ಚಿಕ್ಕಬಳ್ಳಾಪುರ,ಜ.4– ಜೆಡಿಎಸ್ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಮಚ್ಚು ಲಾಂಗುಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ತಮನಾಯಕನಹಳ್ಳಿ ಗೇಟ್ ಬಳಿ ರಾತ್ರಿ ನಡೆದಿದೆ. ವೆಂಕಟೇಶ್ (50) ಕೊಲೆಯಾದ ಜೆಡಿಎಸ್ ಮುಖಂಡ.
ಮೃತ ವೆಂಕಟೇಶ್ ಕಳೆದ ರಾತ್ರಿ 10 ಗಂಟೆ ಸುಮಾರಿನಲ್ಲಿ ಸ್ವಗ್ರಾಮ ತಮನಾಯಕನಹಳ್ಳಿಯಿಂದ ಔಷಧಿ ಕೊಳ್ಳಲು ಎಲೆಕ್ಟ್ರಿಕ್ ಬೈಕ್‌ನಲ್ಲಿ ತಮನಾಯಕನಹಳ್ಳಿ ಗೇಟ್ ಬಳಿಯ ಮೆಡಿಕಲ್ ಸ್ಟೋರ್‌ಗೆ ಬಂದು ಔಷಧಿ ಕೊಂಡು ವಾಪಸ್ಸು ತೆರಳುತ್ತಿದ್ದಾಗ ಸುಮಾರು ನಾಲ್ಕೈದು ದುಷ್ಕರ್ಮಿಗಳು ಅವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಮಚ್ಚು,ಲಾಂಗ್‌ಗಳಿಂದ ಕೊಚ್ಚಿ ಬೀಕರ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ವೆಂಕಟೇಶ್ ಅವರನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸುದ್ದಿ ತಿಳಿದ ಕೂಡಲೇ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೊಲೆಯನ್ನು ಯಾವ ಕಾರಣಕ್ಕಾಗಿ ಮಾಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ತನಿಖೆಯಿಂದಷ್ಟೇ ಕೊಲೆಗೆ ಕಾರಣ ಗೊತ್ತಾಗಲಿದೆ.
ತಾಲೂಕು ಜೆಡಿಎಸ್ ಮುಖಂಡ ವೆಂಕಟೇಶ್ ಕೊಲೆ ಪ್ರಕರಣವನ್ನು ಜಾತ್ಯತೀತ ಜನತಾದಳ ಪಕ್ಷದ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ತೀವ್ರವಾಗಿ ಖಂಡಿಸಿದ್ದಾರೆ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡು ಕೊಲೆಗಾರರನ್ನು ಹಿಡಿದು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅದೇ ರೀತಿ ಜಾತ್ಯಾತೀತ ಜನತಾದಳ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ ಸಹ ಜೆಡಿಎಸ್ ಮುಖಂಡ ಎನ್.ವೆಂಕಟೇಶ್ ಅವರ ಕೊಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದು, ಹಂತಕರ ಪತ್ತೆಗೆ ಪೊಲೀಸರು ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.