ಬೆಂಗಳೂರು, ಮಾ.24- ಸಾರ್ವಜನಿಕರೇ ಇರಲಿ ಎಚ್ಚರ… ಅಪ್ಪಿ ತಪ್ಪಿ ನಿಮ ವಾಹನಗಳನ್ನು ನೋ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ. ಯಾಕೇ ಅಂತೀರಾ….ನಗರದಲ್ಲಿ ನಾಳೆಯಿಂದ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಗೆ ಬರುತ್ತಿದೆ.
ಜಿಬಿಎ ಹಾಗೂ ಸಂಚಾರಿ ಪೊಲೀಸರು ಜಂಟಿಯಾಗಿ ನಗರದ ರಸ್ತೆಗಳಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ಮಾಡಿ ದಂಡ ವಿಧಿಸಲಿದ್ದಾರೆ.
ಇದರ ಜೊತೆಗೆ ವಾಹನ ಟೋಯಿಂಗ್ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರು
ಮತ್ತು ಪೊಲೀಸರ ನಡುವೆ ಆಗುತ್ತಿದ್ದ ವಾಗ್ವಾದ, ಗಲಾಟೆಗಳಿಗೆ ತಡೆಯೊಡ್ಡಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆ ಟೋಯಿಂಗ್ ವಾಹನಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.ಟೋಯಿಂಗ್ ಪ್ರಕ್ರಿಯೆ ವೇಳೆ ವಾಹನವನ್ನು ಹೇಗೆ ತೆಗೆದುಕೊಂಡು ಹೋಗಲಾಗಿದೆ, ಯಾವುದೇ ಹಾನಿ ಉಂಟಾಗಿದೆಯೇ, ಅಥವಾ ಗಲಾಟೆ ನಡೆದಿದೆಯೇ ಎಂಬ ಎಲ್ಲಾ ವಿಚಾರಗಳು ಇದೀಗ ಕ್ಯಾಮೆರಾದಲ್ಲಿ ದಾಖಲಾಗಲಿದೆ.
ಈ ಮೂಲಕ ಟೋಯಿಂಗ್ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.ಈ ಹಿಂದೆ ಟೋಯಿಂಗ್ ವೇಳೆ ಸಾರ್ವಜನಿಕರಿಂದ ಪೊಲೀಸರ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದವು. ವಾಹನ ಹಾನಿ, ಅನಾವಶ್ಯಕ ದಂಡ ವಸೂಲಿ, ಹಾಗೂ ಗಲಾಟೆ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಲಾಗಿದೆ.
ನಗರದಲ್ಲಿ ಮತ್ತೆ ಟೋಯಿಂಗ್ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆಯುತ್ತಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ಜಾರಿಗೆ ಬರಲಿದೆ. ಪ್ರತಿ ಜಿಬಿಎ ಕಮಿಷನರೇಟ್‌ಗೆ 2 ಟೋಯಿಂಗ್ ವಾಹನಗಳನ್ನು ಒದಗಿಸಲಾಗಿದೆ.
ನೀವು ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿದರೆ ಟೋಯಿಂಗ್ ಶುಲ್ಕವಾಗಿ 1,000 ರೂ. ಹಾಗೂ ನೋ ಪಾರ್ಕಿಂಗ್ ಉಲ್ಲಂಘನೆಗೆ 1,000 ಸೇರಿದಂತೆ ಒಟ್ಟು ಸುಮಾರು 2,000 ರೂ. ದಂಡ ಪಾವತಿಸಬೇಕಾಗುತ್ತದೆ.ನಾಳೆಯಿಂದಲೇ ಟೋಯಿಂಗ್ ವ್ಯವಸ್ಥೆ ಜಾರಿಗೆ ಬರಲಿದ್ದು, ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕಾಗಿದೆ.
