Saturday, July 13, 2024
Homeರಾಜ್ಯಮುಂದಿನ ಅಧಿವೇಶನಕ್ಕೆ ಬಿಜೆಪಿ ಶಾಸಕಾರು ಗೈರು..?

ಮುಂದಿನ ಅಧಿವೇಶನಕ್ಕೆ ಬಿಜೆಪಿ ಶಾಸಕಾರು ಗೈರು..?

ಬೆಂಗಳೂರು,ನ.1- ಕೂಡಲೇ ವಿಧಾನಸಭೆ ಹಾಗೂ ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಮತ್ತು ಉಪನಾಯಕನನ್ನು ಆಯ್ಕೆ ಮಾಡದಿದ್ದರೆ ಬೆಳಗಾವಿ ಅಧಿವೇಶನಕ್ಕೆ ಗೈರು ಹಾಜರಾಗುವುದಾಗಿ ಬಿಜೆಪಿ ಶಾಸಕರು ಬೆದರಿಕೆ ಹಾಕಿದ್ದಾರೆ. ಮಂಗಳವಾರ ಸಂಜೆ ಪಕ್ಷದ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಹುತೇಕ ಶಾಸಕರು ಬೆಳಗಾವಿ ಅಧಿವೇಶನ ಆರಂಭವಾಗುವುದರೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಸದನಕ್ಕೆ ಹೋಗುವುದೇಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ನಾವು ವರಿಷ್ಠರ ವಿರುದ್ಧವಾಗಿ ನಡೆದುಕೊಳ್ಳುತ್ತಿಲ್ಲ. ಆದರೆ ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಆರು ತಿಂಗಳು ಮುಗಿಯುತ್ತಾ ಬಂದಿದೆ. ಈವರೆಗೂ ವಿಧಾನಸಭೆ ಹಾಗೂ ವಿಧಾನಪರಿಷತ್‍ಗೆ ಪ್ರತಿಪಕ್ಷದ ನಾಯಕ ಮತ್ತು ಉಪನಾಯಕನನ್ನು ಆಯ್ಕೆ ಮಾಡಿಲ್ಲ ಎಂದರೆ ಸದನದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾದರೂ ಹೇಗೆ ಎಂದು ಬಿಎಸ್‍ವೈ ಬಳಿ ಅನೇಕ ಶಾಸಕರು ಅಳಲು ತೋಡಿಕೊಂಡಿದ್ದಾರೆ.

ಆಡಳಿತ ಪಕ್ಷದವರು ಪ್ರತಿ ಹಂತದಲ್ಲೂ ನಮ್ಮನ್ನು ಸದನದ ಒಳಗೆ ಮತ್ತು ಹೊರಗೂ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡುವ ಯೋಗ್ಯತೆ ಇಲ್ಲದವರು ಎಂದು ಟೀಕಿಸುತ್ತಾರೆ. ಒಂದೊಂದು ವೈಫಲ್ಯವನ್ನು ಮುಂದಿಡಲು ಮುಂದಾಗುತ್ತಿದ್ದಂತೆ ಈ ಪ್ರಶ್ನೆಯನ್ನೇ ಮುಂದಿಟ್ಟು ನಮ್ಮ ಬಾಯಿ ಮುಚ್ಚಿಸುತ್ತಾರೆ ಎಂದು ಶಾಸಕರು ಹೇಳಿಕೊಂಡಿದ್ದಾರೆ.

