Thursday, December 12, 2024
Homeರಾಜಕೀಯ | Politicsಚನ್ನಪಟ್ಟಣ 'ರಾಜಕೀಯ ಬೊಂಬೆಯಾಟ' : ಯೋಗೀಶ್ವರ್ ನಡೆಯತ್ತ ಎಲ್ಲರ ಚಿತ್ತ

ಚನ್ನಪಟ್ಟಣ ‘ರಾಜಕೀಯ ಬೊಂಬೆಯಾಟ’ : ಯೋಗೀಶ್ವರ್ ನಡೆಯತ್ತ ಎಲ್ಲರ ಚಿತ್ತ

Channapatna Political Game : Everyone's eue on Yogeshwar's move

ಬೆಂಗಳೂರು,ಅ.22- ರಾಜಕೀಯವನ್ನೇ ಉಂಡೆದ್ದು ಮಲಗಿ, ಸೇಡಿನ ರಾಜಕೀಯಕ್ಕೆ ಹೆಸರುವಾಸಿ ಯಾಗಿರುವ ಒಕ್ಕಲಿಗರ ಭಧ್ರಕೋಟೆ ರಾಮನಗರ ಜಿಲ್ಲೆಯ ಬೊಂಬೆನಾಡಿನ ಖ್ಯಾತಿಯ ಚನ್ನಪಟ್ಟಣ ಇದೀಗ ಬದಲಾದ ಪರಿಸ್ಥಿತಿಯಲ್ಲಿ ಮತ್ತೊಮೆ ಮೂರನೇ ಬಾರಿ ಉಪಚುನಾವಣೆ ಎದುರಾಗಿದೆ.

ಈ ಹಿಂದೆ ನಡೆದಿದ್ದ ಎರಡು ಉಪಚುನಾಣೆಯಲ್ಲಿ ಒಮೆ ಜೆಡಿಎಸ್ ಹಾಗೂ ಮತ್ತೊಮೆ ಬಿಜೆಪಿ ಜಯಿಸಿತ್ತು. ಆದರೆ, ಈ ಬಾರಿ ಎನ್ಡಿಎ ಮೈತ್ರಿ ಹಿನ್ನೆಲೆಯಲ್ಲಿ ಈ ಎರಡೂ ಪಕ್ಷಗಳೇ ಕ್ಷೇತ್ರದ ಟಿಕೆಟ್ಗಾಗಿ ಪರಸ್ಪರ ಪೈಪೋಟಿ ನಡೆಸುವ ಪರಿಸ್ಥಿತಿ ಎದುರಾಗಿದೆ.

ಮಂಡ್ಯ ಲೋಕಸಭಾ ಚುನಾವಣೆಯ ಗೆಲುವು ಸಾಧಿಸಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ 3ನೇ ಬಾರಿ ಉಪಚುನಾವಣೆ ಎದುರಾಗಿದೆ. ಮೊದಲ ಎರಡು ಉಪಚುನಾವಣೆಯಲ್ಲಿ ಎದುರಾಳಿ ಪಕ್ಷಗಳಾಗಿ ಸೆಣಸಾಡಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳಾಗಿದ್ದು, ಟಿಕೆಟ್ ಬಿಕ್ಕಟ್ಟು ಎದುರಾಗಿದೆ.

ಜೆಡಿಎಸ್ ಗೆಲುವು ಸಾಧಿಸಿದ್ದ ಕ್ಷೇತ್ರವನ್ನು ಪಕ್ಷಕ್ಕೆ ಉಳಿಸಿಕೊಳ್ಳಬೇಕು ಎಂಬ ಇರಾದೆ ಕುಮಾರಸ್ವಾಮಿ ಅವರದ್ದಾದರೆ, ಕ್ಷೇತ್ರದಲ್ಲಿ ತಮದೇ ಆದ ಪ್ರಾಬಲ್ಯ ಹೊಂದಿರುವ ಯೋಗೇಶ್ವರ್ ಕ್ಷೇತ್ರವನ್ನು ಶತಾಯಗತಾಯ ಉಳಿಸಿಕೊಳ್ಳಲೇಬೇಕು ಎಂದು ಹರಸಾಹಸ ಪಡುತ್ತಿದ್ದಾರೆ. ವಿಧಾನಪರಷತ್ ಸದಸ್ವತ್ವಕ್ಕೆ ರಾಜೀನಾಮೆ ನೀಡಿರುವ ಅಭಿಮಾನಿಗಳ ಪಾಲಿನ ಸೈನಿಕನ ನಡೆಯನ್ನು ಕ್ಷೇತ್ರದ ಜನತೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಈ ಹಿಂದೆ 2009, 2011ರಲ್ಲಿ ಎರಡು ಬಾರಿ ಉಪ ಚುನಾವಣೆ ಎದುರಾಗಿತ್ತು. 2009ರ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದರೆ, 2011ರಲ್ಲಿ ಕ್ಷೇತ್ರವನ್ನು ಬಿಜೆಪಿ ವಶಪಡಿಸಿಕೊಂಡಿತ್ತು. 2008 ರಲ್ಲಿ ನಡೆದಿದ್ದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆದ್ದು ಶಾಸಕರಾಗಿದ್ದ ಸಿ.ಪಿ.ಯೋಗೇಶ್ವರ್ 2009ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ತಮ ಶಾಸಕರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಬಳಿಕ 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಿ ಯೋಗೇಶ್ವರ್ ಸೋಲು ಅನುಭವಿಸಿದ್ದರು.

