ಬೆಂಗಳೂರು,ಜ.28-ಬಿಲ್ಡರ್ ಮನೆಯಲ್ಲಿ ಹಣ ಸೇರಿದಂತೆ 18 ಕೋಟಿ ಮೌಲ್ಯದ ಚಿನ್ನ, ವಜ್ರಾಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿ ರುವ ನೇಪಾಳ ಮೂಲದ ದಂಪತಿಗಾಗಿ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ನೇಪಾಳ ಗಡಿ ಭಾಗದಲ್ಲಿ ಶೋಧ ನಡೆಸುತ್ತಿದ್ದಾರೆ.
ಆರೋಪಿ ದಂಪತಿಯ ಬಂಧನ ಕ್ಕಾಗಿ ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. ಒಂದು ತಂಡ ನೇಪಾಳ ಗಡಿ ಭಾಗದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರೆ, ಮತ್ತೊಂದು ತಂಡ ದೆಹಲಿಯ ರೈಲ್ವೆ ನಿಲ್ದಾಣಗಳಲ್ಲಿ ಶೋಧ ಕಾರ್ಯಕೈಗೊಂಡಿದೆ.ಇನ್ನೊಂದು ತಂಡ ನಗರದಾ ದ್ಯಂತ ದಂಪತಿಯ ಪತ್ತೆ ಕಾರ್ಯ ದಲ್ಲಿ ತೊಡಗಿದ್ದು, ಉದ್ಯಮಿ ಮನೆಯ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸು ತ್ತಿದೆ.
ಯಮಲೂರಿನ ನಿವಾಸಿ, ಬಿಲ್ಡರ್ ಶಿವಕುಮಾರ್ ಎಂಬುವವರ ಮನೆಯಲ್ಲಿ 20 ದಿನಗಳ ಹಿಂದೆಯಷ್ಟೆ ನೇಪಾಳ ಮೂಲದ ದಿನೇಶ್ ಮತ್ತು ಕಮಲ ಎಂಬ ದಂಪತಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.
ಜ.25 ರಂದು ಶಿವಕುಮಾರ್ ಕುಟುಂಬದವರೆಲ್ಲಾ ಹೊರಗೆ ಹೋಗಿದ್ದಾಗ ಇವರ ಮನೆಯಲ್ಲಿ ಕೆಲಸಕ್ಕಿದ್ದ ದಂಪತಿ ನೆಲಮಹಡಿ ಹಾಗೂ ಮೊದಲ ಮಹಡಿಯ ಲಾಕರ್ ಮುರಿದು ಒಳ ನುಗ್ಗಿ ವಾರ್ಡ್‌ರೂಬ್‌ನಲ್ಲಿದ್ದ 11.5 ಲಕ್ಷ ನಗದು, 5 ಕೆಜಿ ಬೆಳ್ಳಿ ವಸ್ತುಗಳು ಹಾಗೂ 11 ಕೆಜಿ ಚಿನ್ನ, ವಜ್ರಾಭರಣಗಳನ್ನು ದೋಚಿ ಕೊಂಡು ಪರಾರಿಯಾಗಿದ್ದಾರೆ.
ಕೆಲ ಸಮಯದ ಬಳಿಕ ಇವರ ಮನೆಯ ಇತರೆ ಕೆಲಸಗಾರರು ಗಮನಿಸಿ ಮನೆಯಲ್ಲಿ ಕಳ್ಳತನ ವಾಗಿದೆ ಎಂದು ಮಾಲೀಕರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ತಕ್ಷಣ ಶಿವಕುಮಾರ್ ಅವರು ಮನೆಗೆ ವಾಪಸ್ ಆಗಿ ನೋಡಿದಾಗ ಲಾಕರ್‌ಗಳನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಹಣ ಹಾಗೂ ಚಿನ್ನಾಭರಣ ಕಳ್ಳತನವಾಗಿರುವುದು ಕಂಡು ಬಂದಿದೆ. ಕಳ್ಳತನವಾಗಿರುವ ಆಭರಣಗಳ ಒಟ್ಟು ಮೌಲ್ಯ 18 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಮಾರತಹಳ್ಳಿ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ದಂಪತಿ ಗಾಗಿ ಶೋಧ ಕೈಗೊಂಡಿದ್ದಾರೆ.