ಶಾಸಕರ ನೋವಿಗೆ ದನಿಗೂಡಿಸಿರುವ ಯಡಿಯೂರಪ್ಪ , ಹಿಂದೆ ನಾನು ದೆಹಲಿಗೆ ಭೇಟಿ ನೀಡಿದ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ತಕ್ಷಣವೇ ವಿಧಾನಸಭೆ ಹಾಗೂ ಪ್ರತಿಪರಿಷತ್‍ಗೆ ಸೂಕ್ತರಾದವರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದ್ದೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಆಯ್ಕೆ ಮಾಡುವ ಆಶ್ವಾಸನೆ ಕೊಟ್ಟಿದ್ದರು. ಆದರೂ ಈಗಲೂ ಮಾಡದಿರುವುದು ವೈಯಕ್ತಿಕವಾಗಿ ನನಗೂ ಬೇಸರ ತಂದಿದೆ ಎಂದು ಹೇಳಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರ ಅಧಿಕಾರ ಅವಧಿ ಮುಗಿದು ಹಲವು ತಿಂಗಳೇ ಕಳೆದಿದೆ. ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಅರ್ಹರನ್ನೇ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲು ಮನವಿ ಮಾಡಲಾಗಿತ್ತು. ಇದರ ಬಗ್ಗೆಯೂ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ಸರ್ಕಾರವನ್ನು ಪ್ರಶ್ನಿಸಲು ಅನೇಕ ಹಗರಣಗಳಿವೆ. ಸದನದಲ್ಲಿ ನಾವು ಇದರ ಬಗ್ಗೆ ಗಟ್ಟಿಯಾಗಿ ದನಿ ಎತ್ತಬೇಕು. ಆದರೆ ನಮ್ಮಲ್ಲಿ ಪ್ರತಿಪಕ್ಷದ ನಾಯಕ ಇಲ್ಲದಿರುವಾಗ ನಾವು ಯಾರ ಸಾರಥ್ಯದಲ್ಲಿ ಸದನದೊಳಗೆ ಹೋರಾಟ ನಡೆಸಬೇಕು ಎಂಬುದೇ ಗೊತ್ತಾಗುತ್ತಿಲ್ಲ.

ಜೈಲಿನಿಂದ ಬಿಡುಗಡೆಯಾಗಿ ಮನೆ ಸೇರಿದ ಚಂದ್ರಬಾಬು ನಾಯ್ಡು

ಎಷ್ಟು ದಿನ ನಾವು ಸದನದಲ್ಲಿ ಸರ್ಕಾರದಿಂದ ಕುಹುಕ, ವ್ಯಂಗ್ಯ ಮಾತುಗಳನ್ನು ಕೇಳಬೇಕು, ಸದನದಲ್ಲಿ ಸ್ವಾಭಿಮಾನ ಬಿಟ್ಟು ಕೂರಬೇಕೆ ಎಂದು ಬಿಎಸ್‍ವೈ ಬಳಿ ಬೆಂಗಳೂರಿನ ಹಿರಿಯ ಶಾಸಕರೊಬ್ಬರು ನೋವು ಹೊರಹಾಕಿದ್ದಾರೆ.

ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ಅವೇಶನ ಮುಗಿದಿದೆ. ಅಧಿಕೃತ ವಿರೋಧ ಪಕ್ಷದ ನಾಯಕ ಇಲ್ಲದಿದ್ದರೆ ಬೆಳಗಾವಿ ಅವೇಶನಕ್ಕೆ ಹೋಗುವುದರಲ್ಲಿ ಅರ್ಥವೇ ಇಲ್ಲ. ತಕ್ಷಣವೇ ದೆಹಲಿ ನಾಯಕರ ಬಳಿ ಚರ್ಚಿಸಿ ಇದಕ್ಕೊಂದು ಅಂತ್ಯ ಹಾಡಬೇಕೆಂದು ಶಾಸಕರು ಕೇಳಿಕೊಂಡಿದ್ದಾರೆ.

ನವೆಂಬರ್ ತಿಂಗಳ ಅಂತ್ಯದೊಳಗೆ ಈ ಪ್ರಕ್ರಿಯೆ ಮುಗಿಯದಿದ್ದರೆ ಬೆಳಗಾವಿ ಅಧಿವೇಶನಕ್ಕೆ ನಾವು ಹೋಗುವುದೇ ಇಲ್ಲ. ನಮ್ಮನ್ನು ಮುಜುಗರ ಮಾಡಬೇಕೆಂಬ ಉದ್ದೇಶ ರಾಷ್ಟ್ರೀಯ ನಾಯಕರಿಗಿದ್ದರೆ ನಾವು ಏನೂ ಮಾಡಲು ಆಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಶಾಸಕರು ಇದರ ಬಗ್ಗೆ ಬಹಿರಂಗ ಹೇಳಿಕೆ ಕೊಡುವ ಅಗತ್ಯವಿಲ್ಲ. ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಕಾರಣ ರಾಷ್ಟ್ರೀಯ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ. ನಾನೇ ದೆಹಲಿಗೆ ತೆರಳಿ ಸಮಸ್ಯೆಯನ್ನು ಇತ್ಯರ್ಥಪಡಿಸುತ್ತೇನೆ. ಎಲ್ಲವೂ ಸುಖಾಂತ್ಯ ಕಾಣಲಿದೆ ಎಂದು ಬಿಎಸ್‍ವೈ ಶಾಸಕರಿಗೆ ಆಶ್ವಾಸನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

RELATED ARTICLES

Latest News