ಅದೇ ವರ್ಷ ನಡೆದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ನಿಂದ ಎಂ.ಸಿ.ಅಶ್ವತ್, ಕಾಂಗ್ರೆಸ್ನಿಂದ ಟಿ.ಕೆ.ಯೋಗೇಶ್, ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸಿದ್ದರು. ಇಲ್ಲಿ ಎಂ.ಸಿ.ಅಶ್ವತ್ ತಮ ಸಮೀಪದ ಪ್ರತಿಸ್ಪರ್ಧಿ ಸಿ.ಪಿ.ಯೋಗೇಶ್ವರ್ ವಿರುದ್ಧ ಜಯ ಗಳಿಸಿದ್ದರು. ಇದರಿಂದಾಗಿ ಮೊದಲ ಉಪಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿತ್ತು.

2011ರಲ್ಲಿ ಅರಳಿದ ಕಮಲ: ಜೆಡಿಎಸ್ನಿಂದ ಆಯ್ಕೆ ಆಗಿದ್ದ ಎಂ.ಸಿ.ಅಶ್ವತ್ 2011ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದರು. ಇದರಿಂದಾಗಿ ಎದುರಾದ ಮತ್ತೊಂದು ಉಪಚುನಾವಣೆಯಲ್ಲಿ ಜೆಡಿಎಸ್ನಿಂದ ನಾಗರಾಜ್, ಕಾಂಗ್ರೆಸ್ನಿಂದ ರಘುನಂದನ್ ರಾಮಣ್ಣ ಹಾಗೂ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಯೋಗೇಶ್ವರ್ ಗೆಲುವು ಸಾಧಿಸಿದ್ದು, ತಾಲೂಕಿನಲ್ಲಿ ಮೊದಲ ಬಾರಿ ಬಿಜೆಪಿ ಅರಳಿತ್ತು.

ಗೌಡರ ನಡುವೆ ಕಾಳಗ: ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂದು ಎಚ್ಡಿಕೆ, ಈ ಕ್ಷೇತ್ರವನ್ನು ಕಬ್ಜಾ ಮಾಡಿಕೊಂಡು ಜಿಲ್ಲೆಯಿಂದ ಎಚ್. ಡಿ.ದೇವೇಗೌಡರ ಕುಟುಂಬವನ್ನು ಹೊರಗಿಡಬೇಕು ಎಂದು ಡಿ.ಕೆ.ಶಿವಕುಮಾರ್ ಪಣತೊಟ್ಟಿದ್ದು, ರಾಜ್ಯದ ಎರಡು ಪ್ರತಿಷ್ಟಿತ ಗೌಡರ ಕುಟಂಬಗಳ ನಡುವಿನ ಕಾದಾಟಕ್ಕೆ ವೇದಿಕೆ ಸಜ್ಜಾಗುತ್ತಿದೆ.

ಚನ್ನಪಟ್ಟಣದ ಉಪ ಚುನಾವಣೆ ಗೆಲ್ಲುವುದು ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರಿಗೂ ಅಸ್ತಿತ್ವದ ಪ್ರಶ್ನೆಯಾಗಿದೆ. ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವರಾಗಿರುವ ಕುಮಾರಸ್ವಾಮಿ ತಾವು ಪ್ರತಿನಿಧಿಸಿದ್ದ ವಿಧಾನಸಭಾ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ತನ್ನ ರಾಜಕೀಯ ವೈರಿಗೆ ಬಿಟ್ಟುಕೊಡುವುದಿಲ್ಲ. ಇನ್ನು ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ್ ಚನ್ನಪಟ್ಟಣವನ್ನು ಬಿಟ್ಟುಕೊಟ್ಟರೆ ತಮ ಹಿನ್ನಡೆಯನ್ನು ತಾವೇ ಘೋಷಿಸಿಕೊಂಡಂತೆ. ಹೀಗಾಗಿ ಇಬ್ಬರು ನಾಯಕರ ಕಾದಾಟಕ್ಕೆ ಚನ್ನಪಟ್ಟಣ ರಣಾಂಗಣವಾಗಿದೆ.

