Monday, April 13, 2026
Homeಬೆಂಗಳೂರುಪಾಲಿಕೆ ಸಿಬ್ಬಂದಿಗಳಿಗೆ ಸಿಗದ ಸಂಬಳ, ಕೆಲಸ-ಕಾರ್ಯ ಬಂದ್‌ ಮಾಡುವುದಾಗಿ ಎಚ್ಚರಿಕೆ

ಪಾಲಿಕೆ ಸಿಬ್ಬಂದಿಗಳಿಗೆ ಸಿಗದ ಸಂಬಳ, ಕೆಲಸ-ಕಾರ್ಯ ಬಂದ್‌ ಮಾಡುವುದಾಗಿ ಎಚ್ಚರಿಕೆ

Warning of strike over unpaid salaries for municipal employees

ಬೆಂಗಳೂರು, ಮಾ.11- ಬಿಬಿಎಂಪಿಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರವನ್ನಾಗಿ ರಚಿಸಿದ ನಂತರ ಅಲ್ಲಿನ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ ಎಂಬ ಆರೋಪ ಕೇಳಿ ಬರುತ್ತಿರುವ ಸಂದರ್ಭದಲ್ಲಿ ಜಿಬಿಎ ಸಿಬ್ಬಂದಿಗಳಿಗೆ ಸಕಾಲಕ್ಕೆ ವೇತನ ಪಾವತಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು ಪಶ್ಚಿಮ ನಗರಪಾಲಿಕೆ ಸಿಬ್ಬಂದಿಗಳಿಗೆ ಫೆಬ್ರವರಿ ತಿಂಗಳ ವೇತನ ಪಾವತಿಯಾಗಿಲ್ಲ. ಹೀಗಾಗಿ ಜಿಬಿಎ ನೌಕರರ ಸಂಘದ ಅಧ್ಯಕ್ಷಅಮೃತ್‌ ರಾಜ್‌ ಪಶ್ಚಿಮ ನಗರಪಾಲಿಕೆಯ ಆಯುಕ್ತರಿಗೆ ಪತ್ರ ಬರೆದು ಕೂಡಲೇ ಸಿಬ್ಬಂದಿಗಳಿಗೆ ವೇತನ ಪಾವತಿಸುವಂತೆ ಆಗ್ರಹಿಸಿದ್ದಾರೆ.

ಪಶ್ಚಿಮ ವಲಯದ ನಗರಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ನೌಕರರಿಗೆ ಮಾರ್ಚ್‌ 11 ರೊಳಗೂ ಫೆಬ್ರವರಿ ತಿಂಗಳ ವೇತನ ಪಾವತಿಸದ ಕಾರಣ ಹಲವು ಆರ್ಥಿಕ ಸಮಸ್ಯೆಗಳು ಎದುರಾಗುತ್ತಿವೆ ಎಂದು ಸಿಬ್ಬಂದಿ ತಮ್ಮ ಅಳಲನ್ನು ಸಂಘದ ಪದಾಧಿಕಾರಿಗಳ ಮುಂದೆ ವ್ಯಕ್ತಪಡಿಸಿದ್ದರು.

ಮನೆಬಾಡಿಗೆ ಪಾವತಿ, ಮಕ್ಕಳ ಶಾಲಾ ಶುಲ್ಕ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸುವುದಕ್ಕೂ ಕಷ್ಟವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ 24 ಗಂಟೆಗಳೊಳಗೆ ಫೆಬ್ರವರಿ ತಿಂಗಳ ವೇತನವನ್ನು ಪಾವತಿಸುವಂತೆ ಸಂಘವು ಆಯುಕ್ತರಿಗೆ ಮನವಿ ಮಾಡಿದೆ.

ಇಂದು ಸಂಜೆ ಒಳಗೆ ವೇತನ ಪಾವತಿ ಮಾಡದಿದ್ದರೆ ಪಶ್ಚಿಮ ವಲಯದ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಪತ್ರದ ಮೂಲಕ ಎಚ್ಚರಿಕೆ ನೀಡಲಾಗಿದೆ.
ಇದೀಗ ಪಶ್ಚಿಮ ನಗರಪಾಲಿಕೆಯಲ್ಲಿ ಆದಾಯ ಕಡಿಮೆ ಇರುವುದರಿಂದಲೇ ವೇತನ ಪಾವತಿಯಲ್ಲಿ ಸಮಸ್ಯೆ ಎದುರಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅತಿ ಹೆಚ್ಚು ವಾರ್ಡುಗಳನ್ನು ಹೊಂದಿರುವ ಈ ಪಾಲಿಕೆಯಲ್ಲಿ ಸಿಬ್ಬಂದಿಗಳ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಬರುತ್ತಿರುವ ಆದಾಯದಲ್ಲೇ ಸಿಬ್ಬಂದಿಗಳ ವೇತನ ಪಾವತಿ ಮಾಡಬೇಕು ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನೂ ಕೈಗೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ನಗರಪಾಲಿಕೆ ರಚನೆಯಾಗಿ ಕೇವಲ ಆರು ತಿಂಗಳು ಮಾತ್ರ ಕಳೆದಿರುವ ಈ ಸಂದರ್ಭದಲ್ಲಿ ವೇತನ ಪಾವತಿಗೆ ಆದಾಯ ಕೊರತೆ ಎದುರಾಗಿರುವುದು ಮುಂದಿನ ದಿನಗಳಲ್ಲಿ ಆಡಳಿತ ಹೇಗೆ ಸಾಗಲಿದೆ ಎಂಬ ಪ್ರಶ್ನೆಯನ್ನು ಸಿಬ್ಬಂದಿಗಳಲ್ಲಿ ಮೂಡಿಸಿದೆ.ಇದೇ ವೇಳೆ ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗದಿದ್ದರೆ ಪಶ್ಚಿಮ ನಗರಪಾಲಿಕೆಯ ಆಡಳಿತ ಹಾಗೂ ಸೇವೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ಎದುರಾಗಿದೆ.

RELATED ARTICLES

Latest News