ಬೆಂಗಳೂರು, ಫೆ.17- ಆಸ್ತಿಗಾಗಿ ಪಾಪಿ ಪುತ್ರನೇ ತಂದೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೂಪನಹಳ್ಳಿಯ ಮುತ್ತಿಯಾಲಮ ದೇವಾಲಯ ಸಮೀಪದ ನಿವಾಸಿ ಮುನಿಕೃಷ್ಣ (66) ಮಗನಿಂದಲೇ ಕೊಲೆಯಾದ ನತದೃಷ್ಟರು. ಇವರು ಬಿಎಂಟಿಸಿ ನಿವೃತ್ತ ಕಂಡಕ್ಟರ್.
ಮುನಿಕೃಷ್ಣ ಅವರು ಸ್ವಂತ ದುಡಿಮೆಯಿಂದ ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ಮಾಡಿದ್ದು, ಬಾಡಿಗೆ ಬರುತ್ತಿದೆ. ಕೆಲವು ಆಸ್ತಿಯ ವಿಲ್‌ನ್ನು ಮೊಮಕ್ಕಳ ಹೆಸರಿಗೆ ಮಾಡಿದ್ದಾರೆ. ಇದೇ ವಿಚಾರಕ್ಕೆ ಪುತ್ರ ಮೋಹನ್ ಕುಮಾರ್ ಕಳೆದ ಕೆಲವು ದಿನಗಳಿಂದ ತಂದೆ ಜೊತೆ ಜಗಳವಾಡುತ್ತಿದ್ದನು.
ಆಸ್ತಿ ಹಂಚಿಕೆ ವಿಚಾರವಾಗಿ ಶನಿವಾರ ಮತ್ತೆ ತಂದೆ ಜೊತೆ ಮೋಹನ್‌ಕುಮಾರ್ ಜಗಳವಾಡಿದ್ದು, ಗಲಾಟೆ ವಿಕೋಪಕ್ಕೆ ತಿರುಗಿದಾಗ ಕೈಗೆ ಸಿಕ್ಕಿದ ಹಾಕಿಸ್ಟಿಕ್ ಹಾಗೂ ರಾಡ್‌ನಿಂದ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ತಲೆಗೆ ಗಂಭೀರ ಪೆಟ್ಟಾಗಿದೆ.
ಇವರ ಮನೆಯಲ್ಲಿ ಕೂಗಾಟ ಕಿರುಚಾಟ ಕೇಳಿ ನೆರಹೊರೆಯವರು ಮನೆ ಬಳಿ ಬಂದು ಜಗಳ ಬಿಡಿಸಿ ತೀವ್ರವಾಗಿ ಗಾಯಗೊಂಡಿದ್ದ ಮುನಿಕಷ್ಣ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಇಂದು ಬೆಳಗ್ಗೆ ಮುನಿಕೃಷ್ಣಪ್ಪ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.ಘಟನೆ ಬಳಿಕ ಮಗ ತಲೆಮರೆಸಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಇಂದಿರಾನಗರ ಠಾಣೆ ಪೊಲೀಸರು ಕೊಲೆ ಪ್ರಕರಣದಾಖಲಿಸಿಕೊಂಡು ಆರೋಪಿ ಮೋಹನ್‌ಕುಮಾರ್‌ಗಾಗಿ ಶೋಧ ನಡೆಸುತ್ತಿದ್ದಾರೆ.
