Thursday, December 12, 2024
Homeರಾಜ್ಯಡಿ.ಕೆ.ಸುರೇಶ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು

ಡಿ.ಕೆ.ಸುರೇಶ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು

ಬೆಂಗಳೂರು,ಫೆ.4- ದಕ್ಷಿಣ ಭಾರತದ ಪ್ರತ್ಯೇಕತೆಯ ಬಗ್ಗೆ ಹೇಳಿಕೆ ನೀಡಿದ್ದ ಸಂಸದ ಡಿ.ಕೆ.ಸುರೇಶ್ ಅವರ ಸದಾಶಿವನಗರದಲ್ಲಿರುವ ಮನೆಗೆ ಬಿಜೆಪಿ ಕಾರ್ಯಕರ್ತರು ನುಗ್ಗಿ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಇಂದು ಬೆಳಗ್ಗೆ ಅರಮನೆ ಮೈದಾನದ ಕಡೆಯಿಂದ ಬಳ್ಳಾರಿ ರಸ್ತೆಯನ್ನು ಏಕಾಏಕಿ ದಾಟಿ 50ಕ್ಕೂ ಹೆಚ್ಚು ಯುವ ಕಾರ್ಯಕರ್ತರು ಡಿ.ಕೆ.ಸುರೇಶ್ ಅವರ ಮನೆಯತ್ತ ನುಗ್ಗಿದರು.

ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಪರದಾಡಬೇಕಾಯಿತು. ಡಿ.ಕೆ.ಸುರೇಶ್ ಅವರ ಮನೆಯ ಎದುರಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನೆ ಇರುವುದರಿಂದ ಅಲ್ಲಿಗೆ ದಿನನಿತ್ಯ ಆಗಮಿಸುವ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸ್ ಭದ್ರತೆ ಇತ್ತು. ಹೀಗಾಗಿ ನುಗ್ಗಿ ಬರುತ್ತಿದ್ದ ಕಾರ್ಯಕರ್ತರನ್ನು ತಡೆಯಲು ಸಾಧ್ಯವಾಗಿದೆ. ಇಲ್ಲವಾಗಿದ್ದರೆ ದಿಢೀರ್ ನಡೆದ ಪ್ರತಿಭಟನೆ ಬೇರೆ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯೂ ಇತ್ತು.

ಬಳ್ಳಾರಿ ರಸ್ತೆ ದಾಟಿ ಬಂದ ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ಉಳಿದವರು ಓಡಲಾರಂಭಿಸಿದರು. ಪೊಲೀಸರು ಅವರ ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದುಕೊಂಡರು. ಆರಂಭದಲ್ಲೇ ಡಿ.ಕೆ.ಸುರೇಶ್ ಅವರ ಮನೆಯೊಳಗೆ ನುಗ್ಗಿದ ಕೆಲವರು ಧರಣಿ ನಡೆಸಿ ಜೈಶ್ರೀರಾಮ್ ಘೋಷಣೆ ಕೂಗಿದರು.
ಈ ದಿಢೀರ್ ಪ್ರತಿಭಟನೆ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಿಸಿತು. ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲು ಪರದಾಡಬೇಕಾಯಿತು.

ಫೆ.1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಬಳಿಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅದಕ್ಕೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್, ಕೇಂದ್ರದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ಇದರಿಂದಾಗಿ ಒಕ್ಕೂಟ ವ್ಯವಸ್ಥೆಯ ಮೇಲೆ ನಂಬಿಕೆ ಕುಸಿಯಲಿದೆ. ದಕ್ಷಿಣ ಭಾರತದ ರಾಜ್ಯಗಳು ಪ್ರತ್ಯೇಕತೆಯ ಒತ್ತಾಯ ಮಾಡುವ ಪರಿಸ್ಥಿತಿ ಬರಬಹುದೆಂದು ದೂರಿದ್ದರು.

ಕೋಲ್ಕತಾಗೆ ಶೀಘ್ರರೈಲು ಸಂಪರ್ಕ : ಸಿಎಂ ಮಾಣಿಕ್ ಸಹಾ

ದಕ್ಷಿಣ ಭಾರತ ರಾಜ್ಯಗಳ ಆರ್ಥಿಕ ಸಂಪನ್ಮೂಲಗಳನ್ನು ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಖರ್ಚು ಮಾಡಲಾಗುತ್ತಿದೆ ಎಂದು ಡಿ.ಕೆ.ಸುರೇಶ್ ಆರೋಪಿಸಿದ್ದರು. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಆರೋಪವನ್ನು ನಗಣ್ಯಗೊಳಿಸಿ ಡಿ.ಕೆ.ಸುರೇಶ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ ದೇಶಾದ್ಯಂತ ಗದ್ದಲ ಎಬ್ಬಿಸುತ್ತಿದೆ.

ಡಿ.ಕೆ.ಸುರೇಶ್ ಅವರ ನಿವಾಸದ ಎದುರು ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂಬ ಮುನ್ಸೂಚನೆ ಇದ್ದಾಗಿಯೂ ಸೂಕ್ತ ಬಂದೋಬಸ್ತ್ ಮಾಡದೆ ಇರುವ ಬಗ್ಗೆ ಆಕ್ರೋಶಗಳು ಕೇಳಿಬಂದಿವೆ. ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಬಿಜೆಪಿಯವರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ರಾಜ್ಯ ಸರ್ಕಾರವು ಅದಕ್ಕೆ ಸಹಕಾರ ನೀಡುತ್ತಿದೆ ಎಂದು ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News