-ಶ್ರೀಮತಿ ಟ್ವಿನ್ಸಿ ಆನ್ ಸುನಿಲ್, ಆಹಾರ ಮತ್ತು ಪೋಷಣಾ ತಜ್ಞೆ, ಅಪೊಲೊ ಸ್ಪೆಕ್ಟ್ರಾ, ಕೋರಮಂಗಲ, ಬೆಂಗಳೂರು
ಸಸ್ಯಾಧಾರಿತ ಆಹಾರಕ್ರಮಗಳು: ಎಲ್ಲರಿಗೂ ಸರಿಯೇ?
ಆಹಾರದ ಆಯ್ಕೆಯು ಕೇವಲ ಒಂದು ಪಂಗಡಕ್ಕೆ ಸೇರುವ ವಿಚಾರವಲ್ಲ, ಬದಲಿಗೆ ದೇಹಕ್ಕೆ ಬುದ್ಧಿವಂತಿಕೆಯಿಂದ ಇಂಧನ ಒದಗಿಸುವ ವಿಷಯವಾಗಿದೆ. ಹೃದಯರೋಗದ ಅಪಾಯ ಕಡಿಮೆ ಮಾಡುವ ದೃಷ್ಟಿಯಿಂದ ಸಸ್ಯಾಧಾರಿತ ಆಹಾರಕ್ರಮ ಮಿಶ್ರಾಹಾರಕ್ಕಿಂತ ಉತ್ತಮವಾಗಿದ್ದರೂ, ಅನುಕೂಲತೆ ಮತ್ತು ಪೌಷ್ಟಿಕ ಸಾಂದ್ರತೆಯ ವಿಚಾರದಲ್ಲಿ ಇವೆರಡನ್ನೂ ಸರಿಸಮವಾಗಿ ಹೋಲಿಸಲಾಗುವುದಿಲ್ಲ. ನಿಜವಾದ ಗಮನವಿರಬೇಕಾದುದು, ಸುಸ್ಥಿರ ಮತ್ತು ಉನ್ನತ ಕಾರ್ಯಕ್ಷಮತೆಯ ಜೀವನಕ್ಕಾಗಿ ದೇಹದ ಅಗತ್ಯಗಳನ್ನು ಪೂರೈಸುವ ಆಹಾರಗಳನ್ನು ಆರಿಸುವುದೇ.
ಸಂಪೂರ್ಣ ಮತ್ತು ಅಪೂರ್ಣ ಪ್ರೋಟೀನ್
ಈ ಎರಡು ಪೌಷ್ಟಿಕ ಮಾರ್ಗಗಳ ನಡುವಿನ ಮೂಲ ವ್ಯತ್ಯಾಸವೆಂದರೆ ದೇಹದ ಪ್ರೋಟೀನ್ ಬಳಕೆಯ ಸಾಮರ್ಥ್ಯ. ಮೊಟ್ಟೆ ಮತ್ತು ಕೋಳಿಮಾಂಸದಂಥ ಪ್ರಾಣಿಜ ಪ್ರೋಟೀನ್ಗಳು ‘ಸಂಪೂರ್ಣ’ ಪ್ರೋಟೀನ್ಗಳು. ಏಕೆಂದರೆ ಅವು ದೇಹಕ್ಕೆ ಅಗತ್ಯವಾದ ಎಲ್ಲಾ ಅಮೈನೋ ಆಮ್ಲಗಳನ್ನು ಸಾಂದ್ರ ರೂಪದಲ್ಲಿ ಹೊಂದಿರುತ್ತವೆ. ಉದಾಹರಣೆಗೆ, 100 ಗ್ರಾಂ ಕೋಳಿ ಬ್ರೆಸ್ಟ್ನಲ್ಲಿ 31 ಗ್ರಾಂ ಪ್ರೋಟೀನ್ ಮತ್ತು ಕೇವಲ 165 ಕೆಲೋರಿಗಳು ಇರುತ್ತವೆ.