ಅಮೆರಿಕ ದಂಪತಿ ನೆಲೆಸಿದ್ದ ವಿಲ್ಲಾದಲ್ಲಿ ಕಳ್ಳತನ : ಮನೆಗೆಲಸದವನ ಬಂಧನ ಕೋಟಿ ಮೌಲ್ಯದ ಮಾಲು ಜಪ್ತಿ
ಬೆಂಗಳೂರು,ಜ.28-ವಿಲ್ಲಾದಲ್ಲಿ ನೆಲೆಸಿರುವ ಅಮೆರಿಕ ದಂಪತಿ ಮನೆಯಲ್ಲಿ ಚಿನ್ನ ಮತ್ತು ವಜ್ರಾಭರಣಗಳನ್ನು ಕಳವು ಮಾಡಿದ್ದ ಮನೆಗೆಲಸದವನನ್ನು ಜೆ.ಬಿ ನಗರ ಠಾಣೆ ಪೊಲೀಸರು ಬಂಧಿಸಿ 39 ಸಾವಿರ ನಗದು ಸೇರಿದಂತೆ 1 ಕೋಟಿ ಮೌಲ್ಯದ 176 ಗ್ರಾಂ ಚಿನ್ನ ಮತ್ತು ವಜ್ರಾಭರಣ ವಶಪಡಿಸಿಕೊಂಡಿದ್ದಾರೆ.ಪಶ್ಚಿಮ ಬಂಗಾಳ ಮೂಲದ ಚಂದನ್ ರೋಲ್ (31) ಬಂಧಿತ ಆರೋಪಿ.ಈತ ಸುಧಾಮನಗರದಲ್ಲಿ ವಾಸವಾಗಿದ್ದನು.
ಅಮೆರಿಕಾ ಟೆಕ್ಸಾಸ್ ನಗರದ ದಂಪತಿ ನಗರದ ಎಂಎಲ್‌ಸಿ ಕಂಪನಿಯ ಉದ್ಯೋಗಿಯಾಗಿದ್ದು, ಕೋಡಿಹಳ್ಳಿಯ, ರುಸ್ತುಂಭಾಗ್ ಮುಖ್ಯರಸ್ತೆಯ ವಿಲ್ಲಾವೊಂದರಲ್ಲಿ ವಾಸವಿದ್ದಾರೆ. ಜ.21 ರಂದು ಬೆಳಿಗ್ಗೆ ಎಂದಿನಂತೆ ದಂಪತಿ ಕೆಲಸಕ್ಕೆ ಹೋಗಿರುತ್ತಾರೆ. ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ವಾಪಸ್ ಬಂದು ನೋಡಿದಾಗ ಕೊಠಡಿಯ ಬೀರುವಿನ ಲಾಕರ್‌ನಲ್ಲಿಟ್ಟಿದ್ದ ಚಿನ್ನ ಮತ್ತು ವಜ್ರಾಭರಣಗಳು ಕಳುವಾಗಿರುವುದು ಕಂಡು ಬಂದಿದೆ.
