿಸಿದ್ದು, ರಾತ್ರಿ ಕಾರ್ಯಾಚರಣೆಗೆ ಪ್ರತ್ಯೇಕವಾಗಿ 11 ಮಂದಿಯ ತಂಡವನ್ನು ಸಜ್ಜುಗೊಳಿಸಲಾಗಿದೆ.
ಒಟ್ಟು 18 ಕ್ರೇನ್‌ಗಳನ್ನು ಬಳಸಲಾಗುತ್ತಿದೆ. ನಗರ ಪಾಲಿಕೆವಾರು ಕ್ರೇನ್‌ಗಳನ್ನು ಹಂಚಿಕೆ ಮಾಡಲಾಗಿದ್ದು, ಉತ್ತರಕ್ಕೆ 2, ಪೂರ್ವಕ್ಕೆ 1, ದಕ್ಷಿಣಕ್ಕೆ 4, ಪಶ್ಚಿಮಕ್ಕೆ 5 ಹಾಗೂ ಕೇಂದ್ರಕ್ಕೆ 6 ಕ್ರೇನ್‌ಗಳನ್ನು ನಿಯೋಜಿಸಲಾಗಿದೆ ಎಂದು ಜಿಬಿಎ ಅರಣ್ಯ ವಿಭಾಗದ ಮುಖ್ಯಸ್ಥ ಸುದರ್ಶನ್ ಮಾಹಿತಿ ನೀಡಿದ್ದಾರೆ.