ಬೇಳೆಕಾಳಿನಂಥ ಸಸ್ಯಜ ಪ್ರೋಟೀನ್ಗಳು ‘ಅಪೂರ್ಣ’ ಎನಿಸಿಕೊಳ್ಳುತ್ತವೆ. ಸಂಪೂರ್ಣ ಅಮೈನೋ ಆಮ್ಲ ಲಕ್ಷಣ ಪಡೆಯಲು ಇವುಗಳನ್ನು ಬೀನ್ಸ್ ಮತ್ತು ಅಕ್ಕಿಯಂಥ ಇತರ ಪ್ರೋಟೀನ್ ಮೂಲಗಳೊಂದಿಗೆ ಸೇರಿಸಿ ಸೇವಿಸಬೇಕಾಗುತ್ತದೆ. ಉದಾಹರಣೆಯ ಕೋಳಿ ಬ್ರೆಸ್ಟ್ನಷ್ಟು ಪ್ರೋಟೀನ್ ಪಡೆಯಲು 350 ಗ್ರಾಂ ಬೇಯಿಸಿದ ಅವರೆಕಾಳು ತಿನ್ನಬೇಕಾಗುತ್ತದೆ, ಇದು 400 ಕೆಲೋರಿಗಳಷ್ಟು ಶಕ್ತಿಯನ್ನು ನೀಡುತ್ತದೆ. ಇದು ಹೆಚ್ಚಿನ ಪ್ರಮಾಣದ ಆಹಾರವಾದರೂ, ಜೊತೆಗೆ ಜೀರ್ಣಕ್ರಿಯೆಗೆ ಸಹಾಯಕವಾದ ನಾರು ಮತ್ತು ದೇಹದ ಉರಿಯೂತವನ್ನು ತಡೆಗಟ್ಟುವ ಆಂಟಿ ಆಕ್ಸಿಡೆಂಟ್ಗಳನ್ನೂ ಒಳಗೊಂಡಿರುತ್ತದೆ. ಈ ಗುಣಗಳು ಮಾಂಸದಲ್ಲಿ ಇರುವುದಿಲ್ಲ.
ಸಾಂದ್ರತೆಯ ಈ ವ್ಯತ್ಯಾಸದಿಂದಾಗಿ, ‘ಸರಿಯಾದ’ ಆಹಾರಕ್ರಮವು ವ್ಯಕ್ತಿಯ ಜೀವನದ ಹಂತ ಮತ್ತು ಚಟುವಟಿಕೆಯ ಮಟ್ಟವನ್ನು ಹೆಚ್ಚಾಗಿ ಅವಲಂಬಿಸಿರುತ್ತದೆ:
ಕ್ರೀಡಾಪಟುಗಳು:
ಹೆಚ್ಚಿನ ನಾರಿನ ಅಂಶದಿಂದುಂಟಾಗುವ ಜೀರ್ಣಕ್ರಿಯೆಯ ತೊಂದರೆಯಿಲ್ಲದೆ, ಸ್ನಾಯು ಬೆಳವಣಿಗೆ ಮತ್ತು ಚೇತರಿಕೆಗೆ ಸಾಂದ್ರ ಪ್ರೋಟೀನ್ನ ಲಾಭ ಪಡೆಯಬಹುದು.
ಮಕ್ಕಳು ಮತ್ತು ಹದಿಹರೆಯದವರು:
ಮೂಳೆ ಮತ್ತು ಮೆದುಳಿನ ತ್ವರಿತ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹಾಲು ಮತ್ತು ಮಾಂಸ ಉತ್ಪನ್ನಗಳಲ್ಲಿನ ಸಾಂದ್ರ ಕ್ಯಾಲ್ಸಿಯಂ, ಸತು (ಜಿಂಕ್) ಮತ್ತು ಪ್ರೋಟೀನ್ ಅಗತ್ಯವಿದೆ.
ಹಿರಿಯರು (ವಯಸ್ಸಾದವರು):
ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವವರಿಗೆ ಹೆಚ್ಚಿನ ಪ್ರೋಟೀನ್ ಆಹಾರದ ಅಗತ್ಯವಿರುತ್ತದೆ. ಹೆಚ್ಚು ಸಾಂದ್ರತೆಯಿರುವ ಪ್ರಾಣಿ ಪ್ರೋಟೀನ್ಗಳು ಸ್ನಾಯು ಮತ್ತು ಮೆದುಳಿನ ಬಲಕ್ಕೆ ಪೋಷಕಾಂಶಗಳನ್ನು ಸುಲಭವಾಗಿ ಒದಗಿಸುವ ಮೂಲವಾಗಿದೆ.
