ಬೆಂಗಳೂರು, ಅ.13- ತೀವ್ರ ಕುತೂಹಲ ಕೆರಳಿಸಿರುವ ಬೊಂಬೆ ನಾಡು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾದ ಬಳಿಕ ಜೆಡಿಎಸ್ ಅಭ್ಯರ್ಥಿ ಹೆಸರನ್ನು ಪ್ರಕಟಿಸಲಾಗುತ್ತದೆ. ಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯವಾಗಿ ಭಾರಿ ಸದ್ದು ಮಾಡುತ್ತಿರುವ ಹಾಗೂ ತೀವ್ರಾ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ಕಾಂಗ್ರೆಸ್- ಜೆಡಿಎಸ್ ನಡುವಿನ ಚುನಾವಣೆ ಸಿದ್ಧತೆ ಬಿರುಸಾಗಿದೆ. ಎರಡೂ ಪಕ್ಷಗಳು ಈ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿವೆ. ಹೀಗಾಗಿ ಈ ಕ್ಷೇತ್ರ ರಾಷ್ಟ್ರದ ಗಮನ ಸೆಳೆಯುತ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದಲ್ಲಿ ಪದೇ ಪದೇ ಪ್ರವಾಸ ಕೈಗೊಂಡು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದಿದ್ದಾರೆ.
ಈ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂದು ನಿರ್ಧರಿಸಿದ್ದರೂ ಬಹಿರಂಗಪಡಿಸಿಲ್ಲ. ಅಭ್ಯರ್ಥಿ ಆಯ್ಕೆ ಕುರಿತಂತೆ ಬಿಜೆಪಿ ವರಿಷ್ಠರೊಂದಿಗೆ ಸಮಾಲೋಚಿಸಿದ ಬಳಿಕ ಪಕ್ಷದ ಅಭ್ಯರ್ಥಿ ಪ್ರಕಟಿಸಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಚನ್ನಪಟ್ಟಣ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹೆಚ್.ಸಿ.ಜಯಮುತ್ತು ಅವರ ಹೆಸರು ಈ ಉಪಚುನಾವಣೆಯ ಅಭ್ಯರ್ಥಿ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದೆ. ಸ್ಥಳೀಯರಿಗೆ ಅವಕಾಶ ಮಾಡಿಕೊಟ್ಟರೆ ಅವರು ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ. ಆದರೆ,ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಅವರನ್ನು ಈ ಉಪ ಚುನಾವಣೆಯಲ್ಲಿ ಕಣಕ್ಕಿಳಿಸಬೇಕು ಎಂಬ ಒತ್ತಡವನ್ನು ಕುಮಾರಸ್ವಾಮಿ ಅವರ ಮೇಲೆ ಪದೇ ಪದೇ ತರುತ್ತಿದ್ದಾರೆ.3
ಜೆಡಿಎಸ್ ಪ್ರತಿನಿಧಿಸಿದ್ದ ಚನ್ನಪಟ್ಟಣ ಕ್ಷೇತ್ರವನ್ನು ಪಕ್ಷವೇ ಉಳಿಸಿಕೊಳ್ಳಬೇಕು ಮತ್ತು ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನೇ ಸ್ಪರ್ಧೆಗಿಳಿಸಬೇಕು ಎಂಬ ಒತ್ತಾಯವನ್ನು ಮಾಡಿದ್ದಾರೆ. ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಕಣಕ್ಕಿಳಿಯಲಿದ್ದು, ಆ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸುವಂತೆ ಕುಮಾರಸ್ವಾಮಿ ಕರೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರು ಉಪ ಚುನಾವಣೆಯ ಸ್ಪರ್ಧಾಕಾಂಕ್ಷಿಯಾಗಿದ್ದಾರೆ. ಅವರು ಬಿಜೆಪಿ ಚಿಹ್ನೆಯಡಿ ಸ್ಪರ್ಥಿಸಲು ಆಸಕ್ತಿ ತೋರಿದ್ದಾರೆ. ಆದರೆ, ಬಿಜೆಪಿ ಬದಲಾಗಿ ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸುವ ಅವಕಾಶ ಮಾಡಿಕೊಡುವುದಾಗಿ ಜೆಡಿಎಸ್ ಹೇಳಿದೆ. ಇದಕ್ಕೆ ಯೋಗೇಶ್ವರ್ ಒಲವು ತೋರಿಲ್ಲ. ಹೀಗಾಗಿ ಚನ್ನಪಟ್ಟಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಆಯ್ಕೆ ವಿಳಂಬವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಂಡೂರು, ಶಿಗ್ಗಾವಿ, ಚನ್ನಪಟ್ಟಣ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದ್ದು, ಸದ್ಯದಲ್ಲೇ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಈ ಮೂರು ಕ್ಷೇತ್ರಗಳ ಪೈಕಿ ಸಂಡೂರು, ಶಿಗ್ಗಾವಿಯಲ್ಲಿ ಬಿಜೆಪಿ ಹಾಗೂ ಚನ್ನಪಟ್ಟಣದಲ್ಲಿ ಜೆಡಿಎಸ್ ಸ್ಪರ್ಧಿಸಲು ನಿರ್ಧರಿಸಿವೆ. ಇನ್ನೊಂದು ವಾರದಲ್ಲಿ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ. ಈಗಾಗಲೇ ಕುಮಾರಸ್ವಾಮಿ ಅವರು ಪಕ್ಷದ ಕಾರ್ಯಕರ್ತರ ಭಾವನೆಗೆ ಅನುಗುಣವಾಗಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಹೀಗಾಗಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವುದು ಖಚಿತವಾಗಿದೆ. ಆದರೆ, ಅಭ್ಯರ್ಥಿ ಯಾರೆಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೂ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಪರಿಗಣಿಸಿದರೆ, ನಿಖಿಲ್ ಕುಮಾರಸ್ವಾಮಿ ಅವರು ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚು. ಆದರೆ, ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಪದೇ ಪದೇ ಸ್ಪಷ್ಟಪಡಿಸಿದ್ದಾರೆ. ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಯಾರೆಂಬ ಕುತೂಹಲ ತೀವ್ರವಾಗಿದೆ. ಜೆಡಿಎಸ್ ಕೊನೆ ಕ್ಷಣದಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಸ್ಪರ್ಧೆಗಿಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ…