Sunday, September 8, 2024
Homeರಾಜ್ಯವಿಕಸಿತ ಭಾರತ ಸಂಕಲ್ಪ ಯಾತ್ರೆ ಯಶಸ್ವಿಗೆ ವಿಜಯೇಂದ್ರ ಕರೆ

ವಿಕಸಿತ ಭಾರತ ಸಂಕಲ್ಪ ಯಾತ್ರೆ ಯಶಸ್ವಿಗೆ ವಿಜಯೇಂದ್ರ ಕರೆ

ಬೆಂಗಳೂರು, ಡಿ.27- ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ನಡೆಸುವ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪದಾಧಿಕಾರಿಗಳ ಸಭೆ ನಡೆಸಿದರು.

ಮೂರು ದಿನಗಳ ಹಿಂದೆಯಷ್ಟೇ ಪಕ್ಷಕ್ಕೆ ನೂತನವಾಗಿ ಪದಾಕಾರಿಗಳ ಸಭೆ ನಡೆಸಿದ ಬೆನ್ನಲ್ಲೇ ಮೊದಲ ಬಾರಿಗೆ ವಿಜಯೇಂದ್ರರವರು ನಡೆಸಿದ ಈ ಸಭೆಯಲ್ಲಿ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಪಕ್ಷದ ಉಪಾಧ್ಯಕ್ಷರಾದ ಮುರುಗೇಶ್ ನಿರಾಣಿ, ಹರತಾಳ್ ಹಾಲಪ್ಪ, ಭೈರತಿ ಬಸವರಾಜು, ರಾಜುಗೌಡ ನಾಯಕ್, ಎನ್.ಮಹೇಶ್, ಮಾಳವಿಕ ಅವಿನಾಶ್, ಎಂ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ವಿ.ಸುನಿಲ್‍ಕುಮಾರ್, ಪ್ರೀತಂಗೌಡ, ನಂದೀಶ್‍ರೆಡ್ಡಿ ಸೇರಿದಂತೆ ಹೊಸ ಪದಾಕಾರಿಗಳು ಭಾಗವಹಿಸಿದ್ದರು.

ಈ ಹಿಂದೆ ನಿಕಟಪೂರ್ವ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವಧಿಯಲ್ಲಿ ನೇಮಕಗೊಂಡಿದ್ದ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಸಂಘಟನೆ ಹಾಗೂ ಕಾರ್ಯಕರ್ತರ ಜೊತೆ ಹೆಚ್ಚು ಒಡನಾಟ ಹೊಂದಿರುವವರನ್ನೇ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ನೂತನ ಪದಾಧಿಕಾರಿಗಳು ಸಲಹೆ ಮಾಡಿದ್ದಾರೆ.

ಆ ಬಣ, ಈ ಬಣ ಎನ್ನದೇ ಪಕ್ಷನಿಷ್ಠರು ಮತ್ತು ಕಾರ್ಯಕರ್ತರ ಜೊತೆ ಹೊಂದಿಕೊಂಡು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವವರನ್ನೇ ನೇಮಿಸಬೇಕೆಂದು ಮನವಿ ಮಾಡಲಾಗಿದೆ. ಇನ್ನು ಪದಾಧಿಕಾರಿಗಳ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಚರ್ಚೆ ನಡೆಸಲಾಯಿತು.

ಆಡಳಿತಾರೂಢ ಕಾಂಗ್ರೆಸ್ ತನ್ನ ಪಂಚಗ್ಯಾರಂಟಿ ಯೋಜನೆಗಳನ್ನೇ ಚುನಾವಣೆ ಅಸ್ತ್ರ ಮಾಡಿಕೊಳ್ಳಲಿದೆ. ಇದಕ್ಕೆ ಪರ್ಯಾಯವಾಗಿ ನಾವು ರಾಜ್ಯದ ಜನತೆಗೆ ಮೋದಿ ಗ್ಯಾರಂಟಿಯನ್ನೇ ಹೆಚ್ಚು ಬಿಂಬಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ದಟ್ಟ ಮಂಜು ತಂದ ಆಪತ್ತು, 25ಕ್ಕೂ ಹೆಚ್ಚು ಮಂದಿಗೆ ಗಾಯ

ಇತ್ತೀಚೆಗೆ ನಡೆದ 5 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 3 ರಾಜ್ಯಗಳನ್ನು ಗೆದ್ದಿರುವುದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದಿದೆ. ಕಾಂಗ್ರೆಸ್ ಈ ರಾಜ್ಯಗಳಲ್ಲೂ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದರೂ ಮತದಾರ ಕೈಹಿಡಿಯಲಿಲ್ಲ. ಬದಲಿಗೆ ಮೋದಿ ಗ್ಯಾರಂಟಿಗೆ ಜೈ ಅಂದಿದ್ದಾರೆ. ಕರ್ನಾಟಕದಲ್ಲೂ ಮೋದಿ ಗ್ಯಾರಂಟಿಯನ್ನೇ ನಾವು ಮುಂಚೂಣಿಗೆ ತರೋಣ. ಇದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.

ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಬಿಜೆಪಿ ಸೋಲು ಕಾರ್ಯಕರ್ತರಿಗೆ ತೀವ್ರ ನಿರಾಸೆ ತಂದಿತ್ತು. ಈಗ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಸಂಘಟನೆಯನ್ನು ಗ್ರಾಪಂನಿಂದ ಜಿಲ್ಲಾಮಟ್ಟದವರೆಗೂ ಸಂಘಟಿಸಬೇಕೆಂದು ಕೆಲ ಹಿರಿಯರು ಬಿ.ವೈ.ವಿಜಯೇಂದ್ರರವರಿಗೆ ಸಲಹೆ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯಾಗಿದ್ದು, ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಉಂಟಾಗದಂತೆ ವಿಶ್ವಾಸದ ಮೂಲಕವೇ ಮೈತ್ರಿ ಮುನ್ನಡೆಸಬೇಕೆಂದು ಪದಾಕಾರಿಗಳು ಸಲಹೆ ಕೊಟ್ಟಿದ್ದಾರೆ.

ಯಶಸ್ವಿ ಯಾತ್ರೆ : ಪ್ರಧಾನಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನವನ್ನು ರಾಜ್ಯದಲ್ಲಿ ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ದೇಶದ ಬಡಜನರು, ಸಾಮಾನ್ಯ ಜನರು, ರೈತರು ಸೇರಿದಂತೆ ಅನೇಕ ವರ್ಗದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ಪ್ರಧಾನಿ ಮೋದಿ ಅವರು ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಪಿಎಂ ಕೃಷಿ ಸಮ್ಮನ್ ಯೋಜನೆ, ಪಿಎಂ ಜೀವನ್ ಜ್ಯೋತಿ, ಪ್ರಧಾನ ಮಂತ್ರಿ ಸುರಕ್ಷ ಭೀಮ ಯೋಜನೆ, ಆಟಲ್ ಪಿಂಚಣಿ ಯೋಜನೆ, ಪ್ರಧಾನಮಂತ್ರಿ ಉಜ್ವಲ ಯೋಜನೆ, ಪ್ರಧಾನಮಂತ್ರಿ ಮುದ್ರಾ ಯೋಜನೆ,

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ, ಸ್ವಸಹಾಯ ಗುಂಪುಗಳಿಗೆ ಸಾಲ ಯೋಜನೆ, ಪಿಎಂ ವಿದ್ಯಾರ್ಥಿ ವೇತನ, ಆಯುಷ್ ಮಾನ್ ಕಾರ್ಡ್ ವಿತರಣೆ, ಜಲ್ ಜೀವನ್ ಮಿಷನ್ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ, ಈ ಯೋಜನೆಗಳ ಬಗ್ಗೆ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಅದೇಷ್ಟೋ ಜನಸಾಮಾನ್ಯರಿಗೆ ಮಾಹಿತಿ ಇಲ್ಲ. ಯೋಜನೆಗಳನ್ನ ಸದುಪಯೋಗ ಕೂಡ ಪಡಿಸಿಕೊಳ್ಳುತ್ತಿಲ್ಲ. ಇದರ ಬಗ್ಗೆ ಜನತೆಗೆ ಕಾರ್ಯಕರ್ತರು ಮನವರಿಕೆ ಮಾಡಿಕೊಡಬೇಕು ಎಂದು ವಿಜಯೇಂದ್ರ ಸೂಚಿಸಿದ್ದಾರೆ.

ರಾಜ್ಯದ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿಗಳ ಬಳಿ ಎರಡು ವಾಹನಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಹೇಗೆ ಯೋಜನೆಗಳನ್ನು ಪಡೆಯಬಹುದು ಎನ್ನುವುದನ್ನು ತಿಳಿಸಿಕೊಡಲಾಗುತ್ತಿದೆ.

ದರ್ಶನ್‍ಗಾಗಿ ಮತ್ತೆ ಸ್ಯಾಂಡಲ್‍ವುಡ್‍ಗೆ ಮೆಗಾಸ್ಟಾರ್ ರೀಎಂಟ್ರಿ..?

ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮೂಲ ಉದ್ದೇಶ, ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳನ್ನ ಜನರಿಗೆ ತಿಳಿಸುವುದಾಗಿದೆ. ಸರ್ಕಾರ ಬಡವರ ಕಲ್ಯಾಣಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮ ಪ್ರಚಾರ ಮಾಡಲಾಗಿದೆ. ಯೋಜನೆಗಳ ಬಗ್ಗೆ ಜನರಿಗೆ ತಿಳಿಸಲಾಗುತ್ತಿದೆ. ದೇಶದಲ್ಲಿ ಮೋದಿ ಗ್ಯಾರಂಟಿ ಗಾಡಿ ಓಡುತ್ತಿದೆ. ಜನವರಿ 25 ರವರೆಗೆ ಪ್ರತಿ ಗ್ರಾಮ, ಪಟ್ಟಣದಲ್ಲಿ ಸಂಚರಿಸಿ ಯೋಜನೆಗಳ ಪ್ರಚಾರ ಕೈಗೊಳ್ಳಲಿದೆ.

ರಾಜ್ಯದಲ್ಲಿ ಇದನ್ನು ಯಶಸ್ವಿಯಾಗಿ ನಡೆಸುವ ಮೂಲಕ ಮೋದಿಯವರನ್ನೇ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ಮತದಾರರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಕಾರ್ಯಕರ್ತರು ಮಾಡಿಕೊಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

RELATED ARTICLES

Latest News