Friday, May 24, 2024
Homeರಾಜಕೀಯಈಶ್ವರಪ್ಪ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಾ ಬಿಜೆಪಿ..?

ಈಶ್ವರಪ್ಪ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಾ ಬಿಜೆಪಿ..?

ಬೆಂಗಳೂರು,ಏ.12- ಪಕ್ಷದ ಆದೇಶವನ್ನು ಧಿಕ್ಕರಿಸಿ ಪ್ರತಿಷ್ಠಿತ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಚಿಂತನೆ ನಡೆದಿದೆ. ನಾಮಪತ್ರ ಹಿಂಪಡೆಯುವ ಕೊನೆಯ ದಿನದವರೆಗೂ ಸಮಯಾವಕಾಶ ನೀಡಲು ಕೇಂದ್ರ ಬಿಜೆಪಿ ನಾಯಕರು ತೀರ್ಮಾನಿಸಿದ್ದು, ಒಂದು ವೇಳೆ ತಮ್ಮ ನಿರ್ಧಾರದಿಂದ ಈಶ್ವರಪ್ಪ ಹಿಂದೆ ಸರಿಯದಿದ್ದರೆ ಶಿಸ್ತು ಕ್ರಮದ ತೂಗು ಗತ್ತಿ ಎದುರಾಗುವುದು ಖಚಿತ ಎಂದು ತಿಳಿದುಬಂದಿದೆ.

ಸ್ಪರ್ಧಾ ಕಣದಲ್ಲಿ ಉಳಿದ ಮೇಲೂ ಈಶ್ವರಪ್ಪ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಈಶ್ವರಪ್ಪ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ. ತಕ್ಷಣವೇ ಕ್ರಮ ಕೈಗೊಂಡರೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಈಶ್ವರಪ್ಪ ಜೊತೆ ನಿಕಟ ಸಂಪರ್ಕ ಇರುವ ರಾಷ್ಟ್ರೀಯ ಪ್ರಮುಖ ನಾಯಕರ ಜೊತೆ ಸಂಧಾನ ನಡೆಸುವಂತೆ ಕೇಂದ್ರ ನಾಯಕರು ಸೂಚನೆ ನೀಡಿದ್ದಾರೆ. ಒಂದು ವೇಳೆ ಅಷ್ಟಕ್ಕೂ ಜಗ್ಗದಿದ್ದರೆ ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯ ಎಂಬ ಸಂದೇಶವನ್ನು ರವಾನಿಸಲಾಗಿದೆ.
ನಾಮಪತ್ರ ಪಡೆಯುವ ದಿನದವರೆಗೂ ಈಶ್ವರಪ್ಪ ವಿರುದ್ಧ ಯಾರೂ ಕೂಡ ಅನಗತ್ಯವಾಗಿ ಮಾತನಾಡುವುದು ಇಲ್ಲವೇ ವೈಯಕ್ತಿಕ ಟೀಕೆ ನಡೆಸಬಾರದು.

ಎಲ್ಲವನ್ನೂ ವರಿಷ್ಠರು ಅವಲೋಕಿಸುತ್ತಿದ್ದು, ನಂತರವಷ್ಟೇ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಿಂದುಳಿದ ಸಮುದಾಯದ ಪ್ರಭಾವಿ ನಾಯಕರಾಗಿರುವ ಈಶ್ವರಪ್ಪ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವುದು ಆತುರದ ನಿರ್ಧಾರವಾಗುತ್ತದೆ. ಯಾವುದಕ್ಕೂ ಕಾದುನೋಡಿ ಮುಂದಿನ ಕ್ರಮ ಜರುಗಿಸಬೇಕೆಂದು ರಾಜ್ಯ ಘಟಕವು ಸಲಹೆ ಮಾಡಿದೆ ಎಂದು ಗೊತ್ತಾಗಿದೆ.

RELATED ARTICLES

Latest News