Saturday, May 4, 2024
Homeರಾಜಕೀಯರೈತರನ್ನು ಭಿಕ್ಷುಕರಂತೆ ಕಾಣುವ ಕಾಂಗ್ರೆಸ್ ಸರ್ಕಾರ ಬದುಕಿದ್ದೂ ಸತ್ತಂತೆ : ವಿಜಯೇಂದ್ರ ಆಕ್ರೋಶ

ರೈತರನ್ನು ಭಿಕ್ಷುಕರಂತೆ ಕಾಣುವ ಕಾಂಗ್ರೆಸ್ ಸರ್ಕಾರ ಬದುಕಿದ್ದೂ ಸತ್ತಂತೆ : ವಿಜಯೇಂದ್ರ ಆಕ್ರೋಶ

ತಿ.ನರಸೀಪುರ, ಏ.23-ನಾಡಿನ ಜನತೆಗೆ ಎರಡು ತುತ್ತು ಅನ್ನಕೊಡುವ ರೈತರನ್ನು ಭಿಕ್ಷುಕರಂತೆ ಕಾಣುವ ರಾಜ್ಯದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರ್ಕಾರ ರೈತರ ಪಾಲಿಗೆ ಬದುಕಿದ್ದೂ ಸತ್ತಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಮೂಗೂರು ಗ್ರಾಮದ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಬೃಹತ್ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಲೋಕಸಭೆ ಚುನಾವಣೆಯ ನಿಮಿತ್ತ ಪ್ರವಾಸ ಕೈಗೊಂಡ ವೇಳೆ ರಾಜ್ಯದಲ್ಲಿ ಜವಾಬ್ದಾರಿ ಸರ್ಕಾರ ಬದುಕಿದೆ, ಜವಾಬ್ದಾರಿಯುತ ಮುಖ್ಯ ಮಂತ್ರಿ ಇದ್ದಾರೆ ಎಂದು ಅನಿಸಲೇ ಇಲ್ಲ, ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರು ಈ ಭಾಗದವರೇ, ಈ ಭಾಗದಲ್ಲಿ ರೈತರ ಪರಿಸ್ಥಿತಿ ನೋಡಿ ದುಃಖವಾಗಿದೆ.

ಕಾವೇರಿ ನೀರನ್ನು ಸಂಪೂರ್ಣವಾಗಿ ತಮಿಳುನಾಡಿಗೆ ಹರಿಸಿ ಈ ಭಾಗದ ರೈತರ ಕೈಗೆ ಚೊಂಬು ಕೊಡುವ ಕೆಲಸವನ್ನು ಮುಖ್ಯಮಂತ್ರಿ ಮಾಡಿದ್ದಾರೆ, ರೈತರ ಸಂಕಷ್ಟಕ್ಕೆ ಸ್ಪಂದನೆ ಮಾಡುವ ಕೆಲಸವಾಗಿಲ್ಲ,ತಮಿಳು ನಾಡಿಗೆ ಹರಿಸಿದ ನೀರಿನಲ್ಲಿ ಸ್ವಲ್ಪ ನೀರನ್ನು ರಾಜ್ಯದ ರೈತರ ಬೆಳಗೆ ಬಿಟ್ಟಿದ್ದಲ್ಲಿ ರೈತರಿಗೆ ಈ ಪರಿಯ ದುಃಸ್ಥಿತಿ ಬರುತ್ತಿರಲಿಲ್ಲ. ಬೆಳೆ ಬೆಳೆಯಲಾಗದೇ ರೈತರು ಕಂಗಾಲಾಗಿದ್ದಾರೆ,ಬರದ ಸಂದರ್ಭದಲ್ಲಿ ಪರಿಹಾರ ಕೊಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ, ಜನ ಜಾನುವಾರುಗಳಿಗೆ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಯಡಿಯೂರಪ್ಪ ರವರೂ ಸಹ ಮುಖ್ಯಮಂತ್ರಿ ಯಾಗಿದ್ರು, ರಾಜ್ಯದಲ್ಲಿ ಮಳೆ ಬಂದು ಭೀಕರ ಪ್ರವಾಹ ಬಂದಿತ್ತು.ಕ್ಯಾಬಿನೆಟ್ ಸಂಪೂರ್ಣವಾಗಿ ರಚನೆಯಾಗಿರಲಿಲ್ಲ,ಯಡಿಯೂರಪ್ಪ ಮುಖ್ಯ ಮಂತ್ರಿ ಯಾಗಿ ಏಕಾಂಗಿಯಾಗಿದ್ರು, ಆದರೂ ಅವರು ದೃತಿಗೆಡದೇ ಕೈ ಚೆಲ್ಲಿ ಕೂರಲಿಲ್ಲ,ಪ್ರವಾಹ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ರು,ಆದರೆ ಈಗಿನ ಮುಖ್ಯಮಂತ್ರಿ ಇದ್ದಾರೆ, ರೈತರಿಗೆ ಪರಿಹಾರ ಕೊಡಿ ಅಂದ್ರೆ ಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ ಅಂತಾರೆ ಎಂದು ಲೇವಡಿ ಮಾಡಿದರು.

