ಬೆಂಗಳೂರು,ಜೂ.6- ಮೂರು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಆರು ವರ್ಷದ ಬಾಲಕಿ ಮೃತಪಟ್ಟಿದ್ದ ಪ್ರಕರಣವನ್ನು ಭೇದಿಸಿರುವ ಕಾಡುಗೋಡಿ ಠಾಣೆ ಪೊಲೀಸರು ಬಾಲಕಿ ತಾಯಿಯ ಪ್ರಿಯಕರನನ್ನು ಬಂಧಿಸಿದ್ದಾರೆ.ಆರು ವರ್ಷದ ಬಾಲಕಿ ವೆನಿಲಾಳನ್ನು ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿ ತಂದೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಬಾಲಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆ ವರದಿಯಿಂದ ಬೆಳಕಿಗೆ ಬಂದಿದ್ದು, ಈ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿ ಇದೀಗ ಆರೋಪಿ ಮೋಹನ ಎಂಬಾತನನ್ನು ಬಂಧಿಸಿದ್ದಾರೆ.17 ವರ್ಷದ ಹಿಂದೆ ದಾವಣಗೆರೆಯ ಪ್ರವೀಣ ಹಾಗೂ ಪ್ರಿಯಾಂಕ ಮದುವೆಯಾಗಿದ್ದು, ದಂಪತಿಗೆ ಮಕ್ಕಳಿದ್ದು, ಕಾಡುಗೋಡಿಯಲ್ಲಿ ವಾಸವಾಗಿದ್ದರು.
ಈ ನಡುವೆ ಪ್ರಿಯಾಂಕಾ ತನ್ನ ಶಾಲಾ ಸಹಪಾಠಿ ಮೋಹನ ಜೊತೆ ಸಂಪರ್ಕದಲ್ಲಿದ್ದಳು. ಇವರಿಬ್ಬರ ನಡುವೆ ಸಲುಗೆ ಬೆಳೆದಿತ್ತು. ಮೋಹನ ಆಗಾಗ್ಗೆ ಮನೆಗೆ ಬಂದು ಹೋಗುತ್ತದ್ದನು.ಈ ವಿಚಾರ ಪತಿ ಪ್ರವೀಣನಿಗೆ ಗೊತ್ತಾಗಿದೆ.
ಈ ಬಗ್ಗೆ ಪತ್ನಿಯನ್ನು ಪ್ರಶ್ನಿಸಿದಾಗ ದಂಪತಿ ನಡುವೆ ಜಗಳವಾಗಿದ್ದು, ತನಗೆ ವಿಚ್ಛೇದನ ನೀಡುವಂತೆ ಪಟ್ಟು ಹಿಡಿದ ಪ್ರಿಯಾಂಕಾ ತನ್ನ ಆರು ವರ್ಷದ ಮಗಳು ವೆನಿಲಾಳನ್ನು ಜೊತೆಯಲ್ಲಿ
ಕರೆದುಕೊಂಡು ಮನೆ ಬಿಟ್ಟು ಹೋಗಿ ಪ್ರಿಯಕರ ಪ್ರವೀಣನ ಜೊತೆ ಲಿವಿಂಗ್ ರಿಲೇಷನ್ನಲ್ಲಿದ್ದಳು.ಈ ನಡುವೆ ಮಾ.24 ರಂದು 6 ವರ್ಷದ ಮಗಳು ವೆನಿಲಾ ಸಾವನ್ನಪ್ಪಿದ್ದು, ಈ ಬಗ್ಗೆ ಪತಿ ವಿಚಾರಿಸಿದಾಗ ಮಗುವಿಗೆ ಬಿರಿಯಾನಿ ಮತ್ತು ಐಸ್ಕ್ರೀಮ್ ತಿನ್ನಿಸಿ ಎಸಿ ಕಾರಿನಲ್ಲಿ ಮಲಗಿಸಿದ್ದಾಗ ಮೃತಪಟ್ಟಿದ್ದಾಳೆಂದು ಕತೆ ಕಟ್ಟಿದ್ದಾಳೆ.
ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪ್ರವೀಣ್ ಕಾಡುಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಈ ಮಗುವನ್ನು ತಾಯಿಯೇ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.ತಾಯಿ ಪ್ರಿಯಾಂಕಾ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
