ಸಂಬಲ್ಪುರ, ಮಾ.27 (ಪಿಟಿಐ) : ಒಡಿಶಾದ ಸಂಬಲ್ಪುರ ನಗರದಲ್ಲಿ ಅಪರಿಚಿತರು ಕಚ್ಚಾ ಬಾಂಬ್ಗಳನ್ನು ಎಸೆದ ಪರಿಣಾಮ ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ತಡರಾತ್ರಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಪಿರಬಾಬ ಚಕ್ ಎಂಬಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಕಚ್ಚಾ ಬಾಂಬ್ಗಳನ್ನು ಎಸೆದ ಪರಿಣಾಮ ವಾಹನದ ಬಳಿ ನಿಂತಿದ್ದ ಇಬ್ಬರಿಗೆ ಗಾಯಗಳಾಗಿವೆ.
ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ವಿವರವಾದ ತನಿಖೆ ನಡೆಯುತ್ತಿದೆ ಎಂದು ಸಂಬಲ್ಪುರ ಪೊಲೀಸ್ ವರಿಷ್ಠಾಧಿಕಾರಿ ಮುಖೇಶ್ ಕುಮಾರ್ ಭಾಮೂ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂಬಲ್ಪುರ ಜಿಲ್ಲಾಧಿಕಾರಿ ಅಕ್ಷಯ್ ಸುನಿಲ್ ಅಗರ್ವಾಲ್ ಜನರು ಶಾಂತಿ ಕಾಪಾಡುವಂತೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ಭಯಪಡಬೇಡಿ ಮತ್ತು ಆಡಳಿತದೊಂದಿಗೆ ಸಹಕರಿಸಿ ಎಂದು ಕಲೆಕ್ಟರ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಘಟನೆಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ ಮತ್ತು ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೋಟಾರ್ಸೈಕಲ್ನ ಮೇಲೆ ಬಾಂಬ್ ಬಿದ್ದಿದ್ದರಿಂದ ಸೀಟು ಸುಟ್ಟು ಕರಕಲಾಗಿದೆ.ಭಾಮೂ ಹಾಗೂ ಉತ್ತರ ವಲಯದ ಐಜಿ ಹಿಮಾಂಶುಕುಮಾರ್ ಲಾಲ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳವನ್ನು ಸುತ್ತುವರಿಯಲಾಗಿದೆ ಮತ್ತು ಕೇಂದ್ರ ಪಡೆಗಳನ್ನು ಸಹ ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಏಪ್ರಿಲ್ 2023 ರಲ್ಲಿ ಹನುಮ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ನಗರವು ಕೋಮು ಘರ್ಷಣೆಗೆ ಸಾಕ್ಷಿಯಾಯಿತು. ಗಲಭೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಹಲವಾರು ಅಂಗಡಿಗಳು ಸುಟ್ಟು ಕರಕಲಾಗಿದ್ದವು.