ಜನತೆಗೆ ಮಕ್ಮಲ್ ಟೋಪಿ ಹಾಕುತ್ತಿರುವ ಸಿದ್ದು…!:
ಗ್ಯಾರಂಟಿ ಯೋಜನೆಗಳ ಮೂಲಕ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಹೇಳುತ್ತಿರುವ ಸಿದ್ದರಾಮಯ್ಯ ರವರು ಕಮರ್ಷಿಯಲ್ ವಿದ್ಯುತ್ ಗೆ ಕರೆಂಟ್ ಬಿಲ್ ಹೆಚ್ಚು ಮಾಡಿದ್ದು, 3 ಸಾವಿರ ಬರುತ್ತಿದ್ದ ವಾಣಿಜ್ಯ ಚಟುವಟಿಕೆಯ ಅಂಗಡಿಗಳ ಬಿಲ್ ಈಗ 7ರಿಂದ 8 ಸಾವಿರ ಬರುತ್ತಿದೆ.

ಗೃಹಿಣಿಯರಿಗೆ 2 ಸಾವಿರ ನೀಡುತ್ತಿರುವ ಹಣ ಸಹ ಮಹಿಳೆಯರ ಗಂಡಂದಿರು ಬಳಸುವ ಮದ್ಯದ ಬೆಲೆ ಏರಿಕೆಯಿಂದ ಕೊಡುವಂಥಾದ್ದು, ಶಕ್ತಿ ಯೋಜನೆ ಯಡಿ ಉಚಿತ ಬಸ್ ಪ್ರಯಾಣದಲ್ಲಿ ಸಹ ಸಿದ್ದರಾಮಯ್ಯ ಬಹಳ ಜಾಣ್ಮೆ ಪ್ರದರ್ಶನ ಮಾಡಿದ್ದು ಪುರುಷರ ಬಸ್ ಚಾರ್ಜ್ ಅನ್ನು ಶೇ.30 ರಷ್ಟು ಏರಿಕೆ ಮಾಡಿ ಅಲ್ಲಿಂದ ಬಂದ ಹಣದಿಂದಲೇ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡುತ್ತಿದ್ದಾರೆ.ಒಂದು ಕೈಯಿಂದ ಕಿತ್ತು ಮತ್ತೊಂದು ಕೈಗೆ ನೀಡುವ ಮೂಲಕ ಸಿದ್ದರಾಮಯ್ಯ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

10 ದಿನಕ್ಕೆ 9 ಕೊಲೆ…!: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ.ಅಭಿವೃದ್ಧಿ ಕಾರ್ಯ ಮರಿಚೀಕೆಯಾಗಿದೆ,ದಲಿತರು ಮತ್ತು ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ.ದಿನ ಬೆಳಗಾದರೆ ಕೊಲೆಗಳಾಗುತ್ತಿವೆ,ಕಳೆದ 10 ದಿನಗಳಲ್ಲಿ 9 ಕೊಲೆಗಳಾಗಿದ್ದು ಯಾರ ಪ್ರಾಣಕ್ಕೂ ಗ್ಯಾರಂಟಿ ಇಲ್ಲದಂತಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಬಾಲರಾಜುಗೆ 1ಲಕ್ಷ ಮತಗಳ ಅಂತರದ ಗೆಲುವು!:
ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಶ್ರಮದಿಂದ ನಮ್ಮಅಭ್ಯರ್ಥಿ ಬಾಲರಾಜು ಒಂದು ಲಕ್ಷ ಮತಗಳ ಅಂತರದಿಂದ ಗೆದ್ದು ಬರುತ್ತಾರೆ ಆ ವಿಶ್ವಾಸ ನನಗಿದೆ,ಕ್ಷೇತ್ರದ ಜನತೆ ಅವರಿಗೆ ಆಶೀರ್ವಾದ ಮಾಡಬೇಕು ಎಂದು ವಿಜಯೇಂದ್ರ ಮನವಿ ಮಾಡಿದರು.