ಮಾಜಿ ಪ್ರಧಾನಿ ದೇವೇಗೌಡ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ನಡುವಿನ ರಾಜಕೀಯ ಸಂಘರ್ಷಕ್ಕೆ 40 ವರ್ಷಗಳ ಇತಿಹಾಸವಿದೆ. 1985ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಇಬ್ಬರು ಮುಖಾಮುಖಿಯಾಗಿದ್ದರು. 1999ರಲ್ಲಿ ಡಿಕೆಶಿ- ಎಚ್ಡಿಕೆ ಸಾತನೂರಿನಲ್ಲಿ ಮುಖಾಮುಖೀಯಾಗಿದ್ದರು. ಇನ್ನು 2002 ಕನಕಪುರ ಲೋಕಸಭಾ ಉಪಚುನಾವಣೆ ಎಚ್ಡಿಡಿ-ಡಿಕೆಶಿ ನಡುವಿನ ಸಂಘರ್ಷವಾಗಿತ್ತು. 2007ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಾತನೂರಿನಲ್ಲಿ ನಡೆಸಿದ ಕಾರ್ಯಕ್ರಮ ಇವರಿಬ್ಬರ ನಡುವಿನ ರಾಜಕೀಯ ಕಾದಾಟಕ್ಕೆ ಅಗ್ನಿಕುಂಡವಾಗಿತ್ತು. ಇದೀಗ ಮತ್ತೆ ಚನ್ನಪಟ್ಟಣದಲ್ಲಿ ಅದು ಮುಂದುವರಿದಿದೆ.

ಚನ್ನಪಟ್ಟಣ ಕೋಟೆಗೆ ಲಗ್ಗೆ ಇಡುವ ಮೂಲಕ ಡಿ.ಕೆ.ಶಿವ ಕುಮಾರ್ ಒಕ್ಕಲಿಗರ ಕೋಟೆಯಲ್ಲಿ ಎಚ್.ಡಿ.ಕುಮಾರಸ್ವಾಮಿಯನ್ನು ಮಣಿಸಲು ಚಕ್ರವ್ಯೂಹ ಹಣೆದಿದ್ದಾರೆ. ಚನ್ನಪಟ್ಟಣವನ್ನು ಕಳೆದುಕೊಂಡರೆ ಬಿಜೆಪಿ ರಾಷ್ಟ್ರನಾಯಕರಲ್ಲಿ ಕುಮಾರಸ್ವಾಮಿ ಬಗ್ಗೆ ಮೂಡಿರುವ ಒಕ್ಕಲಿಗರ ಅಧಿನಾಯಕ ಎಂಬ ಇಮೇಜ್ಗೆ ಧಕ್ಕೆ ಬರುತ್ತದೆ.

ಮಾಜಿ ಪ್ರಧಾನಿಯ ಮಗ, ಅವರ ಉತ್ತರಾಧಿಕಾರಿ ಎಂದು ದೆಹಲಿಯಲ್ಲಿ ಬಿಂಬಿಸಿಕೊಂಡಿರುವ ಕುಮಾರಸ್ವಾಮಿ, ಈ ಇಮೇಜ್ ಕಳೆದುಕೊಳ್ಳಲು ಸಿದ್ಧವಿಲ್ಲ. ಹೀಗಾಗಿ, ಚನ್ನಪಟ್ಟಣದಲ್ಲಿ ತನ್ನೆಲ್ಲ ಶಕ್ತಿಯನ್ನು ಕೋಢಿಕರಿಸುವ ಜತೆಗೆ ಗೆಲ್ಲಿಸಬಲ್ಲ ಜಾಕಿಯನ್ನು ಕಣಕ್ಕಿಳಿಸಿ ಡಿಕೆಶಿ ರಚಿಸಿದ ಚಕ್ರವ್ಯೂಹವನ್ನು ಯಶಸ್ವಿಯಾಗಿ ಭೇದಿಸಬಲ್ಲ ಸೇನಾನಿ ಎಚ್ಡಿಕೆಗೆ ಅಗತ್ಯವಿದೆ.

ಕೈ ಪಾಳಯಕ್ಕೆ ಬಂಡೆಯೇ ಬಲ: 2009ರಲ್ಲಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿದ ಬಳಿಕ ಚನ್ನಪಟ್ಟಣದಲ್ಲಿ ಸಮರ್ಥ ನಾಯಕನನ್ನು ಬೆಳೆಸುವಲ್ಲಿ ಡಿ.ಕೆ.ಶಿವಕುಮಾರ್ ವಿಫಲಗೊಂಡಿದ್ದಾರೆ. ಯೋಗೇಶ್ವರ್ ಕಾಂಗ್ರೆಸ್ ಬಿಟ್ಟುಹೋದ ಬಳಿಕ ನಡೆದಿರುವ 3 ಸಾರ್ವತ್ರಿಕ ಚುನಾವಣೆ, ಎರಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಠೇವಣಿ ಉಳಿಸಿಕೊಂಡಿಲ್ಲ. ಒಂದೊಂದು ಚುನಾವಣೆಯಲ್ಲಿ ಒಬ್ಬೊಬ್ಬ ನಾಯಕನನ್ನು ಕಣಕ್ಕಿಳಿಸುತ್ತಾ ಬಂದಿರುವ ಪರಿಣಾಮ ಚನ್ನಪಟ್ಟಣದಲ್ಲಿ ಯಾರೂ ಸಂಘಟನಾತಕವಾಗಿ ಕೆಲಸ ಮಾಡಿಲ್ಲ.

RELATED ARTICLES

Latest News