Homeಬೆಂಗಳೂರುಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದಲ್ಲಿ ಕೋಟಿ ಕೋಟಿ ಅವ್ಯವಹಾರ

ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದಲ್ಲಿ ಕೋಟಿ ಕೋಟಿ ಅವ್ಯವಹಾರ

ಬೆಂಗಳೂರು, ನ.25- ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಟೆಂಡರ್‌ ಪ್ರಕ್ರಿಯೆಯಲ್ಲಿ 660 ಕೋಟಿ ಮೊತ್ತದ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ಅವರು ಸಂಸ್ಥೆಯ ಸಿಇಒ ಕರೀಗೌಡ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಜಾರಿ ನಿರ್ದೇಶನಾಲಯ ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಬಿಎಸ್‌‍ಡಬ್ಲ್ಯುಎಂಎಲ್‌ನ ಸಿಇಒ ಕರೀಗೌಡ, ಸಿಜಿಎಂ ಎಸ್‌‍.ವಿ. ರಾಜೇಶ್‌ ಹಾಗೂ ಡಿಜಿಎಂ-1 ಚಂದ್ರಶೇಖರ್‌ ವಿರುದ್ಧ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳನ್ನು ಮಾಡಿರುವ ಅವರು, ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಪ್ರದೇಶಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಕಾರ್ಯಗಳಿಗಾಗಿ ರೂಪಿಸಲಾಗಿದ್ದ 33 ಪ್ಯಾಕೇಜ್‌ಗಳ ಟೆಂಡರ್‌ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬುದು ರಮೇಶ್‌ ಅವರ ಪ್ರಮುಖ ಆರೋಪವಾಗಿದೆ.

659.36 ಕೋಟಿ ಹೆಚ್ಚುವರಿ ಹೊರೆ:
ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಆರಂಭದಲ್ಲಿ 33 ಪ್ಯಾಕೇಜ್‌ಗಳ ಟೆಂಡರ್‌ ಆಹ್ವಾನಿಸಲಾಗಿತ್ತು. ಬಳಿಕ 22 ಪ್ರತ್ಯೇಕ ಟೆಂಡರ್‌ ಪ್ರಕಟಣೆಗಳನ್ನು ಹೊರಡಿಸಲಾಗಿದೆ. ಟೆಂಡರ್‌ನಲ್ಲಿ ಭಾಗವಹಿಸಿದ ಬಿಡ್‌ದಾರರು ಏಳು ವರ್ಷಗಳ ಅವಧಿಗೆ ಒಟ್ಟು 3,844.19 ಕೋಟಿ ಮೊತ್ತವನ್ನು ನಮೂದಿಸಿದ್ದರು. ಆದರೆ, ನಂತರದ ಪ್ರಕ್ರಿಯೆಯಲ್ಲಿ ಕಾನೂನುಬಾಹಿರವಾಗಿ ದರಗಳನ್ನು ಹೆಚ್ಚಿಸಿದ್ದರಿಂದ ಒಟ್ಟು ಮೊತ್ತ 4,504.32 ಕೋಟಿಗೆ ಏರಿಕೆಯಾಗಿದೆ ಎಂದು ರಮೇಶ್‌ ಆರೋಪಿಸಿದ್ದಾರೆ. ಈ ಮೂಲಕ 22 ಪ್ಯಾಕೇಜ್‌ಗಳ ಗುತ್ತಿಗೆದಾರರಿಗೆ ಹೆಚ್ಚುವರಿಯಾಗಿ 659.36 ಕೋಟಿ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕ ಹಣಕ್ಕೆ ಭಾರೀ ನಷ್ಟವಾಗಲಿದೆ ಎಂದು ಅವರು ದೂರಿದ್ದಾರೆ.

14ರಷ್ಟು ಟೆಂಡರ್‌ ಪ್ರೀಮಿಯಂಗೆ ಆಕ್ಷೇಪ:
ಕ್ಯಾಬಿನೆಟ್‌ ಸಮಿತಿಯ ಟಿಪ್ಪಣಿಯಲ್ಲಿ ಶೇ.4.86ರಷ್ಟು ದರವನ್ನು ಉಲ್ಲೇಖಿಸಲಾಗಿದ್ದರೂ, ಕೆಪಿಪಿಪಿ ಪೋರ್ಟಲ್‌ನಲ್ಲಿ ಬಿಡ್‌ ಸಲ್ಲಿಸಿದ ಗುತ್ತಿಗೆದಾರರಿಗೆ ಕಾನೂನುಬಾಹಿರವಾಗಿ ಶೇ.14ರಷ್ಟು ಹೆಚ್ಚುವರಿ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ ಎಂಬುದು ಮತ್ತೊಂದು ಆರೋಪ ಮಾಡಿದ್ದಾರೆ.

ಡೀಫಾಲ್ಟರ್‌ ಗುತ್ತಿಗೆದಾರರಿಗೆ ಟೆಂಡರ್‌:
ನೌಕರರ ಭವಿಷ್ಯ ನಿಧಿ (ಇಪಿಎಫ್‌) ಇಲಾಖೆಯು 2025ರ ಸೆಪ್ಟೆಂಬರ್‌ 15ರಂದು ಪ್ರಕಟಿಸಿದ್ದ ಡೀಫಾಲ್ಟರ್‌ ಗುತ್ತಿಗೆದಾರರ ಪಟ್ಟಿಯಲ್ಲಿರುವ ಸಂಸ್ಥೆಗಳಿಗೂ ಬಿಎಸ್‌‍ಡಬ್ಲ್ಯುಎಂಎಲ್‌‍ ಟೆಂಡರ್‌ ನೀಡಿದೆ ಎಂದು ರಮೇಶ್‌ ಆರೋಪಿಸಿದ್ದಾರೆ. ಇಂತಹ ಗುತ್ತಿಗೆದಾರರಿಗೆ ಟೆಂಡರ್‌ ನೀಡಬಾರದು ಎಂಬ ಸೂಚನೆ ಇದ್ದರೂ ಅದನ್ನು ಪಾಲಿಸಿಲ್ಲ ಎಂದು ದೂರಿದ್ದಾರೆ.ಈ ವಿಚಾರಕ್ಕೆ ಸಂಬಂಧಿಸಿದಂತೆ ಐದು ನಗರ ಪಾಲಿಕೆಗಳ ಆಯುಕ್ತರುಗಳು ಮೇಲ್ಮನವಿ ಸಲ್ಲಿಸಿದ್ದು, ಇದರಿಂದ ಪಾಲಿಕೆಗಳಿಗೆ ಸುಮಾರು 90 ಕೋಟಿ ನಷ್ಟ ಉಂಟಾಗಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

RELATED ARTICLES

Latest News