Saturday, May 4, 2024
Homeರಾಜ್ಯದ್ವಾರಕೀಶ್ ಚಿತ್ರರಂಗ ಸೇವೆ ಅಪಾರವಾದದ್ದು : ಸಿಎಂ ಸಿದ್ದರಾಮಯ್ಯ

ದ್ವಾರಕೀಶ್ ಚಿತ್ರರಂಗ ಸೇವೆ ಅಪಾರವಾದದ್ದು : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಏ.17- ನಟ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್ ಅವರ ನಿಧನ ಇಡೀ ಕನ್ನಡಿಗರಿಗೆ ಬಹಳ ನೋವುಂಟು ಮಾಡಿದ್ದು, ನನಗೂ ನೋವುಂಟು ಮಾಡಿದೆ. ಅವರ ಅಗಲುವಿಕೆಯಿಂದ ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್ ಅಪಾರ ಕೊಡುಗೆ ನೀಡಿದ್ದಾರೆ. ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ದ್ವಾರಕೀಶ್ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಅದನ್ನು ಮರೆಯಲು ಸಾಧ್ಯವಿಲ್ಲ. ಹಾಸ್ಯನಟರಾಗಿ ಅಷ್ಟೆ ಅಲ್ಲ, ನಾಯಕ ನಟರಾಗಿ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಡಾ.ರಾಜ್ ಕುಮಾರ್ ಮತ್ತು ದ್ವಾರಕೀಶ್ ಅವರ ಜೋಡಿ ಚೆನ್ನಾಗಿತ್ತು.

ವಿಷ್ಣುವರ್ಧನ್, ಅಂಬರೀಶ್ ಜೊತೆ ಕೆಲಸ ಮಾಡಿದ್ದರು, ಚಿತ್ರರಂಗದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದ್ದರು. ಎಷ್ಟೆ ಕಷ್ಟ ಬಂದರೂ ಸಹಿಸಿಕೊಂಡು ಚಿತ್ರರಂಗ ಬೆಳೆಯಲು ಅಪಾರ ಕೊಡುಗೆ ನೀಡಿದ್ದರು ಎಂದರು.ಎಲ್ಲಕ್ಕಿಂತ ಮುಖ್ಯವಾಗಿ ಅವರು ನಮ್ಮ ಊರಿನವರು, ಮೈಸೂರಿನವರು, ಹುಣಸೂರಿನಲ್ಲಿ ಹುಟ್ಟಿ, ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದವರು.

ಮೈಸೂರು ಕಂಡರೆ ಅವರಿಗೆ ಹೆಚ್ಚು ಪ್ರೀತಿ ಇತ್ತು. ನಾನು ಅವರು ಒಮ್ಮೆ ಬೆಂಗಳೂರಿನಿಂದ ಹೆಲಿಕಾಫ್ಟರ್‍ನಲ್ಲಿ ಮೈಸೂರಿಗೆ ಹೋಗಿದ್ದೇವು. ಅಲ್ಲಿ ರೇಸ್ ಕೋರ್ಸ್‍ನಲ್ಲಿ ಇಳಿದಿದ್ದೇವು. ದಾರಿಯುದ್ದಕ್ಕೂ ಸಿನಿಮಾ, ರಾಜಕೀಯ, ಸಾಮಾಜಿಕ ವಿಚಾರಗಳು ಸೇರಿ ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದೇವು. ಕನ್ನಡದ ಸೇವೆ ಮಾಡಿದ ಅಪರೂಪದ ನಟ ಎಂದು ಕೊಂಡಾಡಿದರು.

ಮರಣಾನಂತರ ನೇತ್ರದಾನ ಮಾಡಿರುವುದು ಶ್ಲಾಘನೀಯ, ಸತ್ತ ಮೇಲೂ ಸಾಮಾಜಿಕ ಸೇವೆ ಮಾಡಿರುವ ಅವರು ಮಾದರಿಯಾಗಿದ್ದಾರೆ. ಅವರ ನಿಧನದಿಂದ ಕನ್ನಡ ಚಿತ್ರರಂಗ ಬಹಳ ಬಡವಾಗಿದೆ. ಧರ್ಮಪತ್ನಿ ಕಾಲವಾದ ದಿನವೇ ದ್ವಾರಕೀಶ್ ನಿಧನರಾಗಿದ್ದಾರೆ. ಇಬ್ಬರ ಆತ್ಮಕ್ಕೂ ಶಾಂತಿ ಸಿಗಲಿಲ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

RELATED ARTICLES

Latest News