ಆರ್ಥಿಕ ಅಂಶ
ಬಜೆಟ್ ಕೂಡ ತಟ್ಟೆಯಲ್ಲಿನ ಆಹಾರವನ್ನು ನಿರ್ಧರಿಸುತ್ತದೆ. ಒಣಗಿದ ಬೀನ್ಸ್ ಮತ್ತು ಓಟ್ಸ್ನಂಥ ಸಂಪೂರ್ಣ ಸಸ್ಯಜ ಆಹಾರಗಳು ಲಭ್ಯವಿರುವ ಅತ್ಯಂತ ವೆಚ್ಚ-ಪರಿಣಾಮಕಾರಿ ಪ್ರೋಟೀನ್ ಮೂಲಗಳು. ಮತ್ತೊಂದೆಡೆ, ಮೊಟ್ಟೆಯಂಥ ಪ್ರಾಣಿಜ ಆಹಾರಗಳು ಅಗತ್ಯ ವಿಟಮಿನ್ ಬಿ12 ಮತ್ತು ಕಬ್ಬಿಣದ ಅಂಶಗಳಿಗೆ ಉತ್ತಮ ಮಧ್ಯಮ ಮಾರ್ಗವಾಗಿವೆ. ಸಂಸ್ಕರಿತ ‘ಅಣಕು ಮಾಂಸ’ಗಳು ಮತ್ತು ಪ್ರೀಮಿಯಂ ದರ್ಜೆಯ ಮಾಂಸದ ತುಂಡುಗಳು ಸಾಮಾನ್ಯವಾಗಿ ಹೆಚ್ಚಿನ ಆರ್ಥಿಕ ವೆಚ್ಚ ತರುವುದೇ ಹೊರತು, ಸಂಪೂರ್ಣ ಆಹಾರಗಳಲ್ಲ.
ಆಯುಷ್ಯ ವೃದ್ಧಿ ಮತ್ತು ಕೊಲೆಸ್ಟ್ರಾಲ್ ಕಡಿತಕ್ಕೆ ಸಸ್ಯಾಧಾರಿತ ಆಹಾರಕ್ರಮ ಅತ್ಯುತ್ತಮವಾದರೆ, ಪೌಷ್ಟಿಕ ಸಾಂದ್ರತೆ ಮತ್ತು ಸುಲಭ ಅರಗುವಿಕೆಯ ದೃಷ್ಟಿಯಿಂದ ಪ್ರಾಣಿಜ ಆಹಾರಗಳು ಮಾನದಂಡವಾಗಿವೆ. ಯಾವುದೂ ಎಲ್ಲರಿಗೂ ಸಂಪೂರ್ಣವಾಗಿ ‘ಉತ್ತಮ’ ಎಂದು ವಸ್ತುನಿಷ್ಠವಾಗಿ ಹೇಳಲಾಗುವುದಿಲ್ಲ. ಅತ್ಯುತ್ತಮ ಮಾರ್ಗವೆಂದರೆ ಮಧ್ಯಮ ಮಾರ್ಗ. ಸಂಸ್ಕರಿತ ಪರ್ಯಾಯಗಳ ಬದಲಾಗಿ ಸಂಪೂರ್ಣ ಆಹಾರಗಳತ್ತ ಗಮನ ಕೇಂದ್ರೀಕರಿಸಿ, ವ್ಯಕ್ತಿಯ ಜೀವನದ ಹಂತಕ್ಕೆ ಅನುಗುಣವಾಗಿ ದೈಹಿಕವಾಗಿ ಉತ್ತಮವಾಗಿರುವ, ಆರ್ಥಿಕವಾಗಿ ಸಾಧ್ಯವಿರುವ ಆಹಾರಕ್ರಮವನ್ನು ರೂಪಿಸಿಕೊಳ್ಳುವುದು.