ಮನೆಯಲ್ಲಿ ಆರು ತಿಂಗಳಿಂದ ಮನೆಕೆಲಸ ಮಾಡಿಕೊಂಡಿದ್ದ ಮನೆಗೆಲಸದವನ ಮೇಲೆ ಅನುಮಾನ ವ್ಯಕ್ತಪಡಿಸಿ ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಮನೆಗೆಲಸದವನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಚಿನ್ನ ಮತ್ತು ವಜ್ರಾಭರಣಗಳನ್ನು ಕಳವು ಮಾಡಿರುವುದಾಗಿ ಹೇಳಿದ್ದಾನೆ. ಕಳವು ಮಾಡಿದ ಚಿನ್ನ ಮತ್ತು ವಜ್ರಾಭರಣಗಳನ್ನು ಸುಧಾಮನಗರದಲ್ಲಿರುವ ತನ್ನ ವಾಸದ ಮನೆಯಲ್ಲಿಟ್ಟಿರುವುದಾಗಿ ಆರೋಪಿ ತಿಳಿಸಿದ್ದು, ಆತನ ಮಾಹಿತಿಯಂತೆ 176 ಗ್ರಾಂ ಚಿನ್ನ ಮತ್ತು ವಜ್ರಾಭರಣ ಹಾಗೂ 39 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯನ್ನು ಇನ್ಸ್ ಪೆಕ್ಟರ್ ಬಸವರಾಜು ಹಾಗೂ ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಇಬ್ಬರು ಮನೆಗಳ್ಳರ ಬಂಧನ 50 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಬೆಂಗಳೂರು,ಜ.28-ನಗರದ ಕುಟುಂಬವೊಂದು ಕುಂಭ ಮೇಳಕ್ಕೆ ಹೋಗಿದ್ದಾಗ ಮನೆಯ ಬೀಗ ಒಡೆದು ಕಳವು ಮಾಡಿ ಜ್ಯೂವೆಲರಿ ಅಂಗಡಿಗೆ ಮಾರಾಟ ಮಾಡಿದ್ದ ಇಬ್ಬರನ್ನು ಸುಬ್ರಹಣ್ಯಪುರ ಠಾಣೆ ಪೊಲೀಸರು ಬಂಧಿಸಿ 50 ಲಕ್ಷ ಮೌಲ್ಯದ 350 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಉತ್ತರಹಳ್ಳಿ, ಎಜಿಎಸ್ ಲೇಔಟ್‌ನ ನಿವಾಸಿ ಕುಟುಂಬ ಸಮೇತ ಉತ್ತರಪ್ರದೇಶ ರಾಜ್ಯದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದ್ದ ಕುಂಭಮೇಳಕ್ಕೆ ಹೋಗಿ ವಾಪಸ್ ಬರುವಷ್ಟರಲ್ಲಿ ಕಳ್ಳರು ಮನೆಯ ಬಾಗಿಲನ್ನು ಒಡೆದು ಕೊಠಡಿಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ, ಬೆಳ್ಳಿಯ ನಾಣ್ಯಗಳು ಹಾಗೂ 50 ಸಾವಿರ ಹಣ ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆಹಾಕಿ, ಪೀಣ್ಯಾ ವ್ಯಾಪ್ತಿಯ ದೊಡ್ಡಬಿದರಕಲ್ಲು ಮುಖ್ಯರಸ್ತೆಯಲ್ಲಿ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸಹಚರನೊಂದಿಗೆ ಸೇರಿಕೊಂಡು ಮನೆಗಳ್ಳತನ ಮಾಡಿದ್ದಾಗಿ ಹೇಳಿದ್ದಾನೆ.
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿ, ಕಳವು ಮಾಡಿದ ಚಿನ್ನಾಭರಣಗಳ ಪೈಕಿ ಸ್ವಲ್ಪ ಚಿನ್ನಾಭರಣಗಳನ್ನು ಪೀಣ್ಯಾದಲ್ಲಿರುವ ಜ್ಯೂವೆಲರಿ ಅಂಗಡಿಯೊಂದರಲ್ಲಿ ಅಡಮಾನವಿಟ್ಟಿರುವುದಾಗಿ ತಿಳಿಸಿದ್ದು, ಅದರಂತೆ 200 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ತನಿಖೆ ಮುಂದುವರೆಸಿದ ಪೊಲೀಸರು, ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಸಹಚರನನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಕಾರಾಗೃಹದಲ್ಲಿದ್ದು, ಪೊಲೀಸ್ ಅಭಿರಕ್ಷೆಗೆ ಪಡೆದು ವಿಚಾರಣೆಗೊಳಪಡಿಸಿ ಬಂಗಾರಪೇಟೆಯಲ್ಲಿರುವ ಜ್ಯೂವೆಲರಿ ಅಂಗಡಿಯೊಂದರಲ್ಲಿ ಅಡಮಾನವಿಟ್ಟಿದ್ದ ಜ್ಯೂವೆಲರಿ ಅಂಗಡಿಯಿಂದ 150 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್‌್ಸಪೆಕ್ಟರ್ ರಾಜು ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.
