ಬೆಂಗಳೂರು, ಜೂ.6- ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ತಮ ತವರು ಕ್ಷೇತವಾದ ಕನಕಪುರಕ್ಕೆ ನಾಳೆ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಲಿದ್ದು, ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ.
ಮನೆ ಬಾಗಿಲಿಗೆ ಮುಖ್ಯಮಂತ್ರಿ ಎಂಬ ಶೀರ್ಷಿಕೆಯಡಿ ಅದ್ಧೂರಿ ಸ್ವಾಗತ ಕೋರಲು ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಿಂದ ಕನಕಪುರಕ್ಕೆ ರಸ್ತೆ ಮಾರ್ಗವಾಗಿ ಮುಖ್ಯಮಂತ್ರಿಗಳು ಆಗಮಿಸುವುದರಿಂದ ರಸ್ತೆ ಇಕ್ಕೆಲಗಳಲ್ಲಿ ಸ್ವಾಗತ, ಶುಭಾಶಯ ಕೋರುವ ಫ್ಲೆಕ್‌್ಸ, ಬ್ಯಾನರ್‌ಗಳು ರಾರಾಜಿಸುತ್ತಿವೆ.
ಕನಕಪುರದಲ್ಲಿ ಹಬ್ಬದ ರೀತಿಯ ವಾತಾವರಣ ಉಂಟಾಗಿದ್ದು, ಸಂಭ್ರಮ ಮನೆ ಮಾಡಿದೆ. ಪಟ್ಟಣವನ್ನು ತಳಿರು, ತೋರಣಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಹಾರೋಹಳ್ಳಿ ವೃತ್ತ, ತುಂಗಣಿ, ಟಿ.ಬೇಕುಪ್ಪೆ ವೃತ್ತ, ನಾರಾಯಣಪುರ, ಕೋಡಿಹಳ್ಳಿ, ಹುಣಸನಹಳ್ಳಿ, ಹೊಸದುರ್ಗ, ಹುಟ್ಟೂರು ದೊಡ್ಡಾಲಹಳ್ಳಿ, ಸಾತನೂರು, ಕಬ್ಬಾಳು ಮೊದಲಾದ ಗ್ರಾಮಗಳಿಗೆ ಮುಖ್ಯಮಂತ್ರಿ ಭೇಟಿ ನೀಡಲಿದ್ದಾರೆ.
ಮುಖ್ಯಮಂತ್ರಿಯನ್ನು ಅಭಿನಂದಿಸಲು ಗ್ರಾಮಗಳಲ್ಲಿ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಹಾರೋಹಳ್ಳಿ, ಕನಕಪುರ ತಾಲ್ಲೂಕಿನ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮವನ್ನು ಹಮಿಕೊಳ್ಳಲಾಗಿದೆ. ಕಾರ್ಯಕ್ರಮ ಮುಗಿದ ಬಳಿಕ ರಾತ್ರಿ ಬೆಂಗಳೂರಿಗೆ ಮುಖ್ಯಮಂತ್ರಿ ಮರಳುವ ಕಾರ್ಯಕ್ರಮವಿದೆ.
ಕ್ಷೇತ್ರದ ಮತದಾರರು ಬೆಂಗಳೂರಿನ ವಿಧಾನಸೌಧಕ್ಕೆ ಬಂದು ನನ್ನನ್ನು ನೋಡಿ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ನಾನೇ ಕ್ಷೇತ್ರದ ಮತದಾರರ ಬಳಿಗೆ ತೆರಳಿ ಅವರ ಅಹವಾಲುಗಳನ್ನು ಆಲಿಸುತ್ತೇನೆ ಎಂದು ಶಿವಕುಮಾರ್ ಹೇಳಿದ್ದಾರೆ.
