Friday, July 19, 2024
Homeಇದೀಗ ಬಂದ ಸುದ್ದಿಸರ್ಕಾರದಿಂದ ರೈತರ ನಿರ್ಲಕ್ಷ್ಯ : ವಿಜಯೇಂದ್ರ ಕಿಡಿ

ಸರ್ಕಾರದಿಂದ ರೈತರ ನಿರ್ಲಕ್ಷ್ಯ : ವಿಜಯೇಂದ್ರ ಕಿಡಿ

ಮೈಸೂರು, ನ.20- ಬಿಜೆಪಿಯಲ್ಲಿ ಸದ್ಯದಲ್ಲೇ ಅಸಮಾಧಾನ ಸ್ಪೋಟಗೊಳ್ಳಲಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಎಲ್ಲಿ ಅಸಮಾಧಾನಗೊಳ್ಳಲಿದೆ ಎಂಬುದನ್ನು ಕಾದು ನೋಡಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕಾಂಗ ಸಭೆಯಲ್ಲಿ ಅನೇಕರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿ ದ್ದಾರೆ. ಸಣ್ಣ-ಪುಟ್ಟ ಸಮಸ್ಯೆ ಗಳಿದ್ದರೂ ಸರಿಪಡಿಸುವ ಕೆಲಸವನ್ನು ವರಿಷ್ಠರು ಮಾಡಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‍ನಲ್ಲೇ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸದ್ಯದಲ್ಲೇ ಸ್ಪೋಟಗೊಳ್ಳಲಿದೆ ಎಂದು ಅವರು ಭವಿಷ್ಯ ನುಡಿದರು.

ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ವರಿಷ್ಠರು ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಅಸಮಾಧಾನಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಿಮ್ಮ ಶಾಸಕರು ಅವರ ಕ್ಷೇತ್ರದಲ್ಲಿ ತಲೆಎತ್ತಿಕೊಂಡು ಓಡಾಡಲು ಆಗದಂತೆ ಮಾಡಿದ್ದೀರಿ. ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಇವರ ಸಾಧನೆಯಾಗಿದೆ. ಒಬ್ಬ ಸಚಿವರಾದರು ಅವರ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದಾರೆಂದು ಹೇಳಲಿ. ಬರದ ಬಗ್ಗೆ ಚರ್ಚೆ ಮಾಡಿದ್ದಾರೆಯೇ? ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ನಿರಂತರ ವಿದ್ಯುತ್ ನೀಡಲಾಗುತ್ತಿತ್ತು. ರೈತರ, ಬಡವರ ವಿರೋಧಿ ರಾಜ್ಯ ಸರ್ಕಾರವು ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ. ರಾಜ್ಯದ ಜನರು ಇವರಿಗೆ ಶಾಪ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ನೆರವೂ ಕಾಯದೇ ರಾಜ್ಯ ಸರ್ಕಾರ ಕೂಡಲೇ ಬರಪೀಡಿತ ತಾಲ್ಲೂಕುಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಿ ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಧಾವಿಸಬೇಕು. ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತವೆಂದು ಸರ್ಕಾರವೇ ಘೋಷಣೆ ಮಾಡಿದೆ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ 314 ಕೋಟಿ ಹಣವನ್ನು ಬಿಡುಗಡೆ ಮಾಡಿ ಸರ್ಕಾರ ಕೈತೊಳೆದುಕೊಂಡಿದೆ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡದಿರಲು ಸರ್ಕಾರವೇನು ದಿವಾಳಿಯಾಗಿದೆಯೇ ಎಂದು ಪ್ರಶ್ನಿಸಿದರು.

ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ಎದುರು ನೋಡದೆ, ರಾಜ್ಯ ಸರ್ಕಾರ ಮೊದಲು ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿ. ನಾವೇನು ಕರ್ನಾಟಕಕ್ಕೆ ಅನುದಾನ ಕೊಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗಾಗಲಿ, ಇಲ್ಲವೆ, ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದಿಲ್ಲ. ಸೂಕ್ತ ಕಾಲದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನವನ್ನು ಕೊಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ವೇಳೆ ಕಾಂಗ್ರೆಸ್ ಸಾಕಷ್ಟು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ,ಇವರ ಆಡಳಿತದಿಂದ ಜನ ನಿರಾಶರಾಗಿದ್ದು, ಆಕ್ರೋಶಗೊಂಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೋಡೆತ್ತುಗಳಂತೆ ಇದ್ದರು. ಈಗ ಹಾದಿ ಬೀದಿಯಲ್ಲಿ ಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆದಿದೆ. ಹಾಗೆಯೇ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಲು ಶಿವಕುಮಾರ್ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದರ ಬಗ್ಗೆ ನಮಗೆ ಯಾವ ಆಸಕ್ತಿಯೂ ಇಲ್ಲ. ಆದರೆ ರಾಜ್ಯದ ಜನರಿಗೆ ಏನು ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ಅವರ ಪ್ರವಾಸದ ವೇಳೆ ರೈತರನ್ನು ಪೊಲೀಸರು ವಶಕ್ಕೆ ಪಡೆದ ವಿಚಾರವಾಗಿ ಮಾತನಾಡಿದ ಅವರು ಸೌಜನ್ಯಕ್ಕೂ ಸಿದ್ದರಾಮಯ್ಯ ಭೇಟಿ ಮಾಡದೆ ಅಧಿಕಾರ ಬಳಸಿ ಬಂಧಿಸಿದ್ದಾರೆ. ಬರಗಾಲದ ವೇಳೆ ಆಡಳಿತ ಯಂತ್ರ ಕುಸಿದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ರೈತರಿಗೂ ಸ್ಪಂದಿಸುತ್ತಿಲ್ಲ. ಜಿಲ್ಲೆಯಲ್ಲಿ ಸರಿಯಾಗಿ ಕೆಲಸ ಆಗುತ್ತಿಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ವೈಖರಿ ಕಣ್ಣೀರು ತರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಚಿವ ಜಮೀರ್ ಅಹಮದ್ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಇದು ಹುಡುಗಾಟದ ಮಾತಲ್ಲ. ಜಮೀರ್ ಅಹಮದ್ ಅವರ ಮನದಾಳದ ಮಾತು. ನ್ಯಾಯದೇವತೆ ಎಂದು ಗೌರವ ಕೊಡುತ್ತೇವೆ. ಅದಕ್ಕೂ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಬೇರೆ ಸಿಎಂ ಆಗಿದ್ದರೆ ಜಮೀರ್ ರಾಜೀನಾಮೆ ತೆಗೆದುಕೊಳ್ಳುತ್ತಿದ್ದರು. ಆದರೆ, ಸರ್ಕಾರ ಈ ಹೇಳಿಕೆ ಖಂಡಿಸುವ ಕೆಲಸ ಸಹ ಮಾಡಿಲ್ಲ. ಜಮೀರ್ ಅಹಮದ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಇಷ್ಟ ಇದೆಯೋ, ಇಲ್ಲವೋ ಹೈಕಮಾಂಡ್ ನಿರ್ಧಾರವನ್ನು ಒಪ್ಪಬೇಕು : ಶ್ರೀರಾಮುಲು

ಸಚಿವ ಪ್ರಿಯಾಂಕ ಖರ್ಗೆ ಅಧಿಕಾರ ಶಾಶ್ವತ ಎಂಬ ಭ್ರಮೆಯಲ್ಲಿದ್ದಾರೆ. ಗೂಂಡಾಗಿರಿ ಕಲುಬುರುಗಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪ್ರಿಯಾಂಕ ತವರು ಜಿಲ್ಲೆಯಲ್ಲಿ ಗುಂಡಾಗಿರಿ ಹೆಚ್ಚಾಗಿದೆ. ಮಣಿಕಂಠ ರಾಥೋಡ್ ಮೇಲೆ ರಾಜಕೀಯ ಪುಡಾರಿಗಳಿಂದ ಹಲ್ಲೆ ನಡೆಸಲಾಗಿದೆ. ಅಧಿಕಾರದ ದರ್ಪದಿಂದ ಏನೇ ಮಾಡಿದರು ನಡೆಯುತ್ತದೆ ಅಂದುಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಹೇಳಿದರು.

ಅಧಿಕಾರದ ದರ್ಪದಿಂದ ಕಾಂಗ್ರೆಸ್‍ನವರು ರಾಜ್ಯದ ಅಭಿವೃದ್ಧಿ ಮರೆತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ಹಾಗೂ ಮುಂದಿನ ಎಲ್ಲಾ ಚುನಾವಣೆ ಒಗ್ಗಟ್ಟಾಗಿ ಒಂದಾಗಿ ಎದುರಿಸುತ್ತೇವೆ. ರಾಜ್ಯ ಸರ್ಕಾರದ ರುದ್ಧ ಬೇಸರಕ್ಕೆ ಪರ್ಯಾಯ ಬಿಜೆಪಿ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಮೈಸೂರು ಮತ್ತು ಮಂಡ್ಯ ಜಿಲ್ಲೆ ಪ್ರವಾಸ ಮಾಡಿದ್ದೇನೆ. ಮೈಸೂರು ಜಿಲ್ಲೆಗೂ ನನಗೂ ಅವಿನಾಭಾವ ಸಂಬಂಧವಿದೆ. ಬಿ.ವೈ. ವಿಯೇಂದ್ರರನ್ನು ಗುರುತಿಸಿ, ಶಾಸಕ ಆಗಲು ಭದ್ರ ಬುನಾದಿ ಹಾಕಿರುವುದು ವರುಣ ಕ್ಷೇತ್ರ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ರಾಜ್ಯಾದ್ಯಂತ ಪಕ್ಷ ಸಂಘಟನೆ ನನ್ನ ಮೊದಲ ಆದ್ಯತೆ. ಮುಂದಿನ ಲೋಕಸಭಾ ಚುನಾವಣೆ ಗಂಭೀರವಾಗಿ ತೆಗೆದುಕೊಂಡು 28ಕ್ಕೆ 28 ಕ್ಷೇತ್ರವನ್ನು ಗೆದ್ದು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ಬಿಜೆಪಿಗೆ ಕರ್ನಾಟಕ ದಕ್ಷಿಣ ಭಾರತದ ಭದ್ರಕೋಟೆ. ಕಳೆದ ಬಾರಿ ಚುನಾವಣೆ ನಮಗೆ ಹಿನ್ನಡೆಯಾಗಿದೆ. ಯಾವಾಗ ಚುನಾವಣೆ ಬಂದರೂ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಕಾರಕ್ಕೆ ತರುವ ಗುರಿ ಹೊಂದಬೇಕು.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಷ್ಟೇ ಮಹತ್ವ ಸ್ಥಳೀಯ ಸಂಸ್ಥೆಗೂ ನೀಡಲಾಗುವುದು. ಅದು ನಮ್ಮ ಕಾರ್ಯಕರ್ತರ ಚುನಾವಣೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದರು.

RELATED ARTICLES

Latest News