Sunday, May 19, 2024
Homeರಾಜ್ಯಗಗನಕ್ಕೇರಿದ ವೀಳ್ಯದೆಲೆ ಬೆಲೆ

ಗಗನಕ್ಕೇರಿದ ವೀಳ್ಯದೆಲೆ ಬೆಲೆ

ಬೆಂಗಳೂರು, ಮೇ 11- ಶುಭಕಾರ್ಯಗಳಲ್ಲಿ ವೀಳ್ಯದೆಲೆ ಅಗ್ರಗಣ್ಯ ಸ್ಥಾನ ಪಡೆದಿದ್ದು, ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬೆಳೆಗಾರರಿಗೆ ಲಾಭವಾಗುತ್ತಿದ್ದರೆ ಗ್ರಾಹಕರಿಗೆ ಹೊರೆಯಾಗುತ್ತಿದೆ.

ಮೇ ತಿಂಗಳಲ್ಲಿ ಶುಭಕಾರ್ಯಗಳು ಹೆಚ್ಚಾಗಿ ನಡೆಯಲಿದ್ದು, ಬೇಡಿಕೆ ಹೆಚ್ಚಾದ ಬೆನ್ನಲ್ಲೆ ಬೆಲೆಯೂ ಸಹ ಹೆಚ್ಚಳವಾಗುತ್ತಿದೆ. ಪ್ರತಿ ಮೆನೆಗಳಲ್ಲೂ ಪೂಜಾಕಾರ್ಯ, ಕಳಶಕ್ಕೆ ಎಲೆಗಳನ್ನು ಬಳಸುತ್ತಾರೆ. ಈ ಋತುವಿನಲ್ಲಿ ಮದುವೆ, ಗೃಹಪ್ರವೇಶ, ಧಾರ್ಮಿಕ ಕಾರ್ಯಗಳು ಹೆಚ್ಚಾಗಿ ನಡೆಯಲಿವೆ. ಈ ಸಮಯದಲ್ಲಿ ಎಲ್ಲಾ ಪೂಜಾ ವಸ್ತುಗಳಿಗಿಂತ ವೀಳ್ಯದೆಲೆ ಎದ್ದು ಕಾಣಿಸುತ್ತದೆ.

ಬರ, ಹವಾಮಾನ ವೈಪರೀತ್ಯ, ರೋಗಬಾಧೆ, ಕಾರ್ಮಿಕರ ಸಮಸ್ಯೆಯಿಂದ ಇಳುವರಿ ಕುಂಠಿತವಾಗಿ ಬೇಡಿಕೆ ಹೆಚ್ಚಾದ ಪರಿಣಾಮ ಬೆಲೆ ಏರಿಕೆಯಾಗಿದೆ. ಒಂದು ಪೆಂಡಿಯಲ್ಲಿ 100 ಎಲೆಗಳ 100 ಕಟ್ಟುಗಳನ್ನಾಗಿ ಮಾಡಿ ಮಾರಾಟ ಮಾಡಲಾಗುತ್ತದೆ. ಪ್ರಸ್ತುತದಲ್ಲಿ ಒಂದು ಪೆಂಡಿ 12 ರಿಂದ 16 ಸಾವಿರದವರೆಗೂ ಮಾರುಕಟ್ಟೆಯಲ್ಲಿ ಬೆಲೆ ಇದೆ. ಅಂದರೆ ಬೆಳೆಗಾರರಿಗೆ ಒಂದು ಎಲೆಗೆ ಒಂದೂವರೆ ರೂ. ಸಿಗುತ್ತದೆ. ಚಿಲ್ಲರೆಯಾಗಿ ಒಂದು ಎಲೆ ಮೂರರಿಂದ ನಾಲ್ಕು ರೂ. ಚಿಲ್ಲರೆಯಾಗಿ ಮಾರಾಟವಾಗುತ್ತಿದೆ. ಕಟ್ಟಿನ ಲೆಕ್ಕದಲ್ಲಿ ನೋಡೋದಾದ್ರೆ ಉತ್ತಮ ಗುಣಮಟ್ಟದ ಅಂಬಾಡಿ ಎಲೆ 150 ರೂ. ಇದೆ.

ಇಲ್ಲಿ ಬೆಳೆಗಾರರಿಗೆ ಅಷ್ಟೆನೂ ಲಾಭ ಸಿಗುತ್ತಿಲ್ಲ. ಮಾರಾಟಗಾರರಿಗೆ, ಮಂಡಿಯವರಿಗೆ ಮಾತ್ರ ಲಾಭವಾಗುತ್ತಿದೆ. ತುಮಕೂರು ಜಿಲ್ಲೆಯ ಮಧುಗಿರಿ, ಶಿರಾ, ಕೊರಟಗೆರೆ, ಭಾಗದಲ್ಲಿ ಒಂದು ಕಾಲದಲ್ಲಿ ಎಲೆ ತೋಟಗಳು ಹೆಚ್ಚಾಗಿ ಕಾಣ ಸಿಗುತ್ತಿದ್ದವು. ನೀರಿನ ಕೊರತೆ, ರೋಗ, ಕೂಲಿಯಾಳುಗಳ ಸಮಸ್ಯೆಯಿಂದ ಇಂದು ತೋಟಗಳಲ್ಲಿ ಎಲೆ ಅಂಬು ಕಾಣಸಿಗದಾಗಿದೆ.

ವೀಳ್ಯದೆಲೆ ಬಳ್ಳಿಯನ್ನು ಪ್ರತಿ ವರ್ಷ ಭೂಮಿಯೊಳಗೆ ರಿಂಗ್‌ ಮಾದರಿಯಲ್ಲಿ ಅಗಿಯಬೇಕು. ಇದಕ್ಕೆ ನುರಿತ ಕಾರ್ಮಿಕರು ಬೇಕು. ಇಂದಿನ ದಿನಗಳಲ್ಲಿ ಬಳ್ಳಿ ಅದಿಯುವವರು ಸಿಗುತ್ತಿಲ್ಲ. ಜತೆಗೆ ಎಲೆಗಳನ್ನು ಕೊಯ್ಯಲು ಕೆಲ ನಿಯಮಗಳು ಇವೆ. ಆದರೆ ಇಂದಿನ ದಿನಗಳಲ್ಲಿ ಹಲವಾರು ಸಮಸ್ಯೆಗಳಿಂದ ಬೆಳೆ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಬೆಳೆ ಇಲ್ಲದೆ ಬೆಲೆ ಹೆಚ್ಚಳವಾಗಿದೆ.

ಈ ಬಾರಿ ದಾಖಲೆಯ ಉಷ್ಣಾಂಶದಿಂದ ಬಳ್ಳಿಯಲ್ಲಿ ಎಲೆ ಕಚ್ಚದೆ ಮುದುಡುತ್ತಿವೆ. ನೀರಿನ ಕೊರತೆಯಿಂದ ಇಳುವರಿ ಕುಂಠಿತವಾಗಿ ತಿಂಗಳಿಗೆ 10 ರಿಂದ 15 ಪೆಂಡಿ ಎಲೆ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದೆ. ಆದರೆ ಈಗ ಕೇವಲ 5 ರಿಂದ 6 ಪೆಂಡಿ ಮಾತ್ರ ಮಾರಾಟ ಮಾಡುತ್ತಿದ್ದೇನೆ ಎಂದು ತುಮಕೂರು ಜಿಲ್ಲೆ ಕೊರಟಗೆರೆಯ ರೈತ ಬಸವರಾಜು ತಿಳಿಸಿದ್ದಾರೆ.

ಈ ಬಾರಿ ಉತ್ತಮ ಮಳೆಯಾಗಿ ಇಳುವರಿ ಬಂದರೆ ಮಾತ್ರ ಬೆಲೆ ಕಡಿಮೆಯಾಗಲಿದೆ. ಇಲ್ಲದೆ ಇದ್ದರೆ ಬೆಲೆ ಕಡಿಮೆಯಾಗದು ಎಂದು ವ್ಯಾಪಾರಿ ಭದ್ರಣ್ಣ ತಿಳಿಸಿದ್ದಾರೆ.

RELATED ARTICLES

Latest News