Thursday, May 2, 2024
Homeರಾಜ್ಯಶಿವಮೊಗ್ಗದಲ್ಲಿ ಮೋದಿ ಫೋಟೋ ಫೈಟ್, ಕೆವಿಯಟ್ ಅರ್ಜಿ ಸಲ್ಲಿಸಿದ ರೆಬೆಲ್ ಈಶ್ವರಪ್ಪ

ಶಿವಮೊಗ್ಗದಲ್ಲಿ ಮೋದಿ ಫೋಟೋ ಫೈಟ್, ಕೆವಿಯಟ್ ಅರ್ಜಿ ಸಲ್ಲಿಸಿದ ರೆಬೆಲ್ ಈಶ್ವರಪ್ಪ

ಶಿವಮೊಗ್ಗ, ಏ.6-ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಲ್ಲಿ ಮಾಜಿ ಸಚಿವ ಕೆ.ಎಸ್ .ಈಶ್ವರಪ್ಪ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ರಾಜ್ಯದ ಗಮನ ಸೆಳೆದಿದೆ. ಈ ಮಧ್ಯೆ, ಇದೀಗ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಬಳಸುವ ವಿಚಾರವಾಗಿ ವಾಕ್ಸಮರ ಆರಂಭಗೊಂಡಿದ್ದು, ಇದೀಗ ಕೋರ್ಟ್ ಮೆಟ್ಟಿಲೇರಿದೆ. ಮೋದಿ ಫೋಟೋ ಬಳಕೆ ವಿಚಾರವಾಗಿ ಶಿವಮೊಗ್ಗ ಕೋರ್ಟ್‍ನಲ್ಲಿ ಈಶ್ವರಪ್ಪ ಕೆವಿಯಟ್ ಅರ್ಜಿ ಸಲ್ಲಿಸಿದ್ದಾರೆ.

ಈಶ್ವರಪ್ಪ ಪ್ರಚಾರದ ವೇಳೆ ಮೋದಿ ಭಾವಚಿತ್ರ ಬಳಸಿದ್ದಕ್ಕೆ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವ್ಯಂಗ್ಯವಾಡಿದ್ದರು. ರಾಘವೇಂದ್ರಗೆ ತಿರುಗೇಟು ನೀಡಿದ್ದ ಈಶ್ವರಪ್ಪ, ಮೋದಿ ಅವರಪ್ಪನ ಆಸ್ತಿಯಾ ಎಂದು ಕೌಂಟರ್ ಕೊಟ್ಟಿದ್ದರು. ಇದೀಗ ಮೋದಿ ಫೋಟೋಗಾಗಿ ಕೋರ್ಟ್ ಮೊರೆಹೋಗಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಈಶ್ವರಪ್ಪ ಅವರನ್ನು ಮನವೊಲಿಸುವುದಕ್ಕಾಗಿ ಇತ್ತೀಚೆಗೆ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ದೆಹಲಿಗೆ ಬರುವಂತೆ ತಿಳಿಸಿದ್ದರು. ಅದರಂತೆ ದೆಹಲಿಗೆ ತೆರಳಿದ್ದ ಈಶ್ವರಪ್ಪ, ಭೇಟಿಗೆ ಅವಕಾಶ ಸಿಗದೇ ವಾಪಸ್ ಆಗಿದ್ದರು.

ನಂತರ ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ತಾವು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಕ್ಕೆ ಹೈಕಮಾಂಡ್ ನಾಯಕರ ಸಮ್ಮತಿ ಇರಬಹುದು. ಬಹಿರಂಗವಾಗಿ ಅಲ್ಲವಾದರೂ ಒಳಗಿಂದೊಳಗೆ ಅವರಿಗೆ ಮನಸಿರಬಹುದು. ರಾಜ್ಯದಲ್ಲಿ ಅಪ್ಪ ಮಕ್ಕಳ ಹಿಡಿತದಿಂದ ಪಕ್ಷವನ್ನು ಹೊರ ತರುವುದಕ್ಕಾಗಿ ಅವರು ನನ್ನ ಸ್ಪರ್ಧೆ ಬಗ್ಗೆ ಒಲವು ಹೊಂದಿರಬಹುದು ಎಂದು ಹೇಳಿದ್ದರು.

ಇನ್ನು ಚುನಾವಣಾ ಪ್ರಚಾರದ ವೇಳೆ ಮೋದಿ ಫೋಟೋ ಬಳಕೆ ವಿಚಾರವಾಗಿ ನೋಡುವುದಾದರೆ, ಈ ಹಿಂದೆ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೂಡ ಇಂಥದ್ದೇ ಒಂದು ಪ್ರಕರಣ ವರದಿಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅರುಣ್ ಕುಮಾರ್ ಪುತ್ತಿಲ ಮೋದಿ ಭಾವಚಿತ್ರ ಬಳಸಿದ್ದಲ್ಲದೆ, ಮೋದಿ ಹೆಸರು ಹೇಳಿಕೊಂಡೇ ಚುನಾವಣೆ ಪ್ರಚಾರ ನಡೆಸಿದ್ದರು.

ಸ್ಥಳೀಯ ಬಿಜೆಪಿ ನಾಯಕರ ವಿರೋಧದ ಮಧ್ಯೆಯೂ ಅವರು ಪ್ರಚಾರದಲ್ಲಿ ಮೋದಿ ಹೆಸರು ಬೆಳೆಸಿಕೊಂಡಿದ್ದಲ್ಲದೆ ಚುನಾವಣೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಹೈಕಮಾಂಡ್ ವರೆಗೆ ಗಮನ ಸೆಳೆದಿದ್ದರು. ಇತ್ತೀಚಿಗೆ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

RELATED ARTICLES

Latest News