ಬೆಂಗಳೂರು, ಅ.6 – ರಸ್ತೆಗಳಲ್ಲಿ ಬಿಡಾಡಿಯಾಗಿ ಸಂಚರಿಸುವ ಜಾನುವಾರುಗಳಿಂದ ಸಾರ್ವಜನಿಕರಿಗೆ ಎದುರಾಗುತ್ತಿರುವ ತೊಂದರೆ ಹಾಗೂ ಅಪಘಾತದ ಅಪಾಯಕ್ಕೆ ಕಡಿವಾಣ ಹಾಕಲು ಬೆಂಗಳೂರು ಪೂರ್ವ ನಗರ ಪಾಲಿಕೆ ಹೈಡ್ರಾಲಿಕ್ ದನ ಹಿಡಿಯುವ ವಾಹನದ ಮೂಲಕ ವಿಶೇಷ ಕಾರ್ಯಾಚರಣೆಗೆ ಚಾಲನೆ ನೀಡಿದೆ.
ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದನ, ಹಸು, ಕರು, ಎಮ್ಮೆ, ಎತ್ತು, ಹೋರಿ ಸೇರಿದಂತೆ ಜಾನುವಾರುಗಳು ಅಡ್ಡಾದಿಡ್ಡಿಯಾಗಿ ಸಂಚರಿಸುವುದು, ರಸ್ತೆಯಲ್ಲೇ ಮಲಗುವುದು ಹಾಗೂ ಏಕಾಏಕಿ ವಾಹನಗಳ ಮುಂದೆ ಬರುವುದರಿಂದ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಆದ್ಯತೆ ನೀಡಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ತಿಳಿಸಿದ್ದಾರೆ.
ಜಾನುವಾರು ವಶಕ್ಕೆ, ಮಾಲೀಕರಿಗೆ ದಂಡ:
ಸಾರ್ವಜನಿಕ ರಸ್ತೆಗಳಲ್ಲಿ ಬಿಡಾಡಿಯಾಗಿ ಓಡಾಡುವ ಜಾನುವಾರುಗಳನ್ನು ಪಾಲಿಕೆ ಸಿಬ್ಬಂದಿ ಹೈಡ್ರಾಲಿಕ್ ವಾಹನದ ನೆರವಿನಿಂದ ಸುರಕ್ಷಿತವಾಗಿ ವಶಕ್ಕೆ ಪಡೆದು ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಿದ್ದಾರೆ. ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ದನದ ದೊಡ್ಡಿ ನಿರ್ಮಾಣವಾಗುವವರೆಗೆ ವಶಪಡಿಸಿಕೊಂಡ ಜಾನುವಾರುಗಳನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕೆ.ಆರ್. ಮಾರ್ಕೆಟ್‌ನ ನಗರ ದನದ ದೊಡ್ಡಿಗೆ ಕಳುಹಿಸಲಾಗುತ್ತದೆ.
ಮಾಲೀಕರಿರುವ ಜಾನುವಾರುಗಳಿಗೆ ನಿಯಮಾನುಸಾರ ದಂಡ ವಿಧಿಸಿ, ದಂಡ ಪಾವತಿಸಿದ ಬಳಿಕ ಮಾಲೀಕರಿಗೆ ಹಸ್ತಾಂತರಿಸಲಾಗುವುದು. ಪದೇಪದೇ ಜಾನುವಾರುಗಳನ್ನು ರಸ್ತೆಗಳಿಗೆ ಬಿಡುವ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಎಚ್ಚರಿಸಿದೆ.
ಮಾಲೀಕರಿಲ್ಲದ ಜಾನುವಾರುಗಳನ್ನು ನಿಯಮಾನುಸಾರ ಗೋಶಾಲೆಗಳಿಗೆ ಹಸ್ತಾಂತರಿಸಲಾಗುತ್ತದೆ.ದಂಡ ಎಷ್ಟು?ಕರ್ನಾಟಕ ಜಾನುವಾರು ಅತಿಕ್ರಮಣ ಅಧಿನಿಯಮ, 1966ರ ಕಲಂ 10 ಹಾಗೂ ಸರ್ಕಾರದ ಅಧಿಸೂಚನೆಯಂತೆ ದಂಡ ವಸೂಲಿ ಮಾಡಲಾಗುತ್ತದೆ.
ದನ, ಹಸು, ಎತ್ತು, ಎಮ್ಮೆ: ಮೊದಲ ಮೂರು ದಿನಗಳಿಗೆ ಪ್ರತಿ ಜಾನುವಾರಿಗೆ 600; ಬಳಿಕ ದಿನಕ್ಕೆ 300.ಕರು: ಮೊದಲ ಮೂರು ದಿನಗಳಿಗೆ 300; ಬಳಿಕ ದಿನಕ್ಕೆ 200.ಕುದುರೆ, ಹೇಸರಗತ್ತೆ ಮತ್ತಿತರ ವರ್ಗ: ಮೊದಲ ಮೂರು ದಿನಗಳಿಗೆ 100; ಬಳಿಕ ದಿನಕ್ಕೆ 50.ಕತ್ತೆ, ಹಂದಿ: ಮೊದಲ ಮೂರು ದಿನಗಳಿಗೆ 50; ಬಳಿಕ ದಿನಕ್ಕೆ 25.ಕುರಿ, ಮೇಕೆ ಹಾಗೂ ಮರಿಗಳು: ಮೊದಲ ಮೂರು ದಿನಗಳಿಗೆ ಪ್ರತಿ ಜಾನುವಾರಿಗೆ 25 ದಂಡ ವಿಧಿಸಲಾಗುತ್ತದೆ.
ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿದೆ. ಸರ್ಕಾರಿ ರಜಾದಿನಗಳಲ್ಲಿ ಕಾರ್ಯಾಚರಣೆ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
1533ಕ್ಕೆ ದೂರು ನೀಡಿ:ರಸ್ತೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಜಾನುವಾರುಗಳು ಕಂಡುಬಂದಲ್ಲಿ ಸಾರ್ವಜನಿಕರು ಸಹಾಯ ಆ್ಯಪ್, ನಾಗರಿಕ ಸಹಾಯವಾಣಿ 1533 ಅಥವಾ ಪಾಲಿಕೆ ನಿಯಂತ್ರಣ ಕೊಠಡಿ 9480685706ಕ್ಕೆ ಮಾಹಿತಿ ನೀಡಬಹುದು. ದೂರು ನೀಡುವಾಗ ಜಾನುವಾರು ಇರುವ ನಿಖರ ಸ್ಥಳ ಹಾಗೂ ಸಾಧ್ಯವಾದರೆ ಛಾಯಾಚಿತ್ರ ನೀಡಿದರೆ, ಸಿಬ್ಬಂದಿ ತ್ವರಿತವಾಗಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಲು ಅನುಕೂಲವಾಗಲಿದೆ.
ಜಾನುವಾರುಗಳಿಂದ ಸಂಚಾರಕ್ಕೆ ತೊಂದರೆ ಹಾಗೂ ಅಪಘಾತದ ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಲೀಕರು ತಮ್ಮ ಜಾನುವಾರುಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಬಿಡದೆ ಸುರಕ್ಷಿತವಾಗಿ ಸಾಕಬೇಕು ಎಂದು ಲೋಖಂಡೆ ಸ್ನೇಹಲ್ ಸುಧಾಕರ್ ಮನವಿ ಮಾಡಿದ್ದಾರೆ.
