Friday, May 24, 2024
Homeಮನರಂಜನೆಕನ್ನಡದ ಹೆಮ್ಮೆಯ ನಟ, ಪ್ರಚಂಡ ಕುಳ್ಳ ಪಂಚಭೂತಗಳಲ್ಲಿ ಲೀನ

ಕನ್ನಡದ ಹೆಮ್ಮೆಯ ನಟ, ಪ್ರಚಂಡ ಕುಳ್ಳ ಪಂಚಭೂತಗಳಲ್ಲಿ ಲೀನ

ಬೆಂಗಳೂರು, ಏ.17- ನಿನ್ನೆ ಇಹಲೋಹ ತ್ಯಜಿಸಿದ ಕನ್ನಡ ಚಿತ್ರರಂಗದ ಮೇರು ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರ ಅಂತ್ಯ ಸಂಸ್ಕಾರ ಇಂದು ಅಪಾರ ಅಭಿಮಾನಿಗಳ, ಕಲಾವಿದರ ಅಶ್ರು ತರ್ಪಣದ ನಡುವೆ ನಗರದ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಪೊಲೀಸ್ ಗೌರವಗಳೊಂದಿಗೆ ನೆರವೇರಿತು.

ದ್ವಾರಕೀಶ್ ಅವರ ಹಿರಿಯ ಪುತ್ರ ಯೋಗೀಶ್ ಅವರು ಅಂತಿಮ ವಿವಿಧಾನ ನೆರವೇರಿಸಿದರು. ಇದಕ್ಕೂ ಮುನ್ನ ಬೆಳಗ್ಗೆ 8.30ರಿಂದ 11.30ರವರೆಗೆ ಟೌನ್‍ಹಾಲ್ ಬಳಿ ಇರುವ ರವೀಂದ್ರ ಕಲಾಕ್ಷೇತ್ರದಲ್ಲಿ ದ್ವಾರಕೀಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಅನಂತರ ನಗರದ ಟಿಆರ್ ಮಿಲ್ ಬಳಿ ಇರುವ ರುದ್ರಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಶಿವರಾಜ್ ತಂಗಡಗಿ, ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್, ನಾಯಕ ನಟರಾದ ಡಾ. ಶಿವರಾಜ್ ಕುಮಾರ್, ಯಶ್, ದರ್ಶನ್, ಧ್ರುವಸರ್ಜಾ, ಮೇಘನಾರಾಜ್, ಸುಂದರ್‍ರಾಜ್, ಹಂಸಲೇಖ, ರವಿಚಂದ್ರನ್, ಜಗ್ಗೇಶ್, ನಟಿ ಶ್ರುತಿ, ಹಿರಿಯ ನಟರಾದ ಶ್ರೀನಿನಾಥ್, ಶ್ರೀನಿವಾಸ್‍ಮೂರ್ತಿ, ನಿರ್ಮಾಪಕ ಕೆ. ಮಂಜು, ಉಮೇಶ್ ಬಣಕಾರ್, ಸಂಗೀತ ನಿದೇರ್ಶಕ ಗುರುಕಿರಣ್, ಕಿರುತೆರೆ ಕಲಾವಿದರು, ಸ್ಯಾಂಡಲ್‍ವುಡ್ ನಟನಟಿಯರು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಆಗಮಿಸಿ ಅಗಲಿದ ನಟನಿಗೆ ಅಂತಿಮ ನಮನ ಸಲ್ಲಿಸಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಬೆಳಗಿನ ಚಿತ್ರಪ್ರದರ್ಶನ ರದ್ದು: ದ್ವಾರಕೀಶ್ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಗೌರವವಾಗಿ ಇಂದು ಎಲ್ಲಾ ಸಿಂಗಲ್ ಸ್ಕ್ರೀನ್ ಚಿತ್ರಗಳ ಬೆಳಗಿನ ಪ್ರದರ್ಶನವನ್ನು ರದ್ದು ಪಡಿಸಲಾಗಿತ್ತು. ದ್ವಾರಕೀಶ್ ಅವರು ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆ ಸ್ಮರಿಸಲು ಚಿತ್ರರಂಗ ಈ ಮೂಲಕ ಗೌರವ ನೀಡಿದೆ.

ಕರ್ನಾಟಕದ ಪ್ರಚಂಡ ಕುಳ್ಳ ಎಂದೇ ಖ್ಯಾತರಾಗಿದ್ದ ಹಿರಿಯ ನಟ ದ್ವಾರಕೀಶ್ ಅವರು. ಡಾ. ರಾಜ್‍ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಬಾಲಕೃಷ್ಣ, ಅಶ್ವತ್ಥ್ ಸೇರಿದಂತೆ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ಅಭಿನಯಿಸಿದ್ದರು. 64ರಲ್ಲಿ ಚಲನಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿ 40ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿ 15ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದರು.

RELATED ARTICLES

Latest News