Wednesday, December 6, 2023
Homeರಾಜ್ಯರಾಜ್ಯದಲ್ಲಿ 3 ದಿನ ಮಳೆ ಸಾಧ್ಯತೆ

ರಾಜ್ಯದಲ್ಲಿ 3 ದಿನ ಮಳೆ ಸಾಧ್ಯತೆ

ಬೆಂಗಳೂರು, ನ.20- ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ದಿಂದ ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಹವಾಮಾನ ಮುನ್ಸೂಚನೆ ಪ್ರಕಾರ ಆಗಾಗ್ಗೆ ಬಲವಾದ ಮೇಲ್ಮೈ ಗಾಳಿ ಬೀಸಲಿದ್ದು, ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

ನವೆಂಬರ್ 22ರಿಂದ 24ರವರೆಗೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಇಲ್ಲವೆ ಮಧ್ಯಮ ಪ್ರಮಾಣದ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರ ಪರಿಣಾಮ ರಾಜ್ಯದ ಮೇಲೆ ಹೆಚ್ಚಾಗುವುದಿಲ್ಲ. ಆದರೆ, ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದೆ. ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ನೈರುತ್ಯ ಮುಂಗಾರಿನಂತೆ ಈಶಾನ್ಯ ಹಿಂಗಾರು ಮಳೆಯೂ ಕೈಕೊಟ್ಟಿದೆ. ಇತ್ತೀಚೆಗೆ ಹಿಂಗಾರು ಚೇತರಿಕೆ ಕಂಡು ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಿತ್ತು. ಆದರೆ, ಬಂಗಾಳ ಕೊಲ್ಲಿಯಲ್ಲಿ ಉಂಟಾಗಿದ್ದ ಚಂಡಮಾರುತದ ಪರಿಣಾಮದಿಂದ ಹಿಂಗಾರು ಕೂಡ ದುರ್ಬಲಗೊಂಡಿತ್ತು. ಹೀಗಾಗಿ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಒಣ ಹವೆ ಮುಂದುವರೆದಿದೆ.

ಹಿಂಗಾರು ಆರಂಭವಾಗುವ ಅಕ್ಟೋಬರ್‍ನಲ್ಲಿ ಶೇ.65ರಷ್ಟು ಮಳೆ ಕೊರತೆ ರಾಜ್ಯದಲ್ಲಿ ಉಂಟಾಗಿತ್ತು. ನವೆಂಬರ್‍ನಲ್ಲಿ ಈತನಕ ವಾಡಿಕೆಗಿಂತೆ ಹೆಚ್ಚಿನ ಮಳೆ ಬಿದ್ದ ಮಾಹಿತಿ ಇದೆ. ಆದರೆ, ಬೆಳೆಗೆ ಅನುಕೂಲವಾಗುವಂತೆ ಕಾಲಕಾಲಕ್ಕೆ ಮಳೆಯಾಗಿಲ್ಲ. 8-10 ದಿನಗಳ ಹಿಂದೆ ಕೆಲವೆಡೆ ಬಿದ್ದ ಭಾರಿ ಮಳೆಯಿಂದ ವಾಡಿಕೆಗಿಂತ ಹೆಚ್ಚು ಮಳೆಯಾದಂತಾಗಿದೆ ಅಷ್ಟೆ.

ಇಷ್ಟ ಇದೆಯೋ, ಇಲ್ಲವೋ ಹೈಕಮಾಂಡ್ ನಿರ್ಧಾರವನ್ನು ಒಪ್ಪಬೇಕು : ಶ್ರೀರಾಮುಲು

ಕಳೆದ ಒಂದು ವಾರದಿಂದಲ್ಲೂ ಒಣ ಹವೆ ಮುಂದುವರೆದಿದ್ದು, ಶೇ.95ರಷ್ಟು ಮಳೆ ಕೊರತೆ ಕಂಡುಬಂದಿದೆ. ಕೆಲವೆಡೆ ಮುಂಜಾನೆ ಮಂಜು ಕವಿಯುವ ವಾತಾವರಣ ಕಂಡುಬರುತ್ತಿದೆ. ರಾತ್ರಿ ವೇಳೆ ಚಳಿಯೂ ಹೆಚ್ಚಾಗುತ್ತಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜೂನ್‍ನಿಂದ ನಿನ್ನೆವರೆಗೆ ರಾಜ್ಯಲ್ಲಿ ವಾಡಿಕೆಗಿಂತ ಶೇ.27ರಷ್ಟು ಕಡಿಮೆ ಮಳೆಯಾಗಿದ್ದು, ರಾಜ್ಯದಲ್ಲಿ ಬರದ ವಾತಾವರಣ ಸೃಷ್ಟಿಯಾಗಿದೆ.

ಅಕ್ಟೋಬರ್‍ನಿಂದ ನಿನ್ನೆಯವರೆಗೆ ರಾಜ್ಯದಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ. ರಾಜ್ಯದಲ್ಲಿ ಶೇ. 39ರಷ್ಟು ಮಳೆ ಕೊರತೆ ಉಂಟಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.31ರಷ್ಟು, ಉತ್ತರ ಒಳನಾಡಿನಲ್ಲಿ ಶೇ.74 ಹಾಗೂ ಮಲೆನಾಡಿನಲ್ಲಿ ಶೇ.17ರಷ್ಟು ಮಳೆ ಕೊರತೆ ಉಂಟಾಗಿದೆ. ಸದ್ಯಕ್ಕೆ ಮಳೆ ಬಿಡುವು ಕೊಟ್ಟಿರುವುದರಿಂದ ಮುಂಗಾರು ಹಂಗಾಮಿನ ಕೊಯ್ಲು ಮಾಡುವಂತಹ ಭತ್ತ, ರಾಗಿ, ಶೇಂಗಾ ಮೊದಲಾದ ಬೆಳೆಗಳಿಗೆ ಅನುಕೂಲವಾಗಿದೆ.

ಆದರೆ, ಹಿಂಗಾರಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ತೇವಾಂಶವಿಲ್ಲದೆ ಒಣಗುತ್ತಿವೆ. ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ಹಿಂಗಾರು ಬೆಳೆ ಹೆಚ್ಚು ಬೆಳೆಯಲಾಗುತ್ತಿತ್ತು. ಈ ಬಾರಿಯ ಮಳೆಯ ಅಭಾವದಿಂದ ಮುಂಗಾರಿನಂತೆ ಹಿಂಗಾರು ಬೆಳೆಯೂ ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

RELATED ARTICLES

Latest News