ಕಣ್ಣೀರಿಟ್ಟ ಬಾಲರಾಜು…!!:
ಅಭ್ಯರ್ಥಿ ಬಾಲರಾಜು ಮಾತನಾಡಿ, ಒಮ್ಮೆ ಶಾಸಕನಾಗಿದ್ದೆ. ಮೂರು ವರ್ಷಗಳ ಅಕಾರ ಮಾತ್ರವೇ ನನಗೆ ಸಿಕ್ಕಿತ್ತು. ಈಗ ಲೋಕಸಭೆಗೆ ಎನ್‍ಡಿಎ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿದ್ದೇನೆ. ಈ ಬಾರಿ ನನ್ನನ್ನು ಕೈ ಬಿಡಬೇಡಿ, ದೆಹಲಿಯಲ್ಲಿ ನಿಮ್ಮ ದನಿಯಾಗಿ ಕೆಲಸ ಮಾಡುತ್ತೇನೆ. ನಿಮ್ಮ ಕುಟುಂಬದಲ್ಲಿ ನನ್ನನ್ನು ಸದಸ್ಯನೆಂದು ಪರಿಗಣಿಸಿ ಅವಕಾಶಕೊಡಿ, ಇಂತಹ ಅವಕಾಶ ನನಗೆಂದೂ ಸಿಗದು, ಆಶೀರ್ವಾದ ಮಾಡಿ ಎಂದು ಗದ್ಗದಿತರಾಗಿ ಕಣ್ಣೀರು ಹಾಕಿದರು.

ಹನೂರು ಶಾಸಕ ಮಂಜುನಾಥ್, ಮಾಜಿ ಶಾಸಕ ಎಂ.ಅಶ್ವಿನ್ ಕುಮಾರ್, ಡಾ.ರೇವಣ್ಣ, ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಎಲ್ . ಆರ್.ಮಹದೇವಸ್ವಾಮಿ, ಮೈಮೂಲ್ ನಿರ್ದೇಶಕ ಅಶೋಕ್, ಜೆಡಿಎಸ್ ಕ್ಷೇತ್ರಾ ಧ್ಯಕ್ಷ ಚಿನ್ನಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಶಿವಕುಮಾರ್, ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ಎಂ.ರಾಮಚಂದ್ರ, ಉಪಾಧ್ಯಕ್ಷರಾದ ಹೆಳವರಹುಂಡಿ ಸಿದ್ದಪ್ಪ, ಗೂಳಿ ಮಹೇಶ್ ಪುರಸಭಾ ಸದಸ್ಯ ಕಿರಣ್ , ಸೊಸಲೆ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಪುಟ್ಟಸ್ವಾಮಿ, ವಿಚಾರವಾದಿ ಪ್ರಭುಸ್ವಾಮಿ, ತಾ.ಪಂ. ಮಾಜಿ ಸದಸ್ಯ ಚಂದ್ರಶೇಖರ್, ಎಂ ಶಿವಮೂರ್ತಿ, ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ರಘು ಕೌಟಿಲ್ಯ,ಜಿ.ಪಂ.ಮಾಜಿ ಸದಸ್ಯ ಸದಾನಂದ, ಕೆ.ಸಿ.ಲೋಕೇಶ್ ನಾಯಕ್,ಯುವ ಮೋರ್ಚಾ ಜಿಲ್ಲಾ ಧ್ಯಕ್ಷ ಸಾಮ್ರಾಟ್, ಗ್ರಾ.ಪಂ. ಉಪಾಧ್ಯಕ್ಷ ಕೈಯಂಬಳ್ಳಿ ಅಶೋಕ್, ಶಂಭು ದೇವಪುರ ರಮೇಶ್, ತಲಕಾಡು ಪವನ್ ಕುಮಾರ್, ದಯಾನಂದ್ ಪಟೇಲ್ ಮತ್ತಿತರರಿದ್ದರು.

RELATED ARTICLES

